ಶುಕ್ರವಾರ, ಜೂನ್ 18, 2021
22 °C

ಶಿರಸಿ: ಸಂಭ್ರಮದ ಮಾರಿಕಾಂಬಾ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ : ಮಲೆನಾಡಿನ ತ್ರಿಶಕ್ತಿ ಸ್ವರೂಪಿಣಿ ಮಾರಿಕಾಂಬಾಯ ರಥೋತ್ಸವ ಬುಧವಾರ ಇಲ್ಲಿ ವಿಜೃಂಭಣೆಯಿಂದ ಜರುಗಿತು.ಬೆಳಿಗ್ಗೆ 7.30ಕ್ಕೆ ದೇವಾಲಯದ ಎದುರು ರಥಾರೂಢಳಾದ ಸರ್ವಾಲಂಕಾರ ಭೂಷಿತೆ ದೇವಿಯ ಶೋಭಾಯಾತ್ರೆಯಲ್ಲಿ ಜನ ಭಕ್ತಿಯಿಂದ ಪಾಲ್ಗೊಂಡರು. ರಥದ ಮುಂಭಾಗದಲ್ಲಿ ಅರ್ಧ ಕಿ.ಮೀ ದೂರದವರೆಗೂ ನೆರೆದಿದ್ದ ಕುಂಕುಮ ಲೇಪಿತ ಕೆಂಪನೆ ವಸ್ತ್ರಧಾರಿಗಳು ಕೈಯಲ್ಲಿ ಅಡಿಕೆ ಸಿಂಗಾರ ಹಿಡಿದು ಮೈ ಮೇಲೆ `ಅಮ್ಮ~ ಬಂದಂತೆ ಕುಣಿದು ಹರಕೆ ಸಲ್ಲಿಸಿದರು.ದಾರಿಯುದ್ದಕ್ಕೂ ಭಕ್ತರು ರಥಕ್ಕೆ ಬಾಳೆಹಣ್ಣು, ಹಾರುಕೋಳಿ ಎಸೆದು ಕೃತಾರ್ಥರಾದರು. ಶೋಭಾಯಾತ್ರೆ ವೀಕ್ಷಿಸಲು ನಿಂತಿದ್ದ ಜನರು ದೇವಿಯ ರಥ ಮುಂದೆ ಸಾಗುತ್ತಿದ್ದಂತೆಯೇ ಕೈ ಮುಗಿದು `ಕಾಪಾಡು ತಾಯೇ~ ಎನ್ನುತ್ತ ಭಕ್ತಿಪರವಶರಾದರು.ಬೆಳಕು ಹರಿಯುವ ಮೊದಲೇ ದೇವಾಲಯದ ಎದುರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಎರಡು ವರ್ಷಕ್ಕೊಮ್ಮೆ ಎಂಟು ದಿನಗಳ ಕಾಲ ನಡೆಯುವ ಮಾರಿಕಾಂಬೆಯ ರಥೋತ್ಸವಕ್ಕೆ ಸಾಕ್ಷಿಯಾದರು. ಬೆಳಿಗ್ಗೆ 11.30ಗಂಟೆ ನಂತರ ರಾಹು ಕಾಲ ಬಂದಿದ್ದರಿಂದ ಎರಡೂವರೆ ತಾಸು ತಡವಾಗಿ ಮಧ್ಯಾಹ್ನ 1.55ಕ್ಕೆ ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನೆ ನೆರವೇರಿತು. ಗುರುವಾರ ಬೆಳಿಗ್ಗೆ 7.30ರಿಂದ ದೇವಿಗೆ ಹಣ್ಣು-ಕಾಯಿ, ಉಡಿ, ಬೇವಿನ ಉಡುಗೆ, ತುಲಾಭಾರ ಸೇವೆಗಳು ಪ್ರಾರಂಭವಾಗುತ್ತವೆ.ಕಲ್ಯಾಣ ಮಹೋತ್ಸವ: ಮಂಗಳವಾರ ಮಧ್ಯರಾತ್ರಿ ಮಾರಿಕಾಂಬಾ ದೇವಿ, ಆಕೆಯ ಸಹೋದರಿಯರಾದ ಮರ್ಕಿ-ದುರ್ಗಿಯರ ಕಲ್ಯಾಣೋತ್ಸವ ಸಂಭ್ರಮದಿಂದ ಜರುಗಿತು. ಮಾರಿಕಾಂಬೆ ಮತ್ತು ಮರ್ಕಿ-ದುರ್ಗಿಯರಿಗೆ ಹೊಸ ಸೀರೆಯುಡಿಸಿ, ಬಂಗಾರದ ಆಭರಣಗಳಿಂದ ಅಲಂಕರಿಸಿದ ಮೇಲೆ ಗುಡಿಗಾರರು ದೃಷ್ಟಿಬೊಟ್ಟು ಇಟ್ಟರು. ಸಂಪ್ರದಾಯದಂತೆ ಮಾರಿಕಾಂಬೆಯ ತವರುಮನೆಯಾದ ನಾಡಿಗ ಮನೆತನದವರು ಮಾಂಗಲ್ಯ ಧಾರಣೆ ಮಾಡಿದರು.ಬುಧವಾರ ನಸುಕಿನಲ್ಲಿ ದೇವಿ ರಥ ಏರುವ ಮುನ್ನ ಸಾಂಕೇತಿಕವಾಗಿ ಕುಂಬಳಕಾಯಿಯ ಸಾತ್ವಿಕ ಬಲಿ ನೀಡಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.