ಬುಧವಾರ, ಜನವರಿ 29, 2020
28 °C

ಷೋಡಷಿಯ ವಿಶ್ವ ಪರ್ಯಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಂಟ್ ಮಾರ್ಟಿನ್ (ನೆದರ್‌ಲೆಂಡ್ಸ್) (ಎಎಫ್‌ಪಿ): ಯೌವನ ಕಾಲಿಡುತ್ತಿದ್ದ ವೇಳೆಗೆ ಸರಿಯಾಗಿ ಹಡಗಿನಲ್ಲಿ ಏಕಾಂಗಿಯಾಗಿ ಪ್ರಪಂಚ ಪರ್ಯಟನೆಗೆ ಹೊರಟ ನೆದರ್‌ಲೆಂಡ್‌ನ ಲಾರಾ ಡೆಕ್ಕರ್ ಎಂಬ ಷೋಡಷಿ, ಒಂದು ವರ್ಷದ ನಂತರ ಯಶಸ್ವಿಯಾಗಿ ತನ್ನ ಗುರಿ ಸಾಧಿಸಿ ಮರಳಿದ್ದಾಳೆ.   ಹಡಗಿನಲ್ಲಿ ಏಕಾಂಗಿಯಾಗಿ ವಿಶ್ವ ಪರ್ಯಟನೆ ಮಾಡಿದ ಅತಿ ಕಿರಿಯ ವಯಸ್ಸಿನ ನಾವಿಕಳು ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.2011ರ ಜನವರಿ 20ರಂದು  16 ವರ್ಷದ ಲಾರಾ ಒಬ್ಬಂಟಿಯಾಗಿ ಹಡಗು ಏರಿ ಪ್ರಪಂಚ ಪರ್ಯಟನೆಗೆ ಹೊರಟಾಗ ಅನೇಕರು ಹುಬ್ಬೇರಿಸಿದ್ದರು. ಆದರೆ, ಯಶಸ್ವಿ ಯಾನ ಮುಗಿಸಿ ಸೇಂಟ್ ಮಾರ್ಟಿನ್ ಕೆರಿಬಿಯನ್ ದ್ವೀಪಕ್ಕೆ ಹಿಂದಿರುಗಿದ ಅವಳನ್ನು ಸ್ವಾಗತಿಸಲು ನೂರಾರು ಜನ ನೆರೆದಿದ್ದರು. ವರ್ಷದ ಬಳಿಕ ಭೂಮಿಯ ಮೇಲೆ ಕಾಲಿಟ್ಟ ಸಂತಸದಲ್ಲಿದ್ದ ಲಾರಾಳನ್ನು ಬಾಚಿ ತಬ್ಬಿದ್ದು ಅವಳ ತಂದೆ, ತಾಯಿ ಮತ್ತು ತಂಗಿ. ಆಪ್ತರ ಬೆಚ್ಚಗಿನ ಸ್ಪರ್ಶಕ್ಕೆ ಆನಂದಬಾಷ್ಪ ಸುರಿಸಿದ ಲಾರಾ, ಸಮುದ್ರದ ತೆರೆಗಳೊಂದಿಗಿನ ಸುದೀರ್ಘ ಪಯಣದ ಅನುಭವ ಹಂಚಿಕೊಂಡಿದ್ದು ಹೀಗೆ...`ನಾನೇನು ಮಾಡುತ್ತಿದ್ದೇನೆ ಎಂದು ನನ್ನಷ್ಟಕ್ಕೆ ನಾನೇ ಅನೇಕ ಸಲ ಪ್ರಶ್ನಿಸಿಕೊಂಡಿದ್ದೇನೆ. ಆದರೂ, ಸಮುದ್ರದ ತೆರೆಗಳು ಮತ್ತು ಅವುಗಳ ಜತೆಗೆ ತೇಲುವ ಡಾಲ್ಫಿನ್‌ಗಳೊಂದಿಗಿನ ಪಯಣ ನಿಜಕ್ಕೂ ಜೀವಮಾನದ ಅವಿಸ್ಮರಣೀಯ ಅನುಭವ~`ನನ್ನ ಸುದೀರ್ಘ ಪಯಣದ ಸಂಗಾತಿ ಎಂದರೆ ಅದು ನನ್ನ ಮೆಚ್ಚಿನ ಹಡಗು `ಗುಪ್ಪಿ~. ಪ್ರಯಾಣದಿಂದ ದಣಿದಿರುವ ಗುಪ್ಪಿಯನ್ನು ಸ್ವಚ್ಛಗೊಳಿಸುವುದು ನನ್ನ ಮುಂದಿನ ಕೆಲಸ. ನಂತರ ಶಾಲೆಗೆ ಹಿಂದಿರುಗುತ್ತೇನೆ~ವಯಸ್ಸು ಅಡ್ಡಿ...: 14 ವರ್ಷದವಳಿದ್ದಾಗಲೇ ವಿಶ್ವ ಪರ್ಯಟನೆಗೆ ಹೊರಟಿದ್ದ ಅವಳಿಗೆ ವಯಸ್ಸು ಅಡ್ಡಿಯಾಗಿತ್ತು. ಡಚ್ ನ್ಯಾಯಾಲಯ ಲಾರಾ ಪರ್ಯಟನೆಗೆ ತಡೆಯೊಡ್ಡಿತ್ತು. ಅವಳು ಇನ್ನೂ ತೀರಾ ಚಿಕ್ಕವಳಾಗಿದ್ದ ಕಾರಣ ಸುರಕ್ಷೆಯ ದೃಷ್ಟಿಯಿಂದ ಅನುಮತಿ ನಿರಾಕರಿಸಿ, ಮಕ್ಕಳ ಕಲ್ಯಾಣ ಅಧಿಕಾರಿಗಳ ಕಣ್ಗಾವಲಿನಲ್ಲಿ ಇರಿಸಿತ್ತು. ಎಲ್ಲರ ಕಣ್ತಪ್ಪಿಸಿ ಸೇಂಟ್ ಮಾರ್ಟಿನ್ ದ್ವೀಪಕ್ಕೆ ಓಡಿ ಹೋಗಿದ್ದ ಲಾರಾಳನ್ನು ಪೊಲೀಸರು ಹಿಡಿದು ಅವಳ ಪಾಲಕರಿಗೆ ತಂದೊಪ್ಪಿಸಿದ್ದರು. ಕೊನೆಗೂ 2010ರಲ್ಲಿ ಕಾನೂನು ಸಮರದಲ್ಲಿ ಜಯ ಸಾಧಿಸಿದ ಲಾರಾ, ಆಸ್ಟ್ರೇಲಿಯಾದ ಜೆಸ್ಸಿಕಾ ವಾಟ್ಸನ್ ದಾಖಲೆ ಮುರಿದಳು. ಆದರೆ, ಅಪ್ರಾಪ್ತ ವಯಸ್ಸಿನ ಕಾರಣದಿಂದಾಗಿ ಅವಳ ಈ ಸಾಧನೆ ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿಲ್ಲ.

ಪ್ರತಿಕ್ರಿಯಿಸಿ (+)