ಬುಧವಾರ, ಜೂನ್ 16, 2021
22 °C

ಶ್ರೀಲಂಕಾ ವಿರುದ್ಧ ಗೊತ್ತುವಳಿ: ಉದ್ದೇಶ ಈಡೇರಿದರೆ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ಶ್ರೀಲಂಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದರ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮಂಡಿಸಲಾಗಿರುವ ಗೊತ್ತುವಳಿ ನಮ್ಮ ಉದ್ದೇಶವನ್ನು ಸಾಧಿಸಲು ಪೂರಕವಾಗಿದ್ದರೆ ಅದರ ಪರವಾಗಿ ಮತ ಚಲಾಯಿಸಲಾಗುವುದು~ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.ಮಿತ್ರ ಪಕ್ಷ ಡಿಎಂಕೆ ಒತ್ತಡವೂ ಸಹ ಪ್ರಧಾನಿಯವರ ಈ ಹೇಳಿಕೆಯ ಹಿಂದೆ ಇದೆ ಎನ್ನಲಾಗಿದೆ. ಮಾನವ ಹಕ್ಕುಗಳ ಪರಿಷತ್ ಮಂಡಿಸಿರುವ ಗೊತ್ತುವಳಿಯು ಶ್ರೀಲಂಕಾದಲ್ಲಿನ ತಮಿಳರ ಪರವಾಗಿ ಇದ್ದರೆ ಅದರ ಪರವಾಗಿ ಭಾರತ ನಿಲ್ಲುವುದು ಎಂದು ಹೇಳಿದರು.ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಸಿಂಗ್, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ ಮಂಡಿಸಿರುವ ಗೊತ್ತುವಳಿಯ ಪೂರ್ಣ ಪಾಠ ಇನ್ನು ಭಾರತಕ್ಕೆ ಸಿಕ್ಕಿಲ್ಲ.  ಗೊತ್ತುವಳಿ ನಮ್ಮ ಆಶಯಗಳಿಗೆ ಅನುಗುಣವಾಗಿದ್ದರೆ ಅದರ ಪರವಾಗಿ ಮತ ಚಲಾಯಿಸಲಾಗುವುದು ಎಂದರು.ಸಮಾನತೆ, ಘನತೆ, ನ್ಯಾಯ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಶ್ರೀಲಂಕಾದಲ್ಲಿರುವ ತಮಿಳರ ಭವಿಷ್ಯ ರೂಪಿಸುವ ಅಂಶಗಳೂ ಗೊತ್ತುವಳಿಯಲ್ಲಿ ಇರಬೇಕು. ಇಂತಹ ಗೊತ್ತುವಳಿಯನ್ನು ಭಾರತ ನಿರೀಕ್ಷಿಸುತ್ತಿದೆ ಎಂದರು.ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ಈ ಹೇಳಿಕೆ ನೀಡಿದರು. ಪ್ರಧಾನಿ ಅವರ ಹೇಳಿಕೆಯನ್ನು ಡಿಎಂಕೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.`ಶ್ರೀಲಂಕಾದಲ್ಲಿನ ತಮಿಳರ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆಯುವ ಪಕ್ಷದ ಆಂತರಿಕ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಯುಪಿಎ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುವುದೂ ಅದರಲ್ಲಿ ಸೇರಿದೆ~ ಎಂದು ಡಿಎಂಕೆ ಪಕ್ಷದ ಸದಸ್ಯರು ಇದಕ್ಕೂ ಮುನ್ನ ತಿಳಿಸಿದ್ದರು.ಶ್ರೀಲಂಕಾದಲ್ಲಿನ ತಮಿಳರ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಮಿತ್ರ ಪಕ್ಷ ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದವು. ಶ್ರೀಲಂಕಾ  ತಮಿಳರ ಪರವಾಗಿಯೇ ಸರ್ಕಾರ ಇರುವುದಾಗಿ ಘೋಷಣೆ ಮಾಡಿರುವುದರಿಂದ ಎಲ್ಲಾ ಸಮಸ್ಯೆಗಳು ಪರಿಹಾರವಾದಂತೆ ಆಗಿವೆ.ಬದಲಾದ ಡಿಎಂಕೆ ನಿಲುವು (ಚೆನ್ನೈ ವರದಿ): ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಸತ್‌ನಲ್ಲಿ ಹೇಳಿಕೆ ನೀಡಿದ ಮೇಲೆ ಈ ನಿಟ್ಟಿನಲ್ಲಿ ಸರ್ಕಾರದ ವಿರುದ್ಧ ನಿಲುವು ತಾಳಿದ್ದ ಡಿಎಂಕೆ ತನ್ನ ನಿಲುವು ಬದಲಾಯಿಸಿಕೊಂಡಿದೆ.ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಬೆಂಬಲ ನೀಡಬೇಕು. ಇಲ್ಲವಾದರೆ ಯುಪಿಎ ಸರ್ಕಾರದಿಂದಲೇ ಹೊರಬರುವ ಬೆದರಿಕೆ ಹಾಕಿದ್ದ ಪಕ್ಷ, ತನ್ನ ನಿಲುವು ಸಡಿಲಿಸಿದ್ದು, ಕರುಣಾನಿಧಿ ನೇತೃತ್ವದಲ್ಲಿ ರಾಜ್ಯಾದ್ಯಂತ (ತಮಿಳುನಾಡು) ಮಾರ್ಚ್ 22ರಂದು ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.