ಸೋಮವಾರ, ಮಾರ್ಚ್ 1, 2021
30 °C
ಅಟವೀ ಸ್ವಾಮೀಜಿ, ಉದ್ಧಾನ ಶಿವಯೋಗಿಗಳ ಪುಣ್ಯಾರಾಧನೆ

ಶಿವಯೋಗಿಗಳ ನೆಲೆ ಸಿದ್ದಗಂಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಯೋಗಿಗಳ ನೆಲೆ ಸಿದ್ದಗಂಗೆ

ತುಮಕೂರು: ಶಿವಯೋಗಿ ಪುಂಗವರ ಅದ್ಭುತ ನೆಲೆ ಸಿದ್ದಗಂಗಾಮಠ ಎಂದು ಬೆಂಗಳೂರು ಬೇಲಿಮಠದ ಶಿವರುದ್ರ ಸ್ವಾಮೀಜಿ ಶುಕ್ರವಾರ ನುಡಿದರು.ಸಿದ್ದಗಂಗಾ ಮಠದಲ್ಲಿ ನಡೆದ ಅಟವೀ ಸ್ವಾಮೀಜಿ 115ನೇ ಮತ್ತು ಉದ್ಧಾನ ಶಿವಯೋಗಿಗಳ 75ನೇ ಪುಣ್ಯಾರಾಧನೆ ಹಾಗೂ ಗುರು ಸ್ಮರಣೆ ಮತ್ತು ಗ್ರಾಮಾಂತರ ಬಸವ ಜಯಂತಿ ವಾರ್ಷಿಕ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಟವೀ ಶಿವಯೋಗಿಗಳು, ಉದ್ಧಾನ ಶಿವಯೋಗಿಗಳು, ಈಗಿನ ಶಿವಕುಮಾರ ಸ್ವಾಮಿಗಳಿಂದ ಈ ಕ್ಷೇತ್ರ ಶಿವಯೋಗಿ ಪುಂಗವರ ನೆಲೆಯಾಗಿದೆ. ನಾಡಿನಲ್ಲಿ ಅಥಣಿ ವಿಜಯಮಹಾಂತ ಶಿವಯೋಗಿಗಳು, ಅಟವೀ ಶಿವಯೋಗಿಗಳು, ಉದ್ದಾನ ಶಿವಯೋಗಿಗಳು ಹೀಗೆ ಅನೇಕ ಶಿವಯೋಗಿಗಳಿಂದ ನೂರಾರು ವರ್ಷಗಳ ಹಿಂದೆ ಇಡೀ ಸಮಾಜವೇ ಶಿವಯೋಗಿಗಳ ಕೇಂದ್ರವಾಗಿತ್ತು ಎಂದರು.ಈಗಿನ 108 ವರ್ಷದ ಶಿವಕುಮಾರ ಸ್ವಾಮೀಜಿ ತಮ್ಮ ತಪಸ್ಸು, ಶಕ್ತಿಯಿಂದ ಮನುಕುಲದ ಮಂಗಳ ಜ್ಯೋತಿಯಾಗಿ ಇದ್ದಾರೆ. ಉದ್ದಾನಶ್ರೀ, ಶಿವಕುಮಾರ ಸ್ವಾಮೀಜಿಗಳು ಯುಗದ ಅವತಾರ, ಶತಮಾನದ ಕೌತುಕ ಎಂದು ಹೇಳಿದರು.ಸಂಕ್ರಾಂತಿ ಹಬ್ಬ ಬೆಳಕಿನೆಡೆಗೆ ನಡೆಯುವ ಹಬ್ಬ. ಇಂಥ ಬೆಳಕಿನಂತೆಯೇ ಈ ಕ್ಷೇತ್ರವು ಲಕ್ಷಾಂತರ ಜನರಿಗೆ ಮಾರ್ಗದರ್ಶನ ಮಾಡಿದೆ. ಸದ್ದು ಗದ್ದಲವಿಲ್ಲದೆ ಈ ಕ್ಷೇತ್ರ ಗದ್ದುಗೆ ಏರಿದೆ ಎಂದರು.ಸಿದ್ದಗಂಗಾ ಸಂಕ್ರಮಣ ಸಂಚಿಕೆ ಬಿಡುಗಡೆ ಮಾಡಿದ ಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಮಾತನಾಡಿ, ಅಟವೀಶ್ರೀ, ಉದ್ದಾನಶ್ರೀ ಪವಾಡ ಸದೃಶ ಕೆಲಸ ಮಾಡಿದರು. ಸಾಮಾಜಿಕ, ಶೈಕ್ಷಣಿಕ ಕೆಲಸಗಳು ಅಚ್ಚರಿ ತರುತ್ತವೆ. 1917ರಲ್ಲಿಯೇ ಸಂಸ್ಕೃತ ಅಧ್ಯಯನಕ್ಕೆ ಸಂಸ್ಕೃತ ಶಾಲೆಯನ್ನು ಉದ್ದಾನ ಶಿವಯೋಗಿಗಳು ಸ್ಥಾಪಿಸಿದರು. ಜಾತಿ, ಮತ, ಭೇದ ತೊರೆದರು ಎಂದರು.ಹಾಸನದ ಉಪನ್ಯಾಸಕ ಡಾ.ಸಿ.ಎಚ್.ಯತೀಶ್ವರ್ ಉಪನ್ಯಾಸ ನೀಡಿ, ಸಿದ್ದಗಂಗಾಮಠ ಆರೋಗ್ಯಯುತ ಸಮಾಜ ಕಟ್ಟುವ ಮಹತ್ವದ ಕಾರ್ಯ ಮಾಡಿದೆ. ಶಿವಶರಣರ ವಿಚಾರ ಧಾರೆಯ ಸಾಕಾರ ಸ್ವರೂಪವಾಗಿದೆ. ಮಠದ ಶೈಕ್ಷಣಿಕ ದಾಸೋಹ ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕೆ.ಶಿವರುದ್ರಯ್ಯ ಸ್ವಾಗತಿಸಿದರು. ವೀರಭದ್ರಯ್ಯ ನಿರೂಪಿಸಿದರು.

*

ಅಟವೀಶ್ರೀ, ಉದ್ಧಾನಶ್ರೀ ಪ್ರಶಸ್ತಿ ಪ್ರದಾನ

ನಿವೃತ್ತ ಇಂಗ್ಲಿಷ್ ಉಪನ್ಯಾಸಕ ಕೆ.ಬಸಪ್ಪ ಅವರಿಗೆ ಮರಣೋತ್ತರವಾಗಿ ನೀಡಲಾದ ಅಟವೀಶ್ರೀ ಪ್ರಶಸ್ತಿಯನ್ನು  ಅವರ ಪುತ್ರ ಬಿ.ಪ್ರಕಾಶ್ ಸ್ವೀಕರಿಸಿದರು. ಸಿದ್ದಗಂಗಾಮಠದ ಸಂಸ್ಕೃತ ಕಾಲೇಜು ನಿವೃತ್ತ ಪ್ರಾಧ್ಯಾಪಕ ಗುರುಬಸವದೇವರು ಅವರಿಗೆ ಮರಣೋತ್ತರವಾಗಿ ನೀಡಿದ ಉದ್ದಾನಶ್ರೀ ಪ್ರಶಸ್ತಿಯನ್ನು ಗುರುಬಸವ ಅವರ ಪತ್ನಿ ಪಾರ್ವತಮ್ಮ ಸ್ವೀಕರಿಸಿದರು. ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.