ಸಂಕ್ರಾಂತಿಗೆ ಮೆರುಗು ಶಾಂತಳ್ಳಿ ಜಾತ್ರೆ

7

ಸಂಕ್ರಾಂತಿಗೆ ಮೆರುಗು ಶಾಂತಳ್ಳಿ ಜಾತ್ರೆ

Published:
Updated:

ಸೋಮವಾರಪೇಟೆ: ಪಶ್ವಿಮ ಘಟ್ಟಗಳ ಹಸಿರ ವನರಾಶಿಗಳಿಂದ ಸುತ್ತುವರಿದ ಶಾಂತಳ್ಳಿಯಲ್ಲಿ ಈ ತಿಂಗಳ 13ರಿಂದ 17ರ ತನಕ ಐದು ದಿನಗಳ ಕಾಲ ಬಹು ವೈಭವದಿಂದ ನಡೆಯುವ ಕುಮಾರಲಿಂಗೇಶ್ವರಸ್ವಾಮಿ ಜಾತ್ರೆ ಮತ್ತು ರಥೋತ್ಸವ ಕಾರ್ಯಕ್ರಮ ಈ ಭಾಗದಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಮೆರುಗು ನೀಡಲಿದೆ.

ಸೋಮವಾರಪೇಟೆ ಸಮೀಪದ ಶಾಂತಳ್ಳಿಯಲ್ಲಿ ನಡೆಯುವ ಕುಮಾರಲಿಂಗೇಶ್ವರಸ್ವಾಮಿ ಜಾತ್ರೆ. (ಸಂಗ್ರಹ ಚಿತ್ರ)
ತಾಲ್ಲೂಕಿನಲ್ಲಿಯೇ ಶಾಂತಳ್ಳಿ ಜಾತ್ರೆಯು ಬಹು ವಿಶಿಷ್ಟವಾಗಿದ್ದು, ಅನಾದಿ ಕಾಲದಿಂದಲೂ ರಥೋತ್ಸವವನ್ನು ಬಹಳ ವಿಜೃಂಭಣೆ ಮತ್ತು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಕುಮಾರಲಿಂಗೇಶ್ವರಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವೂ ಇರುವುದರಿಂದ ಭಕ್ತಾದಿಗಳನ್ನು ಇದು ವಿಶೇಷವಾಗಿ ಆಕರ್ಷಿಸುತ್ತದೆ.ಮಳೆಗಾಲದ ಕಷ್ಟದ ದಿನಗಳು ಕಳೆದು ಸುಗ್ಗಿಯ ಹಿಗ್ಗಿನಲ್ಲಿರುವ ಕೃಷಿಕರಿಗೆ ಶಾಂತಳ್ಳಿ ಜಾತ್ರೆಯು ಉತ್ತಮ ಮನೋರಂಜನೆಯನ್ನೂ ಒದಗಿಸುತ್ತದೆ. ಆದ್ದರಿಂದ ಸಂಕ್ರಾಂತಿಯ ಹರ್ಷ ಕಾಲದಲ್ಲಿಯೇ ಪ್ರತಿ ವರ್ಷ ಜಾತ್ರೆ ನಡೆಯುತ್ತಾ ಬಂದಿದೆ ಎನ್ನಬಹುದು. ದೂರದ ಊರಿನಲ್ಲಿ ನೆಲಸಿರುವ ಬಂಧು- ಬಾಂಧವರು ತಪ್ಪದೆ ಜಾತ್ರೆಯ ಕಾಲದಲ್ಲಿ ಇಲ್ಲಿಗೆ ಬಂದು ದೇವರಿಗೆ ಹರಕೆ- ಕಾಣಿಕೆಗಳನ್ನು ಒಪ್ಪಿಸಿ ಕೃತಾರ್ಥರಾಗಿ ದೇವರ ಆಶೀರ್ವಾದ ಪಡೆಯತ್ತಾರೆ. ವರ್ಷಕ್ಕೊಮ್ಮೆ ಎಲ್ಲರನ್ನೂ ಜಾತ್ರೆಯಲ್ಲಿಯೇ ಭೇಟಿಯಾಗಿ ಕ್ಷೇಮ ಸಮಾಚಾರದ ವಿನಿಮಯ ಮಾಡಿಕೊಳ್ಳಲೂ ಇದೊಂದು ಉತ್ತಮ ವೇದಿಕೆಯಾಗಿದೆ.ರೈತಾಪಿ ಮಂದಿಗೂ ತಮ್ಮ ಕಸುಬುದಾರಿಕೆಯನ್ನು ಪ್ರದರ್ಶಿಸಲು ಜಾತ್ರೆಯಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ವಿಶೇಷ ರೀತಿಯಲ್ಲಿ ಬೆಳೆದ ತರಕಾರಿ, ಹಣ್ಣು ಮತ್ತು ಹೂವುಗಳ ಪ್ರದರ್ಶನ ಮಾಡಿ ಉತ್ತಮವಾದ ಕೃಷಿ ಉತ್ಪನ್ನಗಳಿಗೆ ಬಹುಮಾನವನ್ನೂ ನೀಡಲಾಗುತ್ತದೆ. ಹೀಗಾಗಿ, ಕೃಷಿ, ತೋಟಗಾರಿಕೆ ಮತ್ತು ಜೇನು ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮುಕ್ತ ಅವಕಾಶವೂ ದೊರಕಿ ಜಾತ್ರೆಗೆ ಹೊಸ ಮೆರುಗು ಸಿಗುತ್ತದೆ. ಕೃಷಿಕರಿಗೆ ಹೊಸ ವೈಜ್ಞಾನಿಕ ತಿಳವಳಿಕೆಗಳನ್ನು ನೀಡಲು ಸರ್ಕಾರದ ಹಲವು ಇಲಾಖೆಗಳು ಇಲ್ಲಿ ವಸ್ತುಪ್ರದರ್ಶನ ಹಾಗೂ ಮಾಹಿತಿ ಶಿಬಿರಗಳನ್ನು ಏರ್ಪಡಿಸುವುದರಿಂದ ಜಾತ್ರೆಯೊಂದು ಮಾಹಿತಿ ಕೇಂದ್ರವಾಗಿಯೂ ರೂಪುಗೊಂಡು ಬಿಡುತ್ತದೆ.ಶಾಂತಳ್ಳಿಯ ಕುಮಾರಲಿಂಗೇಶ್ವರ ಯುವಕ ಸಂಘದವರು ಪ್ರತಿ ವರ್ಷ ಜಾತ್ರೆ ಸಂದರ್ಭದಲ್ಲಿ ಅಂತರ ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಯುವಕ- ಯುವತಿಯರಿಗೆ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಸಿಕ್ಕಿದಂತಾಗಿದೆಯಲ್ಲದೆ ಗ್ರಾಮೀಣರಿಗೆ ಸಾಕಷ್ಟು ಮನೋರಂಜನೆಗೂ ಅವಕಾಶ ಮಾಡಿಕೊಟ್ಟಿದೆ.ಜಾತ್ರಾ ಕಾಲದಲ್ಲಿ ಪ್ರತಿನಿತ್ಯ ರಾತ್ರಿಯ ವೇಳೆ ಜಿಲ್ಲೆಯ ನಾನಾ ಕಡೆಗಳಿಂದ ಬರುವ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವುದರಿಂದ ಜಾತ್ರೆಗೆ ಬಹು ಬಗೆಯ ಆಯಾಮಗಳು ಸಿಕ್ಕಂತಾಗಿದೆ. ರಥೋತ್ಸವವು ವೇದಾಗಮರೀತ್ಯಾ ಆರ್ಷೇಯ ಸಂಪ್ರದಾಯದಲ್ಲಿ ನಡೆದರೆ, ಜಾತ್ರೆಯ ಉಳಿದೆಲ್ಲಾ ಆಚರಣೆಗಳಿಗೂ ಜಾನಪದ ಮತ್ತು ಸ್ಥಳೀಯ ಗ್ರಾಮೀಣ ಸೊಗಡು ಸೇರಿಕೊಂಡಿರುವ ಕಾರಣ ಇದೊಂದು ವಿಶಿಷ್ಟವಾದ ಜಾತ್ರೋತ್ಸವವಾಗಿ ಗಮನ ಸೆಳೆಯುತ್ತದೆ.ಜಾತ್ರೋತ್ಸವವು ಜ.13ರ ಗುರುವಾರ ಆರಂಭಗೊಂಡು ಪ್ರಾರ್ಥನೆ ಮತ್ತು ವಿಶೇಷ ಪೂಜೆಯೊಂದಿಗೆ ಬೆಳ್ಳಿ ಬಂಗಾರದ ದಿನವೆಂದು ಆಚರಿಸಲ್ಪಡುತ್ತದೆ. ಶುಕ್ರವಾರ ಮಕರ ಸಂಕ್ರಮಣದ ದಿನದಂದು ಕರುವಿನ ಹಬ್ಬದ ಹೆಸರಿನಲ್ಲಿ ಗರುಡಗಂಬದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಉತ್ತರಾಯಣ ಪುಣ್ಯಕಾಲವಾದ ಶನಿವಾರ ದೇವರಿಗೆ ಹರಕೆ ಮತ್ತು ಕಾಣಿಕೆಯನ್ನು ಅರ್ಪಿಸುವ ಅರಸು ಬಲಸೇವೆ ಎನ್ನುವ ವಿಶಿಷ್ಟ ವಿಧಿಯನ್ನು ನೆರವೇರಿಸಲಾಗುವುದು. ಜ.16 ರ ಭಾನುವಾರ ಹಗಲು 12 ಗಂಟೆಗೆ ಮಹಾರಥೋತ್ಸವ ಕಾರ್ಯಕ್ರಮ ನಡೆಯುತ್ತದೆ. ಸೋಮವಾರ ಜಾತ್ರೆಯ ಮುಕ್ತಾಯದ ವಿಧಿಗಳು ಹಾಗೂ ಸಭಾ ಕಾರ್ಯಕ್ರಮಗಳು ಇರುತ್ತವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry