ಮಂಗಳವಾರ, ಮೇ 24, 2022
30 °C

ಶ್ರೀರಾಮುಲುಗೆ ಸಚಿವ ಸ್ಥಾನವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂದಿನ ತಿಂಗಳ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಆಗಲಿದೆ. ಆ ವೇಳೆ ಗಣಿಧಣಿ ಶಾಸಕ ಬಿ.ಶ್ರೀರಾಮುಲು ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಂಗಳವಾರ ಇಲ್ಲಿ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪ ಅವರ ಹೆಸರು ಇದ್ದ ಕಾರಣಕ್ಕೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು. ಹಾಗೆಯೇ ಲೋಕಾಯುಕ್ತ ವರದಿಯಲ್ಲಿ ಶ್ರೀರಾಮುಲು ಹೆಸರು ಕೂಡ ಇದೆ. ಅವರನ್ನು ಹೇಗೆ ಸಂಪುಟಕ್ಕೆ ತೆಗೆದುಕೊಳ್ಳಲು ಆಗುತ್ತದೆ? ಒಬ್ಬರಿಗೊಂದು ನ್ಯಾಯ ಹೇಗೆ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದರು.

ಆದರೆ, ಪ್ರತ್ಯೇಕ ಕಾರ್ಯಕ್ರಮವೊಂದರ ನಂತರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲ ಎಂದರು.

ಈಶ್ವರಪ್ಪ ಅವರ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. `ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿರುವ ತನಿಖಾ ವರದಿಯ ಆಧಾರದಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವರದಿ ತಯಾರಿಸಬೇಕು. ನೂತನ ಲೋಕಾಯುಕ್ತರ ನೇಮಕ ಆಗಬೇಕು. ವಿದ್ಯುತ್ ಸಮಸ್ಯೆ ಕೂಡ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕೆ ಇಲ್ಲ~ ಎಂದು ಮುಖ್ಯಮಂತ್ರಿ ವಿವರಣೆ ನೀಡಿದರು.

ರಥಯಾತ್ರೆ: ರಾಜಕೀಯದಲ್ಲಿ ಶುದ್ಧತೆ ಇರಬೇಕು ಎಂಬ ಆಶಯದಿಂದ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು `ಜನಚೇತನ ಯಾತ್ರೆ~ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಮಂಗಳೂರು, ಉಡುಪಿ, ಕಾರವಾರದ ಮೂಲಕ ಸಾಗುವ ಈ ಯಾತ್ರೆಯ ಅಂಗವಾಗಿ ಇದೇ 30ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರಲ್ಲಿ ಅಡ್ವಾಣಿ ಅವರೂ ಹಾಜರಿರುತ್ತಾರೆ ಎಂದು ಗೌಡರು ತಿಳಿಸಿದರು.

ಈಶ್ವರಪ್ಪ ಮಾತನಾಡಿ, ಸಂಪುಟ ವಿಸ್ತರಣೆ ನಂತರ ನಿಗಮ- ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಲೋಕಾಯುಕ್ತರ ನೇಮಕವೂ ನಡೆಯಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.