ಶ್ರೀರಾಮುಲು ಉಪವಾಸ ಸತ್ಯಾಗ್ರಹ ಆರಂಭ

7

ಶ್ರೀರಾಮುಲು ಉಪವಾಸ ಸತ್ಯಾಗ್ರಹ ಆರಂಭ

Published:
Updated:
ಶ್ರೀರಾಮುಲು ಉಪವಾಸ ಸತ್ಯಾಗ್ರಹ ಆರಂಭ

ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೆದು ಕಬ್ಬಿಣ ಉತ್ಪಾದಕರ ಸಂಘ ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ಮಾಜಿ ಸಚಿವ ಬಿ.ಶ್ರೀರಾಮುಲು ಭಾನುವಾರ ಉಪವಾಸ ಆರಂಭಿಸಿದ್ದಾರೆ.ಜಿಲ್ಲೆಯಲ್ಲಿರುವ ಮೆದು ಕಬ್ಬಿಣ ಉತ್ಪಾದನಾ ಘಟಕಗಳು ಅದಿರಿನ ಕೊರತೆಯಿಂದಾಗಿ ಸದ್ಯ ಸ್ಥಗಿತಗೊಂಡಿದ್ದು, ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ. ಈ ಕುರಿತು ಕೇಂದ್ರದ ಗಣಿ ಸಚಿವರು ಹಾಗೂ ಪ್ರಧಾನಿಯವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.ಸರ್ಕಾರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರನ್ನು, ಗಣಿ ಕಳ್ಳರನ್ನು ಬಂಧಿಸಲಿ. ಆದರೆ, ಅದಿರನ್ನು ನೆಚ್ಚಿದ ಉದ್ಯಮಗಳಿಗೆ ಅದಿರು ಪೂರೈಸಲು ಕ್ರಮ ಕೈಗೊಳ್ಳಲಿ. ರಾಷ್ಟ್ರೀಯ ಗಣಿ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಮಾತ್ರ ಸದ್ಯ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸುತ್ತ, ಅದಿರು ಪೂರೈಸುತ್ತಿದೆ. ಪ್ರಮಾಣ ಕಡಿಮೆ ಇರುವುದರಿಂದ ಎಲ್ಲ ಉತ್ಪಾದಕರಿಗೂ ಅದಿರು ಸಾಕಾಗುವುದಿಲ್ಲ ಎಂದು ಅವರು ಹೇಳಿದರು.ಗಣಿಗಾರಿಕೆಯನ್ನೇ ನೆಚ್ಚಿದ ಜಿಲ್ಲೆಯ ಕಾರ್ಖಾನೆಗಳು ಮತ್ತು ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಕೋರಲು ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿಯಾಗುವುದಾಗಿ ಹೇಳಿದ ಅವರು, ಅವರು ಭೇಟಿಯಾಗುವುದೇ ದುಸ್ತರವಾಗಿದೆ ಎಂದರು. ಸರ್ಕಾರ ಬಳ್ಳಾರಿಯವರನ್ನು ಅಸ್ಪೃಶ್ಯರಂತೆ ಕಾಣುತ್ತಿದೆ. ಈ ಧೋರಣೆ ಕೈಬಿಟ್ಟು ಸಮಸ್ಯೆ ಬಗೆಹರಿಸಲು ಯತ್ನಿಸಬೇಕು ಎಂದರು.ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸರ್ಕಾರ ವಶಪಡಿಸಿಕೊಂಡ ಅದಿರನ್ನು ಇ-ಟೆಂಟರ್ ಮೂಲಕ ಹರಾಜು ಹಾಕಲಾಗುತ್ತಿದೆ.ಈ ಪದ್ಧತಿಯಿಂದ ಬೃಹತ್ ಉಕ್ಕಿನ ಕಾರ್ಖಾನೆಗಳಿಗೆ ಮಾತ್ರ ಅದಿರು ಸಿಗುತ್ತಿದ್ದು, ಮೆದು ಕಬ್ಬಿಣ ಉತ್ಪಾದನಾ ಘಟಕಗಳ ಮಾಲೀಕರು ಭಾರಿ ಮೊತ್ತ ನೀಡಿ ಅದಿರು ಪಡೆಯುವುದು ಅಸಾಧ್ಯವಾಗಿದೆ. ಸರ್ಕಾರ ವಶಪಡಿಸಿಕೊಂಡಿರುವ ಅದಿರನ್ನು ಆದ್ಯತೆಯ ಮೇರೆಗೆ ಪೂರೈಸುವಂತಾಗಬೇಕು ಎಂದು ಅವರು ಹೇಳಿದರು.ಬೇಡಿಕೆ ಈಡೇರುವವರೆಗೂ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವುದಾಗಿ ಅವರು ಈ ಸಂದರ್ಭದಲ್ಲಿ ಘೋಷಿಸಿದರು. ಮಧ್ಯಾಹ್ನ 12ಕ್ಕೆ ಉಪವಾಸ ಆರಂಭಿಸಿದ ಶ್ರೀರಾಮುಲು ಅವರ ರಕ್ತದ ಒತ್ತಡವನ್ನು ಸಂಜೆಯ ವೇಳೆ ವೈದ್ಯರು ಪರೀಕ್ಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry