ಶನಿವಾರ, ಜೂನ್ 19, 2021
28 °C
ಎಐಡಿವೈಒ, ಎಐಡಿಎಸ್‌ಒ ಕಾರ್ಯಕರ್ತರ ಪ್ರತಿಭಟನೆ

ಶುಲ್ಕ ವಿನಾಯಿತಿ ನಿಬಂಧನೆ ತೆರವಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿಗೆ ಹೇರಿರುವ ಎಲ್ಲ ನಿಬಂಧನೆಗಳನ್ನು ತೆಗೆದು ಹಾಕುವಂತೆ ಆಗ್ರಹಿಸಿ ಎಐಡಿವೈಒ ಮತ್ತು ಎಐಡಿಎಸ್‌ಒ ಜಿಲ್ಲಾ ಘಟಕದ ಕಾರ್ಯಕರ್ತರು, ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ

ನಡೆಸಿದರು.ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲಕಾಲ

ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಆರ್ಥಿಕವಾಗಿ ಸಬಲರಲ್ಲದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಾಲೇಜು ಸೇರುವ ಸಂದರ್ಭದಲ್ಲಿ ಬೋಧನಾ ಶುಲ್ಕ, ಪರೀಕ್ಷಾ ಶುಲ್ಕ, ಪ್ರಯೋಗಾಲಯ ಶುಲ್ಕ, ಕ್ರೀಡಾ ಶುಲ್ಕಕ್ಕೆ ರಿಯಾಯಿತಿ ನೀಡಲಾಗುತ್ತಿತ್ತು. ಈ ವಿನಾಯಿತಿಯು ಶುಲ್ಕ ಕಟ್ಟುವಾಗಲೇ ವಿದ್ಯಾರ್ಥಿಗಳಿಗೆ ಲಭಿಸುತ್ತಿತ್ತು. ಆದರೆ, ರಾಜ್ಯ ಸರ್ಕಾರ 2013ರ ಅಕ್ಟೋಬರ್‌ನಲ್ಲಿ ಹೊರಡಿಸಿದ ಆದೇಶದ ಪ್ರಕಾರ ಎಲ್ಲ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಪ್ರವೇಶದ ಸಂದರ್ಭದಲ್ಲಿ ಪೂರ್ಣ ಶುಲ್ಕ ಭರಿಸಬೇಕಿದ್ದು, ಇದರಿಂದ ನಮಗೆ ತೊಂದರೆಯಾಗಲಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.ಸರ್ಕಾರದ ಆದೇಶದನ್ವಯ ಶುಲ್ಕ ವಿನಾಯಿತಿ ಪಡೆಯಲು ಹಿಂದಿನ ಪರೀಕ್ಷೆಗಳಲ್ಲಿ ಪ್ರವರ್ಗ 1 ಮತ್ತು ಅಂಧ ವಿದ್ಯಾರ್ಥಿಗಳು ಶೇ 50ರಷ್ಟು ಅಂಕಗಳನ್ನು, ಪ್ರವರ್ಗ 2ಎ, 3ಎ, ಮತ್ತು 3ಬಿ ವರ್ಗದವರು ಶೇ 60ರಷ್ಟು ಅಂಕ ಪಡೆದಿರಬೇಕು. ಆದರೆ, ಅತಿ ಹೆಚ್ಚು ಪ್ರವೇಶ ಪಡೆಯುವ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಪ್ರಾಧ್ಯಾಪಕರೇ ಇಲ್ಲ. ಕೆಲವರು ಗುತ್ತಿಗೆ ಆಧಾರದ ಮೇಲೆ ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಪ್ರಯೋಗಾಲಯ, ಗ್ರಂಥಾಲಯ, ತರಗತಿಗಳ ಸಮಸ್ಯೆ ನಡುವೆ ವಿದ್ಯಾರ್ಥಿಗಳು ಸರ್ಕಾರ ನಿಗಧಿ ಪಡಿಸಿರುವಷ್ಟು ಅಂಕ ಗಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.ಎಲ್ಲ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸುವ ಸಂದರ್ಭದಲ್ಲೇ ವಿನಾಯಿತಿ ಲಭ್ಯವಾಗಬೇಕು. ಪೂರ್ಣ ಮೊತ್ತ ಪಾವತಿಸಿಕೊಂಡು ಬ್ಯಾಂಕ್‌ ಖಾತೆಗೆ ವರ್ಗಾಯಿಸುವ ವಿಧಾನ ಹಿಂಪಡೆಯಬೇಕು. ಕಡ್ಡಾಯವಾಗಿ ಇಂತಿಷ್ಟು ಅಂಕ ಪಡೆಯಬೇಕೆನ್ನುವ ಷರತ್ತನ್ನು ತೆಗೆದುಹಾಕಿ, ಮುಂದಿನ ತರಗತಿಯ ಪ್ರವೇಶಕ್ಕೆ ಶುಲ್ಕ ವಿನಾಯಿತಿ ದೊರಕುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.