ಗುರುವಾರ , ಮೇ 26, 2022
31 °C

ಶ್ರೀಮಂತರ ದೇಶದಲ್ಲಿ ಬಡವರಿಗೆ ಅಕ್ಕಿಯೂ ಬೇಡವೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗ್ಗದ ಅಕ್ಕಿ ಹಾಗೂ ಅಗ್ಗದ ಕೂಲಿಯ ಬಗ್ಗೆ ಪ್ರತಿಕ್ರಿಯಿಸಿರುವ ಚಿಂತನೆಗಳನ್ನು `ಸಂಗತ'ದಲ್ಲಿ ಪ್ರಕಟಿಸುವ ಮೂಲಕ ಚರ್ಚೆಗೆ ಅವಕಾಶ ಮಾಡಿದ್ದಕ್ಕಾಗಿ `ಪ್ರಜಾವಾಣಿ'ಗೆ ಧನ್ಯವಾದಗಳು. ಈ ದೇಶ ಶ್ರೀಮಂತರು ಸೃಷ್ಟಿಸುತ್ತಿರುವ ಸಂಪತ್ತಿನ ಮರ್ಜಿಯಲ್ಲಿ ಉಸಿರಾಡುತ್ತಿದೆ. `ಅದರಲ್ಲೂ ಈ ದೇಶದ ಬಡವರಿಗೆ ಸಿಗುತ್ತಿರುವ ಸೇವೆಗಳು ಶ್ರಿಮಂತರು ಕಟ್ಟುತ್ತಿರುವ ತೆರಿಗೆ ಹಣದಿಂದ ಲಭ್ಯವಾಗುತ್ತಿದ್ದು ಇನ್ನೂ ಎಷ್ಟು ದಿನ ಬಡವರಿಗೆ ಈ ಸೇವೆ ?ಹೀಗೆ ಆದರೆ, ಅವರ ಕಾಲ ಮೇಲೆ ಅವರು ನಿಲ್ಲುವುದು ಯಾವಾಗ?...' ಈ ಮುಂತಾದ ಪ್ರಶ್ನೆಗಳನ್ನು ಬಾಗೇಪಲ್ಲಿಯ ಆನಂದ್, ದೇವನೂರ ಮಹಾದೇವ ಅವರ ಮುಂದಿಟ್ಟಿದ್ದಾರೆ. ಇವರು ದೇಶದ ಶ್ರಿಮಂತರ ಪಟ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದ್ದಾರೊ ನಮಗಂತೂ ಗೊತ್ತಿಲ್ಲ. ಇವರ ವಾದದ ಧಾಟಿಯನ್ನು ಗಮನಿಸಿದರೆ ಇವರೂ ಒಬ್ಬ ಶ್ರಿಮಂತರೇ ಇರಬೇಕು, ಇರಲಿ.  ಆದರೆ, ಇವರು ಈ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಬೇಕಾದುದು ಉಚಿತವೆಂದು ಕಾಣುತ್ತದೆ.  *ಈ ದೇಶದ ಬಡವರು ಸರ್ಕಾರಕ್ಕೆ ತೆರಿಗೆ ಕಟ್ಟುವುದಿಲ್ಲವೆ? ತೆರಿಗೆ ಕಟ್ಟುವಲ್ಲಿ ಬಡವರ ಪಾಲೆಷ್ಟು, ಶ್ರಿಮಂತರ ಪಾಲೆಷ್ಟು ಎನ್ನುವ ನಿಖರ ಮಾಹಿತಿ ತಮ್ಮ ಬಳಿ ಇದೆಯೇ ?*ಸರ್ಕಾರದಿಂದ ಸವಲತ್ತುಗಳನ್ನು ಪಡೆಯುವ ವಿಷಯ ಬಂದಾಗ ಮಹಿಳೆಯರು, ದಲಿತರು, ಬಡವರಿಗೆ ಸಿಗುತ್ತಿರುವ ಪಾಲೆಷ್ಟು? 

ವ್ಯವಹಾರಸ್ಥರು, ಉದ್ಯಮಿಗಳು, ದಲ್ಲಾಳಿಗಳು, ಅಧಿಕಾರಿಗಳ ಪಾಲೆಷ್ಟು ಎನ್ನುವ ಅಂಕಿ ತಮ್ಮ ಬಳಿ ಇದೆಯೇ?*ಪಶ್ಚಿಮ ಬಂಗಾಳವನ್ನು ದೀರ್ಘ ಕಾಲ ಆಳಿದ  ಕಮ್ಯುನಿಸ್ಟ್ ನಾಯಕರು ಆ ಮೂಲಕ ಗಳಿಸಿದ ವೈಯಕ್ತಿಕ ಆಸ್ತಿಯೆಷ್ಟು? ಅವರ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳೆಷ್ಟು, ಲೂಟಿ ಹೊಡೆದ ಸಾರ್ವಜನಿಕ ಸಂಪತ್ತೆಷ್ಟು ? ಲೆಕ್ಕ ನೀಡಬಲ್ಲಿರಾ? ಅಲ್ಲೇ ಏಕೆ, ಕೇರಳ, ಈಗಲೂ ಅಧಿಕಾರದಲ್ಲಿರುವ ತ್ರಿಪುರ ರಾಜ್ಯದಲ್ಲಿ ಕಮ್ಯುನಿಸ್ಟರು ಕೊಳ್ಳೆ ಹೊಡೆದ ಆಸ್ತಿಯ ವಿವರ ಕೊಡಬಲ್ಲಿರಾ? ಮಂತ್ರಿ-ಮುಖ್ಯಮಂತ್ರಿಗಳ ಆಸ್ತಿ ಗಳಿಕೆಯ ಗ್ರಾಫ್ ಒದಗಿಸಬಲ್ಲಿರಾ?*ಬಡವರಿಗೆ ಅಗ್ಗದ ಅಕ್ಕಿ, ಸವಲತ್ತುಗಳನ್ನು ನೀಡಿದರೆ ಅವರು ಸ್ವಾವಲಂಬಿಗಳಾಗುವುದಿಲ್ಲ, ಒಪ್ಪೋಣ. ಬಡತನದಿಂದ ಬೆಂಡಾದ ಜನರಿಗೆ ಅಕ್ಕಿ-ಬೇಳೆ, ಶಿಕ್ಷಣ, ಉದ್ಯೋಗ, ವಸತಿ ಮುಂತಾದವನ್ನು ಹಂತಹಂತವಾಗಿ ನೀಡಿ ಅವರನ್ನು ಮೇಲೆತ್ತುವ ಬದಲು ಏಕ್‌ದಂ ಸ್ವಾವಲಂಬಿಗಳನ್ನಾಗಿ ಪರಿವರ್ತಿಸುವ ಯಾವುದಾದರೂ ಸೂತ್ರ ತಮ್ಮ ಬಳಿಯಿದೆಯೇ ?

-ಎನ್. ಪ್ರಭಾ, ದೊಡ್ಡಬೆಳವಂಗಲ, ದೊಡ್ಡಬಳ್ಳಾಪುರ  ತಾ.ಲೆಕ್ಕ ಹಾಕಲು ನಿಮ್ಮ ಬಳಿ ಸಮಯವಾದರೂ ಎಲ್ಲಿದೆ?


ಸಾಹಿತಿ ಹಾಗೂ ಚಿಂತಕರಾದ ದೇವನೂರರ ಲೇಖನದ ಬಗೆಗಿನ ಪ್ರತಿಕ್ರಿಯೆಗಳು ಉಳ್ಳವರ ಮನಸ್ಥಿತಿಯನ್ನು ಎತ್ತಿತೋರಿಸಿದೆ. ಆ ಇಬ್ಬರೂ ದನಿ ಎತ್ತಿರುವುದು ಉಳ್ಳವರ ಮೇಲಿನ ಅನುಕಂಪದಿಂದ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಆದರೆ ಅವರು ನೀಡಿರುವ ಕೆಲವು ಸುಳುಹುಗಳನ್ನು ಉಲ್ಲೇಖಿಸುತ್ತೇನೆ.ಹೌದು ಸ್ವಾಮಿ, ವೋಟ್ ಹಾಕುವವರು ನಾವೇ  (ಬಡವರು), ಆದರೆ ಹಾಕಿಸಿಕೊಳ್ಳುವವರು ಮಾತ್ರ ನೀವು (ಉಳ್ಳವರು). ನಮಗೆ ನಿಮ್ಮಂತೆ ಯಾವುದೇ ಲೈಫ್‌ಟೈಮ್ ಕಾಪಾಡುವ ಪಾಲಿಸಿ, ಎಫ್‌ಡಿಗಳು, ಷೇರುಗಳ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ರಾಜಕೀಯ ಪಕ್ಷಗಳು ಚುನಾವಣೆ ಸಮಯದಲ್ಲಿ  ಕೊಡುವ ಸೀರೆಯಿಂದ ನಮ್ಮ ತಾಯಂದಿರ, ಅಕ್ಕತಂಗಿಯರ, ಹೆಂಡತಿಯ ಮಾನಮುಚ್ಚಲು ಹೆಣಗಾಡುತ್ತೇವೆ.ಯಾಕೆಂದರೆ  ಬಡತನಕ್ಕೆ ಮಕ್ಕಳು ಜಾಸ್ತಿ  ಅನ್ನುವಂತೆ ಕಷ್ಟಗಳು, ಅಪೌಷ್ಟಿಕತೆಯ ರೋಗಗಳು ಒತ್ತರಿಸಿಕೊಂಡು ಬರುವುದು ನಮಗೇ. ನೀವು ಕೊಟ್ಟ ಇನ್ನೂರೈವತ್ತು ರೂಪಾಯಿ ಕೂಲಿಯಲ್ಲಿ ಒಂದು ಕೆ.ಜಿ ಅಕ್ಕಿಗೆ 56 ರೂಪಾಯಿಗಳು. ರೋಗದಿಂದ ಬಳಲುತ್ತಿರುವ ಅವ್ವನಿಗೆ, ಮಕ್ಕಳ ಸಣ್ಣಪುಟ್ಟ ಕಾಯಿಲೆಗೆ, ಅವರ ನೋಟ್ ಪುಸ್ತಕ, ಪೆನ್ನು ಪೆನ್ಸಿಲ್ಲಿಗೆ ಸಾಕಾಗುವುದಿಲ್ಲ. ಅಂತಹುದರಲ್ಲಿ ಹೊಟ್ಟೆಬಟ್ಟೆಗೆ ಎಲ್ಲಿಂದ ತರೋಣ ಸ್ವಾಮಿ.ಅದಕ್ಕೇ ಪುಕ್ಕಟೆ ಅಕ್ಕಿ, ಮತ ಲಂಚಕ್ಕೆ, ಸೀರೆ ಬಟ್ಟೆಗೆ ಕೈಯೊಡ್ಡುತ್ತೇವೆ. ಕೊಡುವವರ ಮುಖವನ್ನು ಮತ್ತೆ ನೋಡುವುದೇ ಮುಂದಿನ ಚುನಾವಣೆಗೆ. ಯಾಕೆಂದರೆ, ವೋಟ್ ಹಾಕದ ನಿಮ್ಮ ಕೆಲಸಕಾರ್ಯಗಳನ್ನು ಮಾಡಿಕೊಡಲು ಅವರಿಗೆ ವೇಳೆ ಸಾಕಾಗುವುದಿಲ್ಲ! ಭ್ರಷ್ಟಾಚಾರದ ಪದದ ಅರ್ಥವೇ ಗೊತ್ತಿಲ್ಲ. ಆದ್ದರಿಂದ ನಾವು ಹಾಕುವ ವೋಟು ಅಂದಿನ ನಮ್ಮ ಹಸಿವಿಗೆ ಮಾತ್ರ.ನಮ್ಮ ಜಮೀನನ್ನು ನಿಮ್ಮ ನಾರಾಯಣಮೂರ್ತಿಗಳಂಥ ಎಷ್ಟೋ ದೇಶದ ಉದ್ಧಾರಕರಿಗೆ (?) ಸರ್ಕಾರಗಳು ಉದಾರವಾಗಿ ನೀಡಿದ್ದರ ಪರಿಣಾಮ ನಾವು ನಿಮ್ಮಂತೆ ಜಮೀನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಕ್ಷಮಿಸಿ ! ಭೂಮಿ ಕಿತ್ತುಕೊಳ್ಳುವ ಸರ್ಕಾರದ ವಿರುದ್ಧ ದಾವೆ ಹೂಡಬಹುದಾದ ಕೋರ್ಟಿನ ವಿಳಾಸವೂ ಗೊತ್ತಿಲ್ಲ !ಇನ್ನು ಐದಾರು ವರ್ಷ ಕಾಲೇಜಿನ ಮೆಟ್ಟಿಲು ತುಳಿದ ತಜ್ಞ ವೈದ್ಯನಿಗೆ ಬರೀ ಕನ್ಸಲ್ಟೇಷನ್ ಚಾರ್ಜ್ ಅಂತಲೇ ಸಾವಿರವೋ ಎರಡು ಸಾವಿರವೋ ನೀಡಿ ಅವರನ್ನು ಮುಂಗಡವಾಗಿ ಕಾಯ್ದಿರಿಸುತ್ತೀರಿ.ಆದರೆ ನಿಮ್ಮ ಶುಚಿತ್ವಕ್ಕೆ ಮಹತ್ವ ನೀಡುವ ಕೆಲಸವಾದ ಪೌರಕಾರ್ಮಿಕರಿಗೆ ಸಾವಿರ ನೀಡುವುದಕ್ಕೆ ನಿಮಗೆ ತುಂಬಾ ನೋವಾಗುತ್ತದೆ ಅಲ್ಲವೇ ? ತಲೆತಲಾಂತರದಿಂದ ದಬ್ಬೆ ಹಾಕುವ ಪೌರಕಾರ್ಮಿಕ ಮತ್ತು ಮೊನ್ನೆ ತಾನೇ ಡಾಕ್ಟರ್ ಪದವಿ ಮುಗಿಸಿದ ವೈದ್ಯನ ತಿಂಗಳ ಸಂಬಳ ಅನುಪಾತವನ್ನು ನೀವು ಲೆಕ್ಕ ಹಾಕಿದ್ದೀರ ಸ್ವಾಮಿ? ಲೆಕ್ಕ ಹಾಕಲು ನಿಮ್ಮ ಬಳಿ ಸಮಯವಾದರೂ ಎಲ್ಲಿದೆ ಹೇಳಿ ? ಸಮಾನತೆಗಾಗಿ ಬಂಡವಾಳಶಾಹಿ ಅಮೆರಿಕಾದ ವೀಸಾಕ್ಕೆ ಎಷ್ಟು ಖರ್ಚಾಗಬಹುದು? ಯಾರನ್ನು ಸಂಪರ್ಕಿಸಿದರೆ ಒಳಿತು ಎಂಬ ಲೆಕ್ಕಾಚಾರದಲ್ಲಿ ಬ್ಯುಸಿಯಿದ್ದೀರ... ಅಲ್ಲವೇ?

-ವಿ.ಆರ್.ಕಾರ್ಪೆಂಟರ್, ಯಲಹಂಕಅಷ್ಟು ಹಣ ಕೊಡುವುದರಲ್ಲಿ ತಪ್ಪೇನಿದೆ?

ದೇವನೂರರ ಲೇಖನಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಚಂದ್ರಶೇಖರಯ್ಯನವರು, ತಾವೇ ಸ್ವತಃ ದಬ್ಬೆ ಹಿಡಿದು ಕಟ್ಟಿಕೊಂಡಿದ್ದ ಡ್ರೈನೇಜ್ ಸರಿಪಡಿಸಲು ಪ್ರಯತ್ನಿಸಿದ್ದು, ವಿಫಲರಾಗಿ ಪೌರಕಾರ್ಮಿಕರಿಗೆ ಎಂಟುನೂರು ರೂಪಾಯಿ ತೆತ್ತಿದ್ದನ್ನು ಒಂದು ಸಾಧನೆ ಎಂಬಂತೆ ಬರೆದಿದ್ದಾರೆ.ಅದೂ, ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಕೊಡುವುದರಿಂದಲೇ ಹೀಗಾಗಿದೆ ಎಂಬಂತೆ. ಸ್ವಾಮಿ, ಇಂದು ಯಾವುದರ, ಯಾವ ಕೆಲಸದವರ ಬೆಲೆ ಕಡಿಮೆಯಿದೆ ಹೇಳಿ? ಮೊನ್ನೆ ಸುಟ್ಟುಹೋಗಿದ್ದ ಒಂದು ಎಂ.ಸಿ.ಬಿ. ಬದಲಾಯಿಸುವುದಕ್ಕೆ  ಇನ್ನೂರೈವತ್ತು ರೂಪಾಯಿ  ಕೊಡಬೇಕಾಯಿತು. ಅದೂ ಒಂದು ದಿನ ಕತ್ತಲೆಯಲ್ಲಿ ಕಳೆದ ಮೇಲೆ! ಕಂಪ್ಯೂಟರ್ ಫಾರ್ಮ್ಯೋಟ್ ಮಾಡಿ, ಆಂಟಿವೈರಸ್ ಇನ್ಸ್ಟಾಲ್ ಮಾಡಿಕೊಡುವುದಕ್ಕೆ ಸಾವಿರ ರೂಪಾಯಿ! ಇಂಟರ್ನೆಟ್ ಸಂಪರ್ಕ ಸರಿಪಡಿಸಲು ಬಂದವರಿಗೆ ಐನೂರು ರೂಪಾಯಿ. ನಾವೇ ತಂದು ಕೊಡುವ ಒಂದು ಬಾಟಲ್ ರಕ್ತವನ್ನು, ನಾವೇ ಕೊಡಿಸುವ ಸೂಜಿ, ಟ್ಯೂಬ್ ಮೂಲಕ ರೋಗಿಯ ದೇಹಕ್ಕೆ ಹರಿಸಲು ಒಂದುಸಾವಿರ ರೂಪಾಯಿ!ಗಮನಿಸಿ, ಮೇಲಿನ ಯಾವ ಕೆಲಸವೂ ದೈಹಿಕ ಶ್ರಮವನ್ನು ಅಷ್ಟಾಗಿ ಬಯಸುವುದಿಲ್ಲ. ಅಸಹ್ಯವೆನ್ನಿಸುವ ವಸ್ತುಗಳನ್ನು ಮುಟ್ಟಬೇಕಾಗಿಲ್ಲ. ವಾಸನೆಗೆ ಮೂಗು ಸಿಂಡರಿಸಬೇಕಾಗಿಲ್ಲ. ಅಂಥಾದ್ದರಲ್ಲಿ, ಯಾರ್ಯಾರೊ ಮನೆಯ ಕಕ್ಕಸ್ಸನ್ನು ಕ್ಲೀನ್ ಮಾಡುವುದಕ್ಕೆ ಅಷ್ಟು ಹಣ ಕೊಡುವುದರಲ್ಲಿ ತಪ್ಪೇನಿದೆ?.ಶತಶತಮಾನಗಳಿಂದ, ಹೊಲಸನ್ನು ಸ್ವಚ್ಛಗೊಳಿಸುತ್ತಿರುವ ನಮ್ಮ ಸಹಜೀವಿಗಳನ್ನು ಇನ್ನು ಮುಂದೆಯೂ ಅದೇ ಸ್ಥಿತಿಯಲ್ಲಿ ಇರಲಿ ಎಂದು ಬಯಸುವ, ಅವರ ಕೆಲಸಕ್ಕೆ, ಅವರೇ ಕೂಲಿ ನಿರ್ಧರಿಸುವ ಅವರ ಹಕ್ಕನ್ನು ಕಸಿದುಕೊಳ್ಳುವ ಮನಸ್ಥಿತಿ ಎಷ್ಟು ಸರಿ? ಈಗ ಅವರಿಗೆ ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಮೂಲಕ ಆಹಾರ ಭದ್ರತೆ ದೊರಕಿದರೆ, ಅವರ ಇನ್ನಿತರ ಅಗತ್ಯಗಳಿಗೆ, ಕೊನೆಯ ಪಕ್ಷ ತಮ್ಮ ದುಡಿಮೆಗೆ ತಕ್ಕ ಕೂಲಿಯನ್ನು ಡಿಮ್ಯೋಂಡ್ ಮಾಡಲಾದರೂ ಶಕ್ತಿ ಬರುತ್ತದೆ ಅಲ್ಲವೆ?ಕೃಷಿ ಕೆಲಸಕ್ಕೆ ಇನ್ನೂರೈವತ್ತು ಕೊಡುವುದನ್ನೇ ದೊಡ್ಡದೆಂದು ನೀವು ಭಾವಿಸಿ, ಅದರಿಂದ ಯಾವುದೇ ಲಾಭವಿಲ್ಲ ಎನ್ನುವುದಾದರೆ, ಆ ಜಮೀನನ್ನು ಇಟ್ಟುಕೊಳ್ಳುವುದು ಏಕೆ ಹೇಳಿ? ಅದಕ್ಕಿರುವ ಚಿನ್ನದ ಬೆಲೆಯ ಕಾರಣದಿಂದ ಅಲ್ಲವೆ? ಸ್ವಾಮೀ ನಾನು ಆಂಶಿಕ ಕೃಷಿಕನೆ. ಸಮಯ ಸಿಕ್ಕಾಗಲೆಲ್ಲ ನಾನು ಜಮೀನಿನಲ್ಲಿ ದುಡಿಯುತ್ತೇನೆ. ಕೃಷಿ ಕಾರ್ಮಿಕರ ಮೇಲೂ ಅವಲಂಬಿತನಾಗಿದ್ದೇನೆ. ನಾನು ನಿಮ್ಮ ಹಾಗೆ ಸಂಜೆಯ ಖರ್ಚಿಗೆ ಹಣ ಕೊಡುವುದಿಲ್ಲ! ಆದರೆ, ಅವರು ಬಂದಾಗ ಕೆಲಸ ಮಾಡಿಸಿಕೊಳ್ಳುತ್ತೇನೆ.ನೀವೇ ಹೇಳಿದ ಹಾಗೆ ದುಗ್ಗಮ್ಮನ ದಯೆ ಇದ್ದರೆ ಮಾತ್ರ ಕೆಲಸ. ಇಲ್ಲದಿದ್ದರೆ ಉಪವಾಸ ಎನ್ನುವವರಿಗೆ ಒಂದು ರೂಪಾಯಿಗೆ ಕೆ.ಜಿ ಅಕ್ಕಿ ಕೊಟ್ಟರೆ ತಪ್ಪೇನು? ಅದರಿಂದ ಅವರು ಏಕೆ ಸೋಮಾರಿಗಳಾಗಬೇಕು? ನಿಮಗೆ ಹೊಟ್ಟೆ ಬಟ್ಟೆಗೆ ತೊಂದರೆಯಿಲ್ಲ. ಕೃಷಿ ಜಮೀನಿದೆ. ಬೆಂಗಳೂರಿನಲ್ಲಿ  ಸ್ವಂತ ಮನೆ ಕಟ್ಟಿಕೊಂಡು ವಾಸವಾಗಿದ್ದೀರಿ. ಹಾಗೆಂದು ನೀವು ಸೋಮಾರಿಗಳಾಗಿದ್ದೀರಾ? ಹಸಿವಿಗೆ, ಒಂದು ಸೂರಿಗೆ, ಸತ್ತಾಗ ನಡೆಸುವ ಸಂಸ್ಕಾರಕ್ಕೆ ಕೊನೆಗೆ ಕನಸು ಕಾಣಲಾದರೂ ಹೊಟ್ಟೆ ತುಂಬಬೇಕಲ್ಲವೆ?ಹೌದು ಇಂದು ಪ್ರತಿಯೊಂದರಲ್ಲೂ ರಾಜಕೀಯವನ್ನು ಕಾಣುವ ಮನಸ್ಥಿತಿಯನ್ನು ನಾವು ತಲುಪಿದ್ದೇವೆ. ಅಂತಹ ಸ್ಥಿತಿ ನಿರ್ಮಾಣವಾಗಿದೆ ಕೂಡಾ. ಆದರೆ ಅದಕ್ಕೆ ಕಾರಣರಾರು? ಇನ್ನೊಬ್ಬ ಮಹನೀಯರು (ಜಿ.ವಿ.ಆನಂದ್) ಅದಕ್ಕೂ ಬಡವರನ್ನೇ ಕಾರಣವನ್ನಾಗಿಸಿದ್ದಾರೆ. ಅಕ್ಕಿ ಸೀರೆಯ ಆಸೆಗಾದರೂ ಅವರು ಮತ ಹಾಕುತ್ತಾರೆ. ಆದರೆ ಆನಂದ್ (ಅವರೇ ಹೇಳಿರುವಂತೆ) ಅಂತಹ ಉಳ್ಳವರು ಮತವನ್ನೇ ಹಾಕುವುದಿಲ್ಲ! ಪುಕ್ಕಟೆ ಅಕ್ಕಿ ಸೀರೆಗೆ ಬಾಯಿ ಬಿಡುವಂತಹ ಸ್ಥಿತಿಯಲ್ಲಿ ಜನರಿದ್ದಾರೆ; ಅಂತಹ ಸ್ಥಿತಿಯನ್ನು ಬದಲಾಯಿಸಲಾದರೂ ಆನಂದ್ ತರಹದವರು ವೋಟು ಹಾಕಬೇಕಲ್ಲವೆ? ಮೊನ್ನೆ ಆಧಾರ್ ಕಾರ್ಡ್ ಮಾಡಿಸಲು ಬಂದವರೊಬ್ಬರು, ತಾವು ವೋಟ್ ಹಾಕದೇ ಇರುವುದರಿಂದ ವೋಟರ್ ಕಾರ್ಡ್ ಮಾಡಿಸಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಇಂತಹವರು ಒಂದು ರೂಪಾಯಿಗೆ ಕೆ.ಜಿ ಅಕ್ಕಿ ಕೊಡುವುದರ ಬಗ್ಗೆ ಕೀಳಾಗಿ ಮಾತನಾಡುವುದು ಯಾವ ನ್ಯಾಯ ಹೇಳಿ?

-ಡಾ. ಬಿ.ಆರ್. ಸತ್ಯನಾರಾಯಣ,  ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.