ಶನಿವಾರ, ಮೇ 28, 2022
31 °C

ಶಿಕ್ಷಣ ಕಾಶಿ ಸಿದ್ಧಗಂಗೆ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಅರಗೇನಹಳ್ಳಿ ರೋಹಿತನಿಗೆ ಐದು ವರ್ಷ. ತಾಯಿ ಇಲ್ಲ. ತಂದೆ ಬೊಮ್ಮಣ್ಣ ಸ್ವಾಮಿ ಕೂಲಿ ಕಾರ್ಮಿಕ. ಬದುಕು ಅರಸಿಕೊಂಡು ಬೆಂಗಳೂರಿಗೆ ಬಂದು ವರ್ಷಗಳು ಕಳೆದಿವೆ. ಬದುಕಿಗೆ ಭದ್ರತೆ ಸಿಕ್ಕಿಲ್ಲ. ಈ ಮೊದಲು ಸೆಕ್ಯೂರಿಟಿ ಗಾರ್ಡ್ ಆಗಿದ್ದ ತಂದೆ ಇದೀಗ ಗಾರೆ ಕೆಲಸಗಾರ.ಬಾಲಕನಿಗೆ ಕಲಿಯುವ ಆಸೆ. ಕಲಿಸುವ ಶಕ್ತಿ ತಂದೆಗಿಲ್ಲ. ಅನ್ಯ ಮಾರ್ಗವಿಲ್ಲದೆ ಬೊಮ್ಮಣ್ಣ ಸ್ವಾಮಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಬಂದು ಐದು ವರ್ಷದ ಪುಟ್ಟ ಪೋರನನ್ನು ಬಿಟ್ಟು, `ತಾಯಿ ಇಲ್ಲದ ಮಗ. ಇವನಿಗೆ ಇಲ್ಲೇ ವಿದ್ಯೆ, ಬುದ್ಧಿ ಕೊಡಿ ಸ್ವಾಮಿ~ ಎಂದು ಶಿವಕುಮಾರ ಸ್ವಾಮೀಜಿ ಬಳಿ ದುಂಬಾಲು ಬಿದ್ದರು.ಆತನ ನೋವಿಗೆ ಸ್ಪಂದಿಸಿದ ಸ್ವಾಮೀಜಿ ಜೂನ್ ಆರಂಭದಲ್ಲಿ ಬಂದು ಶಾಲೆಗೆ ದಾಖಲಿಸು ಎಂದು ಸೂಚಿಸಿದರು. ಇದಕ್ಕೆ ಒಪ್ಪದ ಬೊಮ್ಮಣ್ಣ `ಬುದ್ಧಿ, ಇವನ್ನ ನೋಡ್‌ಕೊಳ್ಳೋರು ಯಾರಿಲ್ಲ. ನಾನು ಕೂಲಿಗೆ ಹೋಗಬೇಕು. ಇವನ್ನ ನಿಮ್ ಪಾದಕ್ಕೆ ಒಪ್ಪಿಸಿದ್ದೇನೆ. ನೀವೇ ತಂದೆ-ತಾಯಿ ಎಲ್ಲ. ಇವನ ಅಣ್ಣಂದಿರು ಇಲ್ಲೇ ಓದುತ್ತಿದ್ದಾರೆ. ಅವರ ಜತೆ ಇರ್ತಾನೆ. ಶಾಲೆಗೆ ಸೇರಿಸ್ಕೊಂಡು ವಿದ್ಯೆ ನೀಡಿ ಬುದ್ಧಿ~ ಎಂದು ಪ್ರಾರ್ಥಿಸಿ, ಮಗನನ್ನು ಅಲ್ಲೇ ಬಿಟ್ಟು ಬೆಂಗಳೂರಿಗೆ ಹೋದರು.ಚಿಂಚೋಳಿ ತಾಲ್ಲೂಕು ಸೈದಾಪುರದ ಹೀರಾ ರಾಠೋಡ ಪತ್ನಿಯನ್ನು ಕಳೆದುಕೊಂಡು ವರ್ಷಗಳೇ ಗತಿಸಿವೆ. ತನ್ನ ಮೂರು ಮಕ್ಕಳನ್ನು ಸಾಕಲು ಆಗದೆ ಸಿದ್ಧಗಂಗಾ ಮಠದಲ್ಲೇ ಬಿಟ್ಟಿದ್ದಾರೆ. ವೆಂಕಟೇಶ, ಶ್ರೀನಿವಾಸ, ತಿರುಮಲ ಮಠದ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಮಕ್ಕಳನ್ನು ಬಿಟ್ಟಿರದ ಹೀರಾ ರಾಠೋಡ ಕ್ಯಾತ್ಸಂದ್ರದಲ್ಲಿ ಗಾರೆ ಕೆಲಸ ಮಾಡಿಕೊಂಡು ಉಳಿದಿದ್ದಾರೆ.`ಬುದ್ಧಿ ಮುತ್ಯಾ (ಸ್ವಾಮೀಜಿ) ನಮ್ಮ ಪಾಲಿಗಾಗದಿದ್ದರೆ ನಮ್ಮಕ್ಕಳು ಹಳ್ಳೀಲಿ ಕೂಲಿ ಮಾಡಬೇಕಿತ್ತು. ನಮ್ಮಂಗೆ ಸಾಯೋ ತನಕ ಕಂಡೋರ ಮನೆ ಜೀತ, ಕೂಲಿ, ಸಾಲದಲ್ಲೇ ನರಳಬೇಕಾಗಿತ್ತು. ಪುಣ್ಯಾತ್ಮ ನಮ್ಮೇಲೆ ಒಂದಿಷ್ಟು ದಯೆ ಇಟ್ಟಾನೆ. ನಮ್ಮಕ್ಕಳು ನಾಲ್ಕಕ್ಷರ ಕಲಿತು, ಎಲ್ಲಾದರೂ ನಾಲ್ಕಾಸು ದುಡ್ಕೋಂಡ್ ತಿಂತಾವೆ~... ಎಂದು ಹೇಳುವಾಗ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕು ದೋಟಿಹಾಳದ ಹಣಮಂತಪ್ಪನ ಕಣ್ಣು ತೇವವಾಗುತ್ತವೆ.ದಾವಣಗೆರೆ ನಿಟ್ಟುವಳ್ಳಿಯ ವಿನಾಯಕ ಸಹೋದರರಿಗೆ ತಂದೆ-ತಾಯಿ ಇಬ್ಬರೂ ಇಲ್ಲ. ಬಂಧುಗಳು ನೆರವು ನೀಡುತ್ತಿಲ್ಲ. ಓದುವ ಮನಸ್ಸಿದ್ದರೂ ಅವಕಾಶ ಸಿಗದಿದ್ದರಿಂದ ನೊಂದ ವಿನಾಯಕ ಮತ್ತೊಬ್ಬ ತಮ್ಮನ ಜತೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕೊನೆ ತಮ್ಮಂದಿರನ್ನು ಮಠಕ್ಕೆ ಕರೆತಂದು ಸ್ವಾಮೀಜಿ ಸುಪರ್ದಿಗೆ ಒಪ್ಪಿಸಿ, ನಿರಾಳನಾಗಿದ್ದಾನೆ.ಇದು ಒಬ್ಬಿಬ್ಬರ ಕಥೆಯಲ್ಲ. ಇಂಥ ನೂರಾರು ಕುಟುಂಬಗಳ ಸಾವಿರಾರು ಮಕ್ಕಳು ಇಲ್ಲಿ ಕಲಿಯುತ್ತಿವೆ. ಹುಟ್ಟೂರು- ಮನೆ- ಬಂಧು ಬಳಗ ಎಲ್ಲವನ್ನೂ ತೊರೆದು ಭವ್ಯ ಭವಿಷ್ಯದ ಕನಸು ಕಾಣುತ್ತಿರುವ ಪುಟ್ಟ ಮಕ್ಕಳ ಕಂಗಳಲ್ಲಿ ಅದಮ್ಯ ಉತ್ಸಾಹ. ಒಬ್ಬೊಬ್ಬರದ್ದು ಒಂದೊಂದು ಮಹತ್ವಾಕಾಂಕ್ಷೆ.ಜೂನ್ 1ರಿಂದ ಸಿದ್ಧಗಂಗಾ ಮಠದ ಶಾಲೆ-ಕಾಲೇಜು, ವಿದ್ಯಾರ್ಥಿ ನಿಲಯಗಳಿಗೆ ಮಕ್ಕಳ ದಾಖಲಾತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಆದರೆ ಮೇ ಕೊನೆ ವಾರದಿಂದಲೇ ರಾಜ್ಯದ ಎಲ್ಲೆಡೆಯಿಂದ ಬಡವರು, ಅಸಹಾಯಕರು ಮಠದ ಆವರಣದಲ್ಲಿ ಬೀಡು ಬಿಟ್ಟಿದ್ದರು. ಹೀಗೆ ಅವಧಿಗೆ ಮುನ್ನ ಬಂದವರಿಗೂ ಮಠ ಆಸರೆ ನೀಡಿದೆ.ಪ್ರವೇಶ ಮಾನದಂಡ

ಕಡು ಬಡವರು, ನಿರ್ಗತಿಕರು, ಶೋಷಿತರು, ಅನಾಥ ಮಕ್ಕಳಿಗೆ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣದ ಜತೆ ಹಾಸ್ಟೆಲ್ ಸೌಲಭ್ಯವೂ ಉಚಿತ. ಮಠದ ಶಿಕ್ಷಣ ಸಂಸ್ಥೆ ನೀಡುವ ಅರ್ಜಿ ಜತೆ ತಹಶೀಲ್ದಾರ್‌ರಿಂದ ಬಡವರು ಎಂಬ ದೃಢೀಕರಣ ಪತ್ರ ತಂದರೆ ಪ್ರವೇಶ ಖಚಿತ.ಆದರೆ ಪ್ರವೇಶಕ್ಕಾಗಿ ಬರುವ ಬಹಳಷ್ಟು ಮಂದಿ ಇದನ್ನು ತಂದಿರುವುದಿಲ್ಲ. `ಮೊದಲು ಮಗನನ್ನು ಶಾಲೆ, ಹಾಸ್ಟೆಲ್‌ಗೆ ಸೇರಿಸಿಕೊಳ್ಳಿ ಬುದ್ಧಿ. ಊರಿಗೆ ಹೋಗಿ ತಹಶೀಲ್ದಾರ್ ಕೊಡುವ ಪತ್ರ ಕಳುಹಿಸುತ್ತೇನೆ. ಮತ್ತೆ ಊರಿಂದ ಬರಲು ಬಸ್‌ಚಾರ್ಜ್‌ಗೂ ತಾಪತ್ರಯ~ ಎನ್ನುತ್ತಿದ್ದಂತೆ ಮನ ಕರಗುವ ಸ್ವಾಮೀಜಿ ಹುಡಗನನ್ನು ದಾಖಲಿಸಿಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸುತ್ತಾರೆ.ಈಚಿನ ವರ್ಷಗಳಲ್ಲಿ ಪ್ರತಿ ಶೈಕ್ಷಣಿಕ ವರ್ಷದಲ್ಲೂ ಎರಡರಿಂದ -ಮೂರು ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಒಂದನೇ ತರಗತಿಯಿಂದ ಪದವಿ ಕಾಲೇಜು ತನಕ ದಾಖಲಾತಿ ನಡೆಯುತ್ತದೆ. ಹಿರಿಯ ಪ್ರಾಥಮಿಕ, ಪ್ರೌಢಶಾಲೆಗೆ ಸೇರುವವರ ಸಂಖ್ಯೆ ಅಧಿಕ.ಶಾಲೆ ಪ್ರವೇಶಕ್ಕಾಗಿ ಬರುವ ಎಲ್ಲ ವಿದ್ಯಾರ್ಥಿಗಳನ್ನು ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರೇ ಸಂದರ್ಶಿಸುತ್ತಾರೆ. ಜೂನ್ ತಿಂಗಳು ಸ್ವಾಮೀಜಿ ಮಠದಿಂದ ಕದಲದೆ ದಾಖಲಾತಿ ಪ್ರಕ್ರಿಯೆಯಲ್ಲಿ ಸಕ್ರಿಯರಾಗುತ್ತಾರೆ. ಮುಂಜಾನೆ 6.30ಕ್ಕೆ ಕಚೇರಿಗೆ ಬಂದು ಕೂತರೇ ಮಧ್ಯಾಹ್ನ ಎರಡರ ತನಕ ವಿಶ್ರಮಿಸಲ್ಲ. ಸಂಜೆ ನಾಲ್ಕಕ್ಕೆ ಮತ್ತೆ ಚಾಲನೆ.ಸಂದರ್ಶನದಲ್ಲಿ ಹುಡುಗನ ಹಿನ್ನೆಲೆ, ಮನೆಯ ಸ್ಥಿತಿಗತಿ, ಕಲಿಯುವ ಆಸಕ್ತಿ, ಭವಿಷ್ಯದ ಯೋಜನೆ ಎಲ್ಲವನ್ನೂ ಗಮನಿಸುವ ಸ್ವಾಮೀಜಿ ಅರ್ಜಿ ಮೇಲೆ `ಅಡ್ಮಿಟ್~ ಎಂದು ಷರಾ ಬರೆಯುವ ಮೂಲಕ ಮುಂದಿನ ಪ್ರಕ್ರಿಯೆಗೆ ಕಳುಹಿಸಿಕೊಡುತ್ತಾರೆ. ಇಲ್ಲಿಗೆ ಬಂದ ಯಾರೂ ಸೀಟು ಸಿಕ್ಕದೆ ಇದುವರೆವಿಗೂ ವಾಪಸಾಗಿಲ್ಲ ಎನ್ನುತ್ತಾರೆ ಮಠದ ಸಿಬ್ಬಂದಿ.ಊಟ-ವಸತಿ: ಮಠದ ಆವರಣದಲ್ಲಿ ಹದಿನೈದಕ್ಕೂ ಹೆಚ್ಚು ವಸತಿ ಸಂಕೀರ್ಣಗಳಿವೆ. ಹತ್ತು ಮಕ್ಕಳಿಗೆ ಒಂದು ಕೊಠಡಿ. ಕೆಲವೆಡೆ ಮಲಗಲು ಮಂಚದ ವ್ಯವಸ್ಥೆಯಿದೆ. ಅಶಕ್ತರಿಗೆ ಮಠದಿಂದಲೇ ಚಾಪೆ, ಜಮಖಾನ, ತಟ್ಟೆ, ದಾನಿಗಳು ಕೊಟ್ಟಂಥ ನೋಟ್‌ಬುಕ್, ಲೇಖನ ಸಾಮಗ್ರಿ, ಬಟ್ಟೆ ನೀಡಲಾಗುತ್ತದೆ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ- ರಾತ್ರಿ ಮುದ್ದೆ, ಅನ್ನ ಸಾಂಬಾರ್ ಊಟ. ವಾರಕ್ಕೊಮ್ಮೆ ಹಾಗೂ ಹಬ್ಬಗಳಲ್ಲಿ ವಿಶೇಷ ಊಟ.ಮಠದಲ್ಲಿ ವಸತಿ ಶಿಕ್ಷಣ ವ್ಯವಸ್ಥೆ 1917ರಲ್ಲೇ ಆರಂಭಗೊಂಡಿದ್ದರೂ 1935-36 ರಿಂದ ಈಚಿನ ದಾಖಲೆ ಲಭ್ಯ. ಅರವತ್ತರ ದಶಕದಲ್ಲಿ ಸಾವಿರ ದಾಟಿದ ಸಂಖ್ಯೆ, 1975ರಲ್ಲಿ ಎರಡು ಸಾವಿರ ಮೀರಿದ್ದು, 76ರಲ್ಲೇ ಮೂರು ಸಾವಿರ ದಾಟಿದೆ. 77ರಲ್ಲಿ ಮಕ್ಕಳ ಸಂಖ್ಯೆ ನಾಲ್ಕು ಸಾವಿರಕ್ಕೇರಿದೆ. ನಂತರ ಇಳಿಮುಖವಾಗಿತ್ತು. 1999ರಲ್ಲಿ ಐದು ಸಾವಿರಕ್ಕೇರಿದ ಮಕ್ಕಳ ಸಂಖ್ಯೆ, 2000ನೇ ಸಾಲಿನಲ್ಲಿ 6 ಸಾವಿರ, 2001ರಲ್ಲಿ 7 ಸಾವಿರ, 2007ರ ವೇಳೆಗೆ 8 ಸಾವಿರ ತಲುಪಿದೆ. 2011-12ರಲ್ಲಿ 8373 ವಿದ್ಯಾರ್ಥಿಗಳು ಮಠದ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆದಿದ್ದರು.ರಾಜ್ಯದ 29 ಜಿಲ್ಲೆಯ 111 ಜಾತಿ- ಉಪ ಜಾತಿ- ಧರ್ಮದ ವಿದ್ಯಾರ್ಥಿಗಳು ಮಠದಲ್ಲಿ ಓದುತ್ತಿದ್ದಾರೆ. ಆಂಧ್ರ, ತಮಿಳುನಾಡು, ಮಹಾರಾಷ್ಟ್ರದ ವಿದ್ಯಾರ್ಥಿಗಳೂ ಇದ್ದಾರೆ. ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಮಕ್ಕಳಿಗೂ ಮಠದ ಶಾಲೆ ಆಶ್ರಯ ಕೊಟ್ಟಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.