ಶುಕ್ರವಾರ, ಏಪ್ರಿಲ್ 23, 2021
22 °C

ಶೀಘ್ರ ಜೈವಿಕ ಪ್ಯಾನ್ ಕಾರ್ಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವ್ಯಕ್ತಿಯ ಜೈವಿಕ ಲಕ್ಷಣಗಳನ್ನು ಆಧರಿಸಿದ ಶಾಶ್ವತ ಕಾಯಂ ಸಂಖ್ಯೆ (ಪ್ಯಾನ್) ಕಾರ್ಡ್ ಅನ್ನು ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ಯಾನ್ ಕಾರ್ಡ್‌ಗಳ ನಕಲಿ ಹಾವಳಿ ಮತ್ತು ವಂಚನೆ ತಡೆಯಲು ಆದಾಯ ತೆರಿಗೆ ಪಾವತಿದಾರರಿಗೆ ದೇಶದಾದ್ಯಂತ ಈ ಬಯೊಮೆಟ್ರಿಕ್ ಪ್ಯಾನ್ ಕಾರ್ಡ್‌ಗಳನ್ನು ವಿತರಿಸಲಾಗುವುದು. ಆದಾಯ ತೆರಿಗೆದಾರರು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ಒಳಗೊಂಡಿರಬಾರದು ಎನ್ನುವ ಮಹಾಲೇಖಪಾಲರ (ಸಿಎಜಿ) ಶಿಫಾರಸಿನ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯವು ಇಂತಹ ಹೊಸ  ಪ್ಯಾನ್ ಕಾರ್ಡ್‌ಗಳನ್ನು ವಿತರಿಸಲು ಮುಂದಾಗಿದೆ.ಉದ್ದೇಶಿತ ಈ ಜೈವಿಕ ಪ್ಯಾನ್ ಕಾರ್ಡ್‌ಗಳು ಆದಾಯ ತೆರಿಗೆ ಪಾವತಿಸುವವರ ಎರಡೂ ಕೈಗಳ ತಲಾ ಎರಡು ಬೆರಳುಗಳ ಮತ್ತು ಮುಖದ ಗುರುತು ಒಳಗೊಂಡಿರಲಿದೆ. ಈಗಾಗಲೇ ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಈ ಜೈವಿಕ ಪ್ಯಾನ್ ಕಾರ್ಡ್ ಹೊಂದುವ ಆಯ್ಕೆ ಸ್ವಾತಂತ್ರ್ಯ ನೀಡಲಾಗುವುದು. ಹೊಸ  ಪ್ಯಾನ್ ಕಾರ್ಡ್‌ಗಳನ್ನು ಪಡೆಯುವುದು ಕಡ್ಡಾಯವೇನಲ್ಲ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ನಂದನ್ ನಿಲೇಕಣಿ ನೇತೃತ್ವದ ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ವಿತರಿಸುವ ‘ಆಧಾರ್’ ಸಂಖ್ಯೆಗೆ ಪ್ರತಿಯಾಗಿ ನಕಲು ಸಮಸ್ಯೆ ಎದುರಾಗಬಾರದು ಎನ್ನುವ ಕಾರಣಕ್ಕೆ ಹಣಕಾಸು ಸಚಿವಾಲಯವು ಕಳೆದ ವರ್ಷ ಈ ಆಲೋಚನೆ ಕೈಬಿಟ್ಟಿತ್ತು. ಗುರುತಿನ ಮಹತ್ವದ ದಾಖಲೆಯಾಗಿರುವ ‘ಪ್ಯಾನ್’ ಕಾರ್ಡ್‌ನ ದುರುಪಯೋಗ ತಡೆಗಟ್ಟಲು ಜೈವಿಕ ಪ್ಯಾನ್ ಕಾರ್ಡ್ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ವ್ಯಕ್ತಿಯ ಜೈವಿಕ ಲಕ್ಷಣಗಳನ್ನು ಒಳಗೊಂಡಿರುವ ಪ್ಯಾನ್ ಕಾರ್ಡ್ ವಿತರಣೆಯ ಆಲೋಚನೆಯು ಹಿಂದಿನ ಹಣಕಾಸು ಸಚಿವ ಪಿ.ಚಿದಂಬರಂ ಅವರದ್ದು ಆದಾಯ ತೆರಿಗೆ, ಪೊಲೀಸ್ ಮತ್ತಿತರ ಜಾರಿ ಸಂಸ್ಥೆಗಳು ನಡೆಸಿದ ದಾಳಿಗಳಲ್ಲಿ ನಕಲಿ ಪ್ಯಾನ್ ಕಾರ್ಡ್‌ಗಳು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಜೈವಿಕ ಪ್ಯಾನ್ ಕಾರ್ಡ್ ವಿತರಿಸಲು ಉದ್ದೇಶಿಸಲಾಗಿತ್ತು.2010ರ ಮಾರ್ಚ್ ತಿಂಗಳವರೆಗೆ ದೇಶದಲ್ಲಿ ಒಟ್ಟು 9.58 ಕೋಟಿಗಳಷ್ಟು ಪ್ಯಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಆದರೆ, ಕಳೆದ ಹಣಕಾಸು ವರ್ಷದಲ್ಲಿ ಕೇವಲ 3.40 ಕೋಟಿಗಳಷ್ಟು ಆದಾಯ ತೆರಿಗೆ ಲೆಕ್ಕಪತ್ರಗಳನ್ನಷ್ಟೇ (ಐ.ಟಿ ರಿಟರ್ನ್ಸ್) ಸಲ್ಲಿಸಿರುವುದು ಇತ್ತೀಚೆಗೆ ಸಂಸತ್ತಿಗೆ ಸಲ್ಲಿಸಿದ ಮಹಾಲೇಖಪಾಲರ ವರದಿಯಲ್ಲಿ ತಿಳಿದು ಬಂದಿದೆ. ಪ್ಯಾನ್ ಸಂಖ್ಯೆ ಹೊಂದಿರುವವರು ಮತ್ತು ಐಟಿ ರಿಟನ್ಸ್ ಸಲ್ಲಿಸುವವರ ಮಧ್ಯೆ 6 ಕೋಟಿಗಳಷ್ಟು ಅಂತರ ಇರುವುದು ಪತ್ತೆಯಾಗಿದೆ. ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ‘ಪ್ಯಾನ್ ಕಾರ್ಡ್’ ವಿತರಿಸಿರುವುದು ಮತ್ತು ಇಂತಹ ಕಾರ್ಡ್ ಹೊಂದಿರುವ ಕೆಲವರು ಮೃತಪಟ್ಟಿರುವುದು ಈ ಅಂತರ ಹೆಚ್ಚಲು ಕಾರಣವಾಗಿದೆ ಎಂದು ‘ಸಿಎಜಿ’ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಈ ಹಿನ್ನೆಲೆಯಲ್ಲಿ ನಕಲಿ ಕಾರ್ಡ್ ಹಾವಳಿ ನಿಯಂತ್ರಿಸಲು ಮತ್ತು ಕಾರ್ಡ್ ಹೊಂದಿದ ಮೃತರ ಸಂಖ್ಯೆಯನ್ನು ನಿಖರವಾಗಿ ದಾಖಲಿಸಲು  ಆದಾಯ ತೆರಿಗೆ ಇಲಾಖೆಯು ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.ಈ ವರ್ಷಾಂತ್ಯದ ಹೊತ್ತಿಗೆ ಜೈವಿಕ ಪ್ಯಾನ್ ಕಾರ್ಡ್‌ಗಳ ವಿತರಣೆ ಕಾರ್ಯಾರಂಭ ಮಾಡಲಿದೆ. ಪ್ಯಾನ್ ಕಾರ್ಡ್ 10 ಸಂಖ್ಯೆಗಳನ್ನು ಒಳಗೊಂಡಿದ್ದರೆ, ಜೈವಿಕ ಪ್ಯಾನ್ ಕಾರ್ಡ್ ವ್ಯಕ್ತಿಯ ದೈಹಿಕ ಲಕ್ಷಣಗಳನ್ನು ಒಳಗೊಂಡಿರಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.