ಭಾನುವಾರ, ಜೂನ್ 13, 2021
26 °C

ಷರೀಫ್‌: ಮೈಸೂರು ಜೆಡಿಎಸ್‌ ಅಭ್ಯರ್ಥಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಸೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಕೆ.ಜಾಫರ್‌ ಷರೀಫ್‌ ಅವರಿಗೆ ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಆಹ್ವಾನ ನೀಡಿದ್ದಾರೆ.ಲೋಕಸಭಾ ಚುನಾವಣೆಗೆ ಟಿಕೆಟ್‌ ನಿರಾಕರಿಸಿರುವ ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ಸಿಟ್ಟಿಗೆದ್ದಿರುವ ಷರೀಫ್‌ ಅವರು ಶನಿವಾರ ಎಚ್‌.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದರು. ಪಕ್ಷಕ್ಕೆ ಸೇರಿದಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡುವುದಾಗಿ ದೇವೇಗೌಡರು ಈ ಸಂದರ್ಭದಲ್ಲಿ ಷರೀಫ್‌ ಅವರಿಗೆ ಆಹ್ವಾನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಷರೀಫ್‌ ಮತ್ತು ದೇವೇಗೌಡರ ಭೇಟಿ ವೇಳೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.­ಕುಮಾರಸ್ವಾಮಿ ಕೂಡ ಹಾಜರಿದ್ದರು. ಷರೀಫ್‌ ಅವರು ಮೈಸೂರಿನಿಂದ ಕಣಕ್ಕಿಳಿದಲ್ಲಿ ಗೆಲುವು ಸಾಧ್ಯವಿದೆ ಎಂಬ ವಾದವನ್ನು ಜೆಡಿಎಸ್‌ ವರಿಷ್ಠರು ಈ ಸಂದರ್ಭದಲ್ಲಿ ಮಂಡಿಸಿದ್ದಾರೆ. ಕ್ಷೇತ್ರ­ದಲ್ಲಿರುವ ಸುಮಾರು 3.5 ಲಕ್ಷ ಅಲ್ಪಸಂಖ್ಯಾತರು ಮತ್ತು ಅಂದಾಜು 2.5 ಲಕ್ಷ ಒಕ್ಕಲಿಗರ ಮತಗಳನ್ನು ಒಗ್ಗೂಡಿಸಿದಲ್ಲಿ ಗೆಲುವು ನಿಶ್ಚಿತ ಎಂದು ಅವರು ವಿಶ್ಲೇಷಿಸಿದ್ದಾರೆ.ಆದರೆ, ಷರೀಫ್‌ ಅವರು ಪಕ್ಷ ಸೇರುವ ಕುರಿತು ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಮೆಕ್ಕಾ ಯಾತ್ರೆ ಮುಗಿಸಿ ಮಾರ್ಚ್‌ 23ರಂದು ನಗರಕ್ಕೆ ಹಿಂತಿರು­ಗಲಿದ್ದು, ಆ ಬಳಿಕವೇ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಆದರೆ, ಅವರು ಮೈಸೂರಿನಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಭರವಸೆ­ಯನ್ನು ಆ ಪಕ್ಷದ ನಾಯಕರಿಗೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.ಷರೀಫ್‌ ಜೊತೆಗಿನ ಭೇಟಿ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಅಪಪ್ರಚಾರದ ಮೂಲಕ ನಮ್ಮ ಪಕ್ಷದ ಅಲ್ಪಸಂಖ್ಯಾತ ಮುಖಂಡರನ್ನು ಸೆಳೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಷರೀಫ್‌ ಅವರು ಕಾಂಗ್ರೆಸ್‌ ಪಕ್ಷದ ಬಣ್ಣ ಬಯಲು ಮಾಡಿದ್ದಾರೆ. ಅವರು ಪಕ್ಷ ಸೇರುವ ವಿಶ್ವಾಸವಿದೆ. ಅವರ ಪ್ರವೇಶದಿಂದ ರಾಷ್ಟ್ರೀಯ ರಾಜಕಾರಣದಲ್ಲಿ ಜೆಡಿಎಸ್‌ನ ಬಲ ಹೆಚ್ಚಲಿದೆ’ ಎಂದರು.

ಷರೀಫ್‌ ಮನೆಗೆ ಪರಮೇಶ್ವರ್

ಬೆಂಗಳೂರು: ಜಾಫರ್‌ ಷರೀಫ್‌ ಅವರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ಕಾಂಗ್ರೆಸ್‌ ಮುಂದುವರಿಸಿದೆ. ಶನಿವಾರ ರಾತ್ರಿ ಷರೀಫ್‌ ಅವರ ಮನೆಗೆ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಕಾರ್ಯದರ್ಶಿ ಡಾ.ಚೆಲ್ಲಕುಮಾರ್‌ ಮತ್ತಿತರರು ಪಕ್ಷ ತೊರೆಯದಂತೆ ಮನವಿ ಮಾಡಿದರು.

‘ಯುವಕರಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ರಿಜ್ವಾನ್ ಅರ್ಷದ್‌ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಪಕ್ಷ ನಿಮ್ಮನ್ನು ಕಡೆಗಣಿಸಿದೆ ಎಂಬ ಭಾವನೆ ಬೇಡ. ನಿಮಗೆ ಪಕ್ಷದಲ್ಲಿ ಗೌರವ ದೊರೆಯಲಿದೆ. ಪಕ್ಷ ತೊರೆಯುವ ನಿರ್ಧಾರ ಮಾಡಬೇಡಿ’ ಎಂದು ಪರಮೇಶ್ವರ್ ಹೇಳಿದರು ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.