ಶನಿವಾರ, ಫೆಬ್ರವರಿ 27, 2021
27 °C

ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ: ಸ್ಥಾನ ಪಡೆದ ವೀರೂ, ಜಹೀರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ: ಸ್ಥಾನ ಪಡೆದ ವೀರೂ, ಜಹೀರ್

ಮುಂಬೈ (ಪಿಟಿಐ): ಗಾಯಗೊಂಡು ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಹಾಗೂ ವೇಗದ ಬೌಲರ್ ಜಹೀರ್ ಖಾನ್ ಅವರು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.`ವೀರೂ~ ಹಾಗೂ `ಜಾಕ್~ ತಂಡಕ್ಕೆ ಹಿಂದಿರುಗಿದ್ದರೆ, ಅನುಭವಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್‌ಗೆ ವಿಶ್ರಾಂತಿ ನೀಡಲಾಗಿದೆ. ಕಳೆದ ಮಾರ್ಚ್‌ನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ತಮ್ಮ ನೂರನೇ ಅಂತರರಾಷ್ಟ್ರೀಯ ಶತಕ ಪೂರೈಸಿದ `ಲಿಟಲ್ ಚಾಂಪಿಯನ್~ ವಿರಾಮ ಪಡೆಯಲು ನಿರ್ಧರಿಸಿದ್ದಾರೆ. ಆದ್ದರಿಂದ ಅವರನ್ನು ಆಯ್ಕೆಗೆ ಪರಿಗಣಿಸಲಿಲ್ಲ.ಜುಲೈ 21ರಂದು ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯ ನಂತರ ಭಾರತವು ಆತಿಥೇಯರ ವಿರುದ್ಧ ಒಂದು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನೂ ಆಡಲಿದೆ.ಈ ಸರಣಿಗಾಗಿ ತಂಡವನ್ನು ರಚಿಸಲು ಕೃಷ್ಣಮಾಚಾರಿ ಶ್ರೀಕಾಂತ್ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ಸಭೆ ಸೇರಿದ್ದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು ಹದಿನೈದು ಸದಸ್ಯರ ತಂಡವನ್ನು ರೂಪಿಸಿದೆ.ಮುಂಬೈನ ಯುವ ಬ್ಯಾಟ್ಸ್‌ಮನ್ ಅಜಿಂಕ್ಯಾ ರಹಾನೆ ಅವರಿಗೆ ಸಚಿನ್ ಬದಲಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಏಷ್ಯಾಕಪ್‌ನಲ್ಲಿ ಆಡಿದ್ದ ತಂಡದಲ್ಲಿ ಆಗಿರುವ ಇನ್ನೊಂದು ಬದಲಾವಣೆ ಎಂದರೆ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾಗೆ ಅವಕಾಶ ಪಡೆದಿದ್ದಾರೆ. ಪ್ರದರ್ಶನ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿರುವ ರವೀಂದ್ರ ಜಡೇಜಾ ಅವರನ್ನು ಕೈಬಿಡಲಾಗಿದೆ.ಜಹೀರ್ ಆಡಲು ಸಜ್ಜಾಗಿರುವ ಕಾರಣ ಪ್ರವೀಣ್ ಕುಮಾರ್ ತಂಡದಲ್ಲಿನ ಸ್ಥಾನ ಕಳೆದುಕೊಂಡಿದ್ದಾರೆ. ಉಮೇಶ್ ಯಾದವ್ ಮೇಲೆ ಆಯ್ಕೆ ಸಮಿತಿ ವಿಶ್ವಾಸವಿಟ್ಟಿದ್ದು ಲಂಕಾದಲ್ಲಿ ಅವರಿಂದ ಉತ್ತಮ ಪ್ರದರ್ಶನ ಸಾಧ್ಯವಾಗುವುದೆಂದು ಆಶಿಸಿದೆ.ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡದಲ್ಲಿ ಭಾರಿ ಅಚ್ಚರಿಯ ಬದಲಾವಣೆಗಳನ್ನು ಆಯ್ಕೆಗಾರರು ಮಾಡಿಲ್ಲ. ವಿರಾಟ್ ಕೊಹ್ಲಿ ಅವರೇ ಉಪ ನಾಯಕರಾಗಿ ಮುಂದುವರಿಯಲಿದ್ದಾರೆ.ಏಷ್ಯಾಕಪ್ ಸಂದರ್ಭದಲ್ಲಿ ಗೌತಮ್ ಗಂಭೀರ್ ಬದಲಿಗೆ ಉಪ ನಾಯಕತ್ವವನ್ನು ವಹಿಸಿಕೊಂಡಿದ್ದ ದೆಹಲಿಯ ಯುವ ಕ್ರಿಕೆಟಿಗ ಕೊಹ್ಲಿ ಭವಿಷ್ಯದಲ್ಲಿ ನಾಯಕ ಆಗುವ ಅರ್ಹತೆ ಹೊಂದಿದ್ದಾರೆ ಎನ್ನುವುದು ಆಯ್ಕೆಗಾರರ ಆಶಯ. ಆದ್ದರಿಂದ ಅವರನ್ನು ಈ ಸ್ಥಾನದಲ್ಲಿ ಮುಂದುವರಿಸಲು ನಿರ್ಣಯ ಕೈಗೊಳ್ಳಲಾಗಿದೆ.ಸಚಿನ್ ಆಯ್ಕೆಗೆ ಲಭ್ಯವಿಲ್ಲವಾದ್ದರಿಂದ ಆ ಸ್ಥಾನಕ್ಕೆ ಲಭ್ಯವಿದ್ದ ಉತ್ತಮ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎನ್ನುವುದು ಆಯ್ಕೆ ಸಮಿತಿ ಮುಖ್ಯಸ್ಥ ಶ್ರೀಕಾಂತ್ ಅಭಿಪ್ರಾಯ.ಅಷ್ಟೇ ಅಲ್ಲ ಅವರು ಆಫ್ ಸ್ಪಿನ್ನರ್ ಹರಭಜನ್ ಸಿಂಗ್‌ಗೆ ತಂಡದಲ್ಲಿ ಸ್ಥಾನ ನೀಡದಿರುವ ತೀರ್ಮಾನವನ್ನೂ ಸಮರ್ಥಿಸಿಕೊಂಡಿದ್ದಾರೆ. ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಒಪ್ಪಂದ ಮಾಡಿಕೊಂಡಿರುವ `ಭಜ್ಜಿ~ಯನ್ನು ತಂಡಕ್ಕೆ ಕರೆಸಿಕೊಳ್ಳುವತ್ತ ಆಯ್ಕೆಗಾರರ ಚಿತ್ತ ಹರಿಯಲಿಲ್ಲ. ಬದಲಿಗೆ ರಾಹುಲ್ ಶರ್ಮ ಅವರೇ ಸೂಕ್ತವೆಂದು ಸುಮ್ಮನಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.