ಸೋಮವಾರ, ಜನವರಿ 27, 2020
26 °C
ಕೋಬ್ರಾಪೋಸ್ಟ್‌ ಮಾರುವೇಷದ ಕಾರ್ಯಾಚರಣೆ

ಶಿಫಾರಸು ಪತ್ರ ಮಾರಿದ ಸಂಸದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಫಾರಸು ಪತ್ರ ಮಾರಿದ ಸಂಸದರು

ನವದೆಹಲಿ (ಐಎಎನ್‌ಎಸ್‌): ಶಿಫಾ­ರಸು ಪತ್ರ ನೀಡುವುದಕ್ಕೂ ಸಂಸದರು ಲಂಚ ಪಡೆಯುತ್ತಾರೆ ಎಂಬ  ಆಘಾತಕಾರಿ ಸುದ್ದಿ ಬಯಲಾಗಿದೆ.ಅಸ್ಥಿತ್ವದಲ್ಲಿಯೇ ಇಲ್ಲದ ವಿದೇಶಿ ಕಂಪೆನಿಯೊಂದರ ಬೆಳವಣಿಗೆಗೆ ನೆರವಾಗುವಂತೆ ಶಿಫಾರಸು ಪತ್ರ ನೀಡಲು ಐದು ಪಕ್ಷಗಳ 11 ಸಂಸದರು  50 ಸಾವಿರದಿಂದ 50 ಲಕ್ಷ ರೂ. ವರೆಗೆ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಇವರಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯ ಸಂಸದರೂ ಸೇರಿದ್ದಾರೆ.ತನಿಖಾ ವರದಿಗಳ ವೆಬ್‌ಸೈಟ್‌ ‘ಕೋಬ್ರಾಪೋಸ್ಟ್‌’ನ ಮಾರುವೇಷದ ಕಾರ್ಯಾಚರಣೆ ಸಂಸದರ ಈ ಅವತಾರವನ್ನು ಬಹಿರಂಗಪಡಿಸಿದೆ.

ಆರು ಸಂಸದರು ಶಿಫಾರಸು ಪತ್ರಗಳನ್ನೂ ನೀಡಿದ್ದಾರೆ ಎಂದು ಕೋಬ್ರಾಪೋಸ್ಟ್‌ನ ಸಂಪಾದಕ ಅನಿರುದ್ಧ ಬಹಲ್‌ ತಿಳಿಸಿದ್ದಾರೆ.‘50 ಸಾವಿರದಿಂದ 75 ಸಾವಿರ ರೂ.ಗಳಿಗೆ ಮೆಡಿಟರೇನಿಯನ್‌ ಆಯಿಲ್‌ ಇಂಕ್‌ ಎಂಬ ಹೆಸರಿನ ಕಂಪೆನಿಗೆ ಆರು ಸಂಸದರು ಶಿಫಾರಸು ಪತ್ರಗಳನ್ನು ನೀಡಿದ್ದಾರೆ’ ಎಂದು ಬಹಲ್‌ ಹೇಳಿದ್ದಾರೆ.ವಾಸ್ತವವಾಗಿ ಈ ಕಂಪನಿ ಅಸ್ಥಿತ್ವ­ದಲ್ಲಿ ಇದೆಯೇ ಎನ್ನುವುದನ್ನು ಸಂಸ­ದರು ಮನವರಿಕೆ ಮಾಡಿಕೊಂಡಿಲ್ಲ.‘5 ಲಕ್ಷ ರೂ.ಗಿಂತ ಕಡಿಮೆ ಹಣಕ್ಕೆ ಶಿಫಾರಸು ಪತ್ರ ನೀಡಲು ಸಾಧ್ಯವಿಲ್ಲ ಎಂದು ಇತರ ಸಂಸದರು ಹೇಳಿದರೆ, ಒಬ್ಬರು 50 ಲಕ್ಷ ರೂ. ಬೇಡಿಕೆ ಇರಿಸಿದರು’ ಎಂದು ಬಹಲ್‌ ವಿವರಿಸಿದರು.ಕಂಪೆನಿಯು ಭಾರತದಲ್ಲಿ ಮಳಿಗೆ­ಗಳನ್ನು ತೆರೆಯಲು ನೆರವು ನೀಡುವು­ದಾಗಿ ಸಂಸದರು ಹೇಳಿರುವುದನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ.ಸಂಸದರ ಪಟ್ಟಿ: ಶಿಫಾರಸು ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇರಿಸಿದ ಸಂಸದರನ್ನು ಎಐಎಡಿಎಂಕೆಯ ಕೆ. ಸುಕುಮಾರ್‌ ಮತ್ತು ಸಿ.ರಾಜೇಂದ್ರನ್‌, ಬಿಜೆಪಿಯ ಲಾಲು ಭಾಯಿ ಪಟೇಲ್‌, ರವೀಂದ್ರ ಕುಮಾರ್‌ ಪಾಂಡೆ ಮತ್ತು ಹರಿ ಮಂಝಿ, ಜೆಡಿಯುನ ವಿಶ್ವ ಮೋಹನ್‌ ಕುಮಾರ್‌, ಮಹೇಶ್ವರ್‌ ಹಜಾರಿ ಮತ್ತು ಭೂದೇವ್‌ ಚೌಧರಿ, ಕಾಂಗ್ರೆಸ್‌ನ ಖಿಲಾಡಿ ಲಾಲ್‌ ಬೈರ್‌ವ ಮತ್ತು ವಿಕ್ರಮ್‌ಭಾಯಿ ಅರ್ಜನ್‌­ಭಾಯಿ ಮತ್ತು  ಬಿಎಸ್‌ಪಿಯ ಕೈಸರ್‌ ಜಹಾನ್‌ ಎಂದು ಗುರುತಿಸಲಾಗಿದೆ.‘ಹಣ ನಗದಾಗಿ ಪಡೆಯುವ  ವಿಷಯದ ಬಗ್ಗೆ ಮಾತ್ರ ಸಂಸದರು ತಲೆ ಕೆಡಿಸಿಕೊಂಡಿದ್ದರು. ಹವಾಲಾ ನಿರ್ವಾ­ಹಕರ ಮೂಲಕ ಹಣ ವರ್ಗಾಯಿ­ಸುವಂತೆಯೂ ಒಬ್ಬ ಸಂಸದ ಒತ್ತಾಯಿ­ಸಿದ್ದರು’ ಎಂದು ಬಹಲ್‌ ಮಾಹಿತಿ ನೀಡಿದರು.ಕೋಬ್ರಾಪೋಸ್ಟ್‌ನ ವರದಿಗಾರ ಕೆ. ಅಶೀಷ್‌ ಸಂಸದರನ್ನು  ಆಸ್ಟ್ರೇಲಿಯದ ಕ್ವೀನ್ಸ್‌ಲ್ಯಾಂಡ್‌ನ  ಮೆಡಿಟರೇನಿಯನ್ ಆಯಿಲ್‌ ಇಂಕ್‌ನ ಪ್ರತಿನಿಧಿ ಎಂದು ಹೇಳಿ ಸಂಪರ್ಕಿಸಿದ್ದರು. ಸಂಸದರಿಗೆ ಕಂಪೆನಿಯ ವೆಬ್‌ಸೈಟ್‌, ಬ್ರೋಷರ್‌ಗಳನ್ನು  ತೋರಿಸಿದ್ದರು.ಈಶಾನ್ಯ ಭಾರತದಲ್ಲಿ ತೈಲ ಶೋಧ ಗುತ್ತಿಗೆ ಪಡೆಯುವುದಕ್ಕೆ ಬೆಂಬಲ ಕ್ರೋಡೀಕರಿಸುವ ಕೆಲಸ ಮಾಡುತ್ತಿದ್ದೇನೆ. ತನ್ನ ಹೆಸರು ಅಶೀಷ್‌ ಜೇಡನ್‌ ಎಂದು ಸಂಸದರಿಗೆ ಅಶೀಷ್‌ ತನ್ನನ್ನು ಪರಿಚಯಿಸಿಕೊಂಡಿದ್ದರು. ಸಾವಿರ ಕೋಟಿ ರೂ.ನ ಯೋಜನೆ ಇದಾಗಿದ್ದು ಅದಕ್ಕಾಗಿ ಶಿಫಾರಸು ಪತ್ರ ಬರೆಯುವಂತೆ ಸಂಸದರನ್ನು ಆಶೀಷ್‌ ಕೇಳಿಕೊಂಡಿದ್ದರು ಎಂದು ಕಾರ್ಯಾ­ಚರಣೆಯನ್ನು ಬಹಲ್‌ ವಿವರಿಸಿದರು.ಈ ಸಂಸದರು ಇಂತಹ ವ್ಯವಹಾರಗಳನ್ನು ತಮ್ಮ ಸಿಬ್ಬಂದಿ, ಸಂಬಂಧಿಕರು ಅಥವಾ ಮಧ್ಯವರ್ತಿಗಳ ಮೂಲಕ ನಡೆಸುತ್ತಾರೆ. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ಸಂಬಂಧಿಸಿ ಎನ್‌ಡಿಎ ಸಂಸತ್ತಿನಲ್ಲಿ ಗದ್ದಲ ಉಂಟು ಮಾಡಿ ಸಂಸತ್‌ ಕಾರ್ಯಾಚರಿಸದಂತೆ ಮಾಡಿದ ಸಂದರ್ಭದಲ್ಲಿಯೇ ಈ ಸಂಸದರು ಲಂಚ ಪಡೆದುಕೊಂಡಿದ್ದಾರೆ ಎಂದು ಬಹಲ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)