ಭಾನುವಾರ, ಮೇ 9, 2021
26 °C

ಸಂಕಷ್ಟಗಳಿಗೆ ಸ್ಪಂದಿಸದ ನಗರಸಭೆ, ಜಿಲ್ಲಾಡಳಿತ

ರಾಹುಲ ಬೆಳಗಲಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರದ ಪ್ರಮುಖ ಸ್ಥಳವಾಗಿರುವ ಶಿಡ್ಲಘಟ್ಟ ವೃತ್ತದ ಸಿಗ್ನಲ್ ದೀಪಗಳು ಕೆಟ್ಟು ಸುಮಾರು ಆರು ತಿಂಗಳಾಗಿದ್ದರೆ, ಮುಖ್ಯರಸ್ತೆಯಾದ ಬಿ.ಬಿ.ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುಧಾರಣೆಯಾಗದೆ ವರ್ಷಗಳೇ ಗತಿಸಿವೆ.ನಗರದ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ಬಸ್ ನಿಲ್ದಾಣಗಳಿಗೆ ಇನ್ನೂ ತಂಗುದಾಣ ವ್ಯವಸ್ಥೆಯಾಗಿಲ್ಲ. ನಗರ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿಗೆ ಸೂಕ್ತ ಪರಿಹಾರ ದೊರಕಿಲ್ಲ. ರಸ್ತೆ, ಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ 30 ಲಕ್ಷ ರೂಪಾಯಿ ಹಗರಣ ಬಹಿರಂಗವಾದರೂ ನಗರಸಭೆ ಮೌನ ತಾಳಿದ್ದರೆ, ನಗರಸಭೆ ಮತ್ತು ನಗರಪ್ರದೇಶ ತನಗೆ ಸಂಬಂಧವೇ ಇಲ್ಲ ಎಂಬಂತೆ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ.ನಗರಾಭಿವೃದ್ಧಿ ಕುರಿತು ಇಲ್ಲಿನ ನಿವಾಸಿಗಳನ್ನು ಪ್ರಶ್ನಿಸಿದರೆ, ಹೀಗೆ ಸಾಲುಸಾಲಾಗಿ ದೂರುಗಳ ಸರಮಾಲೆಯನ್ನೇ ಹೇಳುತ್ತಾರೆ. ಸಮಸ್ಯೆಗಳಿಗೆ ಪರಿಹಾರ ಕಾಣದೆ ವರ್ಷಗಳೇ ಗತಿಸಿವೆ ಎಂದು ಒಬ್ಬರು ಆರೋಪಿಸಿದರೆ, ಸಮಸ್ಯೆಗಳ ಬಗ್ಗೆ ದೂರಿದರೂ ಏನೂ ಪ್ರಯೋಜನವಿಲ್ಲ ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.ನಗರಸಭೆ ಸದಸ್ಯರು ತಮ್ಮ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಒಬ್ಬರು ಹೇಳಿದರೆ, ನಗರಾಭಿವೃದ್ಧಿ ಮತ್ತು ನಗರಸಭೆ ಕಾರ್ಯನಿರ್ವಹಣೆ ಕುರಿತು ಜಿಲ್ಲಾಡಳಿತ ಗಮನವೇ ಹರಿಸುತ್ತಿಲ್ಲ ಎಂದು ಬಹುತೇಕ ಮಂದಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.ಹೋರಾಟಗಾರರಿಗೆ ನಿರಾಸೆ: ಅಸಮಾಧಾನ, ಬೇಸರ, ಆಕ್ರೋಶ, ಆರೋಪ, ಪ್ರತಿಭಟನೆ, ಧರಣಿ, ರಸ್ತೆ ತಡೆ ಮುಂತಾದವು ವ್ಯಕ್ತಪಡಿಸಿದ ನಂತರವೂ ಜನಪ್ರತಿನಿಧಿಗಳಿಂದ ಮತ್ತು ಅಧಿಕಾರಿಗಳಿಂದ ಏನೂ ಪ್ರತಿಕ್ರಿಯೆ ಬಾರದಿರುವಾಗ ಇನ್ನೇನೂ ಮಾಡಲು ಸಾಧ್ಯ ಎಂದು ಸಂಘ-ಸಂಸ್ಥೆಗಳ ಹೋರಾಟಗಾರರು ಪ್ರಶ್ನಿಸುತ್ತಾರೆ. ಮನವಿಪತ್ರ ಸಲ್ಲಿಕೆ ಎಂಬುದು `ಸಾಮಾನ್ಯ~ ಸಂಗತಿಯಾಗಿ ಉಳಿದಿದ್ದು, ಅದರ ಬಗ್ಗೆ ಇದ್ದ ಅಲ್ಪಸ್ವಲ್ಪ ಆಶಾಭಾವನೆ ಕಮರಿಹೋಗಿದೆ ಎಂದು ನಿರಾಸೆ ವ್ಯಕ್ತಪಡಿಸುತ್ತಾರೆ.`ವಾಹನ ಸವಾರರ ಮತ್ತು ಪಾದಚಾರಿಗಳ ಸುರಕ್ಷತೆಗಾಗಿ ಸಾರ್ವಜನಿಕರು ಅಲ್ಲದೇ ಪೊಲೀಸ್ ಇಲಾಖೆಯವರು ಸಿಗ್ನಲ್ ದೀಪಗಳ ದುರಸ್ತಿಗಾಗಿ ಹಲವು ಬಾರಿ ಮನವಿಪತ್ರ ಸಲ್ಲಿಸಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ನಗರ ಪ್ರದೇಶದಲ್ಲಿ ದೂಳು ಮತ್ತು ಮಾಲಿನ್ಯ ಅತಿಯಾದಾಗ ಯಲುವಹಳ್ಳಿ ಗ್ರಾಮದ ಯುವಕರು ನಸುಕಿನಲ್ಲಿ ಬಂದು ಸ್ವಚ್ಛತಾ ಕಾರ್ಯ ಕೈಗೊಂಡ ನಂತರವೂ ನಗರಸಭೆ ಎಚ್ಚೆತ್ತುಕೊಳ್ಳಲಿಲ್ಲ.ನಗರಾಡಳಿತ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂಬ ಅಂಶ ತಿಳಿದ ನಂತರವೂ ಜಿಲ್ಲಾಡಳಿತ ಸ್ಪಂದಿಸಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಆಶಾಭಾವನೆ ಇಟ್ಟುಕೊಳ್ಳುವುದಾದರೂ ಹೇಗೆ~ ಎಂದು ಖಾಸಗಿ ಸಂಸ್ಥೆ ಉದ್ಯೋಗಿ ರಮೇಶ್ ಬಾಬು `ಪ್ರಜಾವಾಣಿ~ಗೆ ತಿಳಿಸಿದರು.`ಹಗರಣ ನಡೆದರೂ ಮೌನ~: `ನಗರದ ಬಹುತೇಕ ಕಡೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಕೆಲ ಕಡೆ ಕಾಮಗಾರಿ ಪೂರ್ಣಗೊಳಿಸದೆಯೇ ನಗರಸಭೆ ವತಿಯಿಂದ ಹಣ ಪಾವತಿ ಮಾಡಲಾಗಿದೆ. ಕೆಳಗಿನ ತೋಟದ ಬಡಾವಣೆಯಲ್ಲಿ ರಸ್ತೆ, ಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಹಗರಣ ಬೆಳಕಿಗೆ ಬಂದರೂ ನಗರಸಭೆ ಮತ್ತು ಜಿಲ್ಲಾಡಳಿತದಿಂದ ಒಬ್ಬ ಅಧಿಕಾರಿಯೂ ಕೂಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಬಡಾವಣೆಯ ನಿವಾಸಿಗಳೊಂದಿಗೆ ಸಂವಾದ ನಡೆಸಿಲ್ಲ~ ಎಂದು ಬಡಾವಣೆ ನಿವಾಸಿ ಸುಮಂಗಲಾ ತಿಳಿಸಿದರು.`ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಕೆಲವಷ್ಟು ಭಾಗ ದೇವಾಲಯದವರಿಂದ ಒತ್ತುವರಿಗೊಂಡಿದೆ ಎಂದು ಆರೋಪಿಸಿ ಕೆಲ ತಿಂಗಳ ಹಿಂದೆ ಪೊಲೀಸರ ಭದ್ರತೆಯೊಂದಿಗೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಇನ್ನೇನು ದೇವಾಲಯ ಧ್ವಂಸಗೊಳಿಸಲಾಗುತ್ತದೆ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಕಾರ್ಯಾಚರಣೆ ದಿಢೀರ್ ಸ್ಥಗಿತಗೊಂಡಿತು. ಒತ್ತುವರಿ ಸ್ಥಳದಲ್ಲಿ ದೇವಾಲಯದವರು ನಿರಾತಂಕವಾಗಿ ಮತ್ತೆ ತಡೆಗೋಡೆ ಕಟ್ಟಿಕೊಂಡಿದ್ದಾರೆ~ ಎಂದು ಕ್ರೀಡಾಪಟುಗಳು ಆರೋಪಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.