ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಪ್ಪನಾಯಕ ಕೋಟೆ

ಕೆಳದಿಯ ಪಳೆಯುಳಿಕೆ
ಅಕ್ಷರ ಗಾತ್ರ

ಕೆಳದಿ ನಾಯಕರು ಮಲೆನಾಡು-ಕರಾವಳಿ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ ರಾಜ ಮನೆತನ. 16ನೇ ಶತಮಾನದಿಂದ 18ನೇ ಶತಮಾನದವರೆಗೆ ಆಳಿದ ಈ ಮನೆತನ ಆರಂಭದಲ್ಲಿ ಕೆಳದಿ, ನಂತರ ಇಕ್ಕೇರಿ ಹಾಗೂ ಬಿದನೂರುಗಳಲ್ಲಿ ಆಡಳಿತ ಕೇಂದ್ರಗಳನ್ನಾಗಿ ಮಾಡಿಕೊಂಡಿತ್ತು.

ರಾಜಧಾನಿಯಾದ ಬಿದನೂರಿನಲ್ಲಿ ಶಿವಪ್ಪನಾಯಕ ಕಟ್ಟಿಸಿದ ಕಲ್ಲಿನ ಕೋಟೆ ಆ ಸಂತತಿಯ ಪಳೆಯುಳಿಕೆಯಾಗಿ ಉಳಿದುಕೊಂಡಿದೆ.
ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ತಾಲ್ಲೂಕು ಕೇಂದ್ರ ಹೊಸನಗರದಿಂದ ಸುಮಾರು 17 ಕಿ.ಮೀ.ದೂರದಲ್ಲಿರುವ ಈ ಊರು ಅಂದಿನ ಬಿದನೂರು. ಇದರ ಪ್ರಾಚೀನ ಹೆಸರು ವೇಣುಪುರ. ಕೆಳದಿ ಇಕ್ಕೇರಿಗಳಲ್ಲಿ ನಾಯಕರು 1940ರ ವೇಳೆಗೆ ಬಿದನೂರಿನಿಂದ ಆಳಿದ್ದರಿಂದ ಅವರನ್ನು ಬಿದನೂರು ನಾಯಕರು ಎಂದು ಕರೆಯುವುದು ಉಂಟು.

ಬಿದನೂರನ್ನು ಹೊನ್ನಯ ಕಂಬಳಿ ಅರಸರು ಆಳುತ್ತಿದ್ದರು. ಕೆಳದಿಯ ವೆಂಕಟಪ್ಪನಾಯಕ ಬಿದನೂರನ್ನು ಹೊನ್ನಯ ಕಂಬಳಿ ಅರಸರಿಂದ ಗೆದ್ದುಕೊಂಡನೆಂದು ಲಿಂಗಣ್ಣ ರಚಿಸಿರುವ ‘ಕೆಳದಿಯ ನೃಪವಿಜಯಂ’ ಕೃತಿಯಿಂದ ತಿಳಿದುಬರುತ್ತದೆ. ಬಿದನೂರು, ಪಶ್ಚಿಮಘಟ್ಟದ ಕೆಳಗೆ ಇಳಿಯುವ ಹೊಸಂಗಡಿ ಘಾಟಿಯ ದಾರಿಯಲ್ಲಿದೆ.

ಸ್ಥಳೀಯ ಪಾಳೇಗಾರರು ಹಾಗೂ ವಿಜಯಪುರದ ಆದಿಲ್‌ಷಾಹನ ಉಪಟಳದಿಂದ ಪಾರಾಗಲು ಕೆಳದಿಯ ವೀರಭದ್ರನಾಯಕನು ಇಕ್ಕೇರಿಯಿಂದ ತನ್ನ ರಾಜಧಾನಿಯನ್ನು ಆಯಾಕಟ್ಟಿನ ಸ್ಥಳದಲ್ಲಿದ್ದ ಬಿದನೂರಿಗೆ ವರ್ಗಾಯಿಸಿದನು. ಬಿದನೂರು ನಂತರದ ದಿನಗಳಲ್ಲಿ ವ್ಯಾಪಾರ ಕೇಂದ್ರವಾಯಿತು.

ಕೆಳದಿಯ ನಾಯಕರಲ್ಲೇ ಶಿವಪ್ಪನಾಯಕ ಸಮರ್ಥನಾದವನು. ಈತನು ಬಿದನೂರಿನಲ್ಲಿ ಕೋಟೆ-ಕೊತ್ತಲ, ಅರಮನೆಗಳನ್ನು ನಿರ್ಮಿಸಿದ. ಮಾವಿನಾಕಾರ ಇಲ್ಲವೇ  ಷಟ್‌ಕೋನ ತಲವಿನ್ಯಾಸವುಳ್ಳ ಅಲ್ಲಿನ ಕಲ್ಲಿನ ಕೋಟೆಯನ್ನು ಈಗಲೂ ನೋಡಬಹುದು. ಅರಮನೆಗಳು ನಾಶವಾಗಿವೆ. ಕೋಟೆಯ ಸುತ್ತಲೂ ಕಂದಕ ನಿರ್ಮಿಸಲಾಗಿದೆ. 

ಉತ್ತರ ಭಾಗದಲ್ಲಿ ಎರಡು ಬತೇರಿಗಳ ಮಧ್ಯೆ ಪ್ರಮುಖ ಪ್ರವೇಶ ದ್ವಾರವಿದೆ. ಕೋಟೆಯ ಗೋಡೆಗೆ ಹೊಂದಿಕೊಂಡಂತೆ ನಾಲ್ಕು ದಿಕ್ಕಿನಿಂದಲೂ 6 ವರ್ತುಲ ಬತೇರಿಗಳಿವೆ. ಡಿಲ್ಲಿ ಬಾಗಿಲು, ಕೊಡಿಯಾಲ ಬಾಗಿಲು, ಕವಿಲೆ ದುರ್ಗದ ಬಾಗಿಲು ಸೇರಿದಂತೆ ಹತ್ತು ಬಾಗಿಲುಗಳು ಇಲ್ಲಿದ್ದವು.

ಕೋಟೆಯ ಮುಖ್ಯ ಪ್ರವೇಶ ದ್ವಾರದ ಬಳಿ ಹಾಗೂ ಒಳಭಾಗಗಳಲ್ಲಿ ಅಲ್ಲಲ್ಲಿ ಕಾವಲುಗಾರರ ಕೋಣೆಗಳು ಇದ್ದ ಕುರುಹುಗಳು ಸಿಗುತ್ತವೆ. ಪಶ್ಚಿಮ ದಿಕ್ಕಿನಲ್ಲಿ ಒಂದು ಕೊಳ ಸಿಗುತ್ತದೆ. ಆಗ್ನೇಯ ದಿಕ್ಕಿನಲ್ಲಿ ಅರಮನೆ ಇದ್ದ ಸ್ಥಳಗಳು ಕಂಡುಬರುತ್ತದೆ. ಆಯತಾಕಾರದ ಅರಮನೆಗೆ ಹಜಾರಾ, ಅನೇಕ ಕೋಣೆಗಳು ಇದ್ದ ಕುರುಹುಗಳನ್ನು ನೋಡಬಹುದು.  ಕೋಟೆಯ ನೈರುತ್ಯ ದಿಕ್ಕಿನಲ್ಲಿರುವ ಗುಡ್ಡದ ಮೇಲೆ ವಿಚಕ್ಷಣಾ ಗೋಪುರ ನಿರ್ಮಿಸಲಾಗಿದೆ. ಆ ಸ್ಥಳದಿಂದ ದೂರದಲ್ಲಿರುವ ಶತ್ರುಗಳನ್ನು ಗಮನಿಸಲು ಸಾಧ್ಯವಿತ್ತು.

18ನೇ ಶತಮಾನದ ಆರಂಭದ ವೇಳೆಗೆ ಬಿದನೂರು ಸಂಪದ್ಭರಿತ ನಗರವಾಗಿ ಬೆಳೆದಿತ್ತು. ಆದರೆ, 1763ರಲ್ಲಿ ಬಿದನೂರು ಶ್ರೀರಂಗಪಟ್ಟಣದ ಹೈದರ ವಶವಾಗಿ ಅಲ್ಲಿನ ಸಂಪತ್ತೆಲ್ಲಾ ಆತನಿಗೆ ದೊರೆಯಿತು. ಆನಂತರ ಅದನ್ನು ಹೈದರ್ ನಗರ ಎಂಬ ಹೆಸರು ಪಡೆಯಿತು. ಹೈದರ್ ಅಲ್ಲಿ ಮದ್ದು-ಗುಂಡುಗಳನ್ನು ತಯಾರಿಕೆಯ ಹಾಗೂ ಟಂಕಸಾಲೆಯ ಕೇಂದ್ರವಾಗಿ ಮಾಡಿಕೊಂಡನು. ಟಿಪ್ಪು ಕಾಲದಲ್ಲಿ ಬ್ರಿಟಿಷರು ಇದನ್ನು ವಶಪಡಿಸಿಕೊಂಡರು.

ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಹೈದರ್ ನಗರ ಎಂಬುದು ನಗರವಾಗಿ ಮಾರ್ಪಟ್ಟಿತ್ತು. ಅಂದು ನಗರ ಪೌಚುದಾರಿಕೆಯ ವಿಭಾಗವಾಗಿತ್ತು. 1830ರ ವೇಳೆಯಲ್ಲಿ ನಗರದಲ್ಲಿ ನಡೆದ ದಂಗೆಯಿಂದಾಗಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅಧಿಕಾರ ಕಳೆದುಕೊಳ್ಳಲು ಕಾರಣವಾಯಿತು. 1893ರಲ್ಲಿ ತಾಲ್ಲೂಕು ಕೇಂದ್ರ ಕಲ್ಲೂರುಕಟ್ಟೆಗೆ ವರ್ಗಾವಣೆಗೊಂಡು ಆ ತಾಲ್ಲೂಕನ್ನು ಹೊಸ ನಗರ ತಾಲ್ಲೂಕೆಂದು ಕರೆಯಲಾಯಿತು. ಹೀಗಾಗಿ ಬಿದನೂರು ನಗರ ಹೀನ ಸ್ಥಿತಿಗೆ ಬಂದು ಒಂದು ಗ್ರಾಮವಾಗಿ ಉಳಿದುಕೊಂಡಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT