ಗುರುವಾರ , ಏಪ್ರಿಲ್ 22, 2021
27 °C

ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಸರ್ವ ಶಿಕ್ಷಣ ಅಭಿಯಾನದಡಿ ಬಿಡುಗಡೆಯಾಗುವ ಅನುದಾನ ಜಿಲ್ಲೆಯಲ್ಲಿ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ಸಾಕಷ್ಟು ಆರೋಪಗಳಿವೆ. ಹಣ ದುರ್ಬಳಕೆ ಬಗ್ಗೆ ಹಲವಾರು ಸಂಘಟನೆಗಳು ದಾಖಲೆಗಳ ಸಮೇತ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರುಗಳನ್ನು ಸಹ ನೀಡಿದ್ದಾರೆ.ಆದರೆ, ಬ್ಲಾಕ್ ಅನುಷ್ಠಾನ ಸಮಿತಿ (ಬಿಐಸಿ) ಅಧ್ಯಕ್ಷರೂ ಆಗಿರುವ ಜಿಲ್ಲೆಯ ಶಾಸಕರ ಗಮನಕ್ಕೆ ತಾರದೇ ಲಕ್ಷಾಂತರ ರೂಪಾಯಿಗಳನ್ನು ಎಸ್‌ಡಿಎಂಸಿ ಖಾತೆಗೆ ಜಮಾ ಮಾಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ತಮ್ಮ ಗಮನಕ್ಕೆ ತರದೇ ಲಕ್ಷಾಂತರ ರೂಪಾಯಿಗಳನ್ನು ನೇರವಾಗಿ ಎಸ್‌ಡಿಎಂಸಿಗಳ ಖಾತೆಗೆ ಜಮಾ ಮಾಡಿರುವುದನ್ನು ಖಂಡಿಸಿರುವ ಶಾಸಕ ಅಮರೇಗೌಡ ಬಯ್ಯಾಪುರ, ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ಜಿ.ಎಚ್.ವೀರಣ್ಣರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ವಿವರ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಲ್ಲಿ 116 ಶಾಲೆಗಳಲ್ಲಿ 8ನೇ ತರಗತಿಯನ್ನು ಆರಂಭಿಸುವ ಮೂಲಕ ಸದರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಇಂತಹ ಶಾಲೆಗಳಲ್ಲಿ ಕೊಠಡಿ ನಿರ್ಮಿಸಲು ಹಣ ಬಿಡುಗಡೆ ಮಾಡಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಕೊಠಡಿವೊಂದಕ್ಕೆ 5.40 ಲಕ್ಷ ರೂಪಾಯಿಗಳಂತೆ 116 ಶಾಲೆಗಳಿಗೆ ಸಂಬಂಧಿಸಿದ ಹಣವನ್ನು ಆಯಾ ಶಾಲಾಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಖಾತೆಗೆ ಜಮಾ ಮಾಡುವ ಮುನ್ನ ಬಿಐಸಿ ಸಭೆಯಲ್ಲಿ ಅನುಮೋದನೆ ಅಗತ್ಯ. ಶಾಸಕರೇ ಅಧ್ಯಕ್ಷರಾಗಿರುವ ಬಿಐಸಿಯಲ್ಲಿ ಅನುಮೋದನೆ ಪಡೆದ ಕಾಮಗಾರಿಗಳನ್ನು ಜಿಲ್ಲಾ ಅನುಷ್ಠಾನ ಸಮಿತಿ ಸಭೆಯಲ್ಲಿ ಚರ್ಚಿಸಿ, ಅನುಮೋದನೆ ನೀಡಲಾಗುತ್ತದೆ.ಈ ಸಾಲಿನ ಜಿಲ್ಲಾ ಅನುಷ್ಠಾನ ಸಮಿತಿ ಸಭೆ ಅ.30ರಂದು ನಡೆದಿದೆ. ಆದರೆ, 116 ಶಾಲೆಗಳಲ್ಲಿ ಕೊಠಡಿ ನಿರ್ಮಿಸುವುದಕ್ಕೆ ಸಂಬಂಧಿಸಿದ ಹಣವನ್ನು ಸರ್ವ ಶಿಕ್ಷಣ ಅಭಿಯಾನ ಅಧಿಕಾರಿಗಳು ಕೆಲವು ತಿಂಗಳು ಹಿಂದೆಯೇ ಎಸ್‌ಡಿಎಂಸಿಗಳ ಖಾತೆಗೆ ಜಮಾ ಮಾಡಿದ್ದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಶಾಸಕ ಅಮರೇಗೌಡ ಬಯ್ಯಾಪುರ ಅವರು, `ಕುಷ್ಟಗಿ ತಾಲ್ಲೂಕಿನಲ್ಲಿ ಶಾಲಾ ಆವರಣ ಗೋಡೆ ನಿರ್ಮಾಣಕ್ಕಾಗಿ 43 ಲಕ್ಷ ರೂಪಾಯಿಗಳನ್ನು ಎಸ್‌ಡಿಎಂಸಿ ಖಾತೆ ಜಮಾ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ~ ಎಂದರು.ಈ ಲೋಪದ ಬಗ್ಗೆ ಡಿಡಿಪಿಐ ಅವರೊಂದಿಗೆ ಮಾತನಾಡಿ, ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಯಾವುದೇ ಕಾರಣಕ್ಕೂ ಈ ಬಳಕೆ ಮಾಡುವುದು ಸರಿಯಲ್ಲ. ಯಾವ ಶಾಲೆಗೆ ಯಾವ ಕಾಮಗಾರಿ ಅಗತ್ಯ ಇದೆ ಎಂಬ ಬಗ್ಗೆ ನನ್ನೊಂದಿಗೆ ಸಮಾಲೋಚನೆ ನಡೆಸದೇ ಏಕಪಕ್ಷೀಯವಾಗಿ ಈ ರೀತಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಇದೇ ರೀತಿ ಹಣ ಬಿಡುಗಡೆಯಾಗಿದೆ. ಆದರೆ, ಕೆಲವು ಶಾಸಕರಿಗೇ ಈ ಬಗ್ಗೆ  ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ.ಜಿಲ್ಲಾ ಉಸ್ತುವಾರಿ ಸಚಿವರೇ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿದ್ದಾರೆ. ಸರ್ವ ಶಿಕ್ಷಣ ಅಭಿಯಾನದ ಅನುಷ್ಠಾನದಲ್ಲಿ ನಡೆಯುತ್ತಿರುವ ಇಂತಹ ವಿದ್ಯಮಾನಗಳ ಬಗ್ಗೆ ಈಗಲಾದರೂ ಸಚಿವರು ಗಮನ ಹರಿಸುವರೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.