ಭಾನುವಾರ, ಮೇ 16, 2021
23 °C

ಸಂಕ್ಷಿಪ್ತ ಸುದ್ದಿ:ತೆಲಂಗಾಣ: ಕಾಂಗ್ರೆಸ್ ಸಂಸದರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಕಲಾಪಕ್ಕೆ ಅಡ್ಡಿ ಮಾಡಿದ ಕಾರಣಕ್ಕೆ ಲೋಕಸಭೆಯಿಂದ ಅಮಾನತುಗೊಂಡಿರುವ ತೆಲಂಗಾಣ ಪ್ರದೇಶದ ಎಂಟು ಮಂದಿ ಕಾಂಗ್ರೆಸ್ ಸಂಸದರು ಗುರುವಾರ ಸಂಸತ್ ಭವನದ ಮುಖ್ಯ ದ್ವಾರದಲ್ಲಿ ಪ್ರತಿಭಟನೆ ನಡೆಸಿ ಸುಮಾರು ಅರ್ಧ ಗಂಟೆ ಕಾಲ ತಡೆ ಒಡ್ಡಿದರು.ಅಮಾನತುಗೊಂಡ ಕಾಂಗ್ರೆಸ್ ಸಂಸದರಾದ ಪೊನ್ನಂ ಪ್ರಭಾಕರ್, ಮಧು ಯಕ್ಷಿ ಗೌಡ, ಎಂ. ಜಗನ್ನಾಥ್, ಕೆ. ಆರ್. ಜಿ. ರೆಡ್ಡಿ, ಜಿ. ವಿವೇಕಾನಂದ, ಬಲರಾಂ ನಾಯ್ಕ, ಸುಕೇಂದರ್ ರೆಡ್ಡಿ ಮತ್ತು ಎಸ್. ರಾಜಯ್ಯ ಅವರು ಮುಖ್ಯ ದ್ವಾರದ ಮೆಟ್ಟಿಲುಗಳ ಮೇಲೆ ಕುಳಿತು ಪ್ರತ್ಯೇಕ ತೆಲಂಗಾಣ ರಾಜ್ಯದ ಪರ ಘೋಷಣೆ ಕೂಗಿದರು.  ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಿದ ಕಾರಣ ಇತರ ಸಂಸದರು ಬೇರೆ ದ್ವಾರಗಳ ಮೂಲಕ ಸಂಸತ್ ಭವನವನ್ನು ಪ್ರವೇಶಿಸಿದರು.ಶಾರುಖ್ ಖಾನ್‌ಗೆ ಸಮನ್ಸ್ಜೈಪುರ (ಪಿಟಿಐ): ಇಲ್ಲಿನ ಎಸ್‌ಎಂಎಸ್ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದ್ದ ವೇಳೆ ಧೂಮಪಾನ ಮಾಡಿದ್ದಕ್ಕಾಗಿ ಬಾಲಿವುಡ್ ನಟ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್‌ನ ಸಹ ಮಾಲೀಕ ಶಾರುಖ್ ಖಾನ್ ಅವರಿಗೆ ಮೇ 26ರಂದು ನ್ಯಾಯಾಲಯದಲ್ಲಿ ಹಾಜರಾಗಲು ಸೂಚಿಸಲಾಗಿದೆ.ಖಾಸಗಿ ಕ್ರಿಕೆಟ್ ಅಕಾಡೆಮಿ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಶಿಲ್ಪಾ ಸಮೀರ್ ಸಮನ್ಸ್ ಜಾರಿಗೊಳಿಸಿದ್ದಾರೆ.ವೇದಿಕೆ ಕುಸಿದು ಕೆಳಗೆ ಬಿದ್ದ ಅಮೀರ್ ಖಾನ್

ವಾರಾಣಸಿ (ಪಿಟಿಐ): ಆಟೊ ಚಾಲಕನ ಮಗನ ಮದುವೆ ಸಂದರ್ಭದಲ್ಲಿ ಜನದಟ್ಟಣೆಯಿಂದ ವೇದಿಕೆ ಕುಸಿದ ಪರಿಣಾಮ ಅದರ ಮೇಲಿದ್ದ ಬಾಲಿವುಡ್ ನಟ ಅಮೀರ್ ಖಾನ್ ಕೆಳಗೆ ಬಿದ್ದ ಘಟನೆ ಗುರುವಾರ ನಡೆದಿದೆ.`3 ಈಡಿಯಟ್~ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಪರಿಚಯವಾಗಿದ್ದ ಆಟೊ ಚಾಲಕ ರಾಮಲಖನ್ ಆಮಂತ್ರಣದ ಮೇರೆಗೆ ಅಮೀರ್ ನೀಲಿ ಹಾಗೂ ಬಿಳಿ ಬಣ್ಣದ ಕುರ್ತಾ ತೊಟ್ಟು ಮೆಹಮರ್‌ಜಂಗ್ ಚೌರಾಸಿಯಾ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡಿದ್ದರು.ಘಟನೆ ಬಗ್ಗೆ ನಗುತ್ತಾ ಉತ್ತರಿಸಿದ ಅಮೀರ್ `ವ್ಯವಸ್ಥೆ ಚೆನ್ನಾಗಿತ್ತು. ನನ್ನ ತಾಯಿ ಜನಿಸಿದ್ದು ವಾರಾಣಸಿಯಲ್ಲೇ. ಆದ್ದರಿಂದ ಈ ಜಾಗದ ಮೇಲೆ ನನಗೆ ತುಂಬ ಪ್ರೀತಿ~ ಎಂದಿದ್ದಾರೆ. ಮದುಮಕ್ಕಳಿಗೆ ಶುಭಾಶಯ ಕೋರಲು ಬಂದಿದ್ದೇನೆಯೇ ಹೊರತು ಯಾವುದೇ ಕಾರ್ಯಕ್ರಮದ ಪ್ರಚಾರಕ್ಕಲ್ಲ~ ಎಂದು ಸ್ಪಷ್ಟಪಡಿಸಿದ್ದಾರೆ.ಎನ್‌ಎಚ್ ಆರ್‌ಸಿ : ನಿಯಮ ಬದಲಿಗೆ ಚಿಂತನೆನವದೆಹಲಿ (ಪಿಟಿಐ): ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆ ಇರುವುದರಿಂದ ರಾಜ್ಯಗಳ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನವನ್ನು ತುಂಬುವುದು ಕಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ನಿಯಮವನ್ನು ಸಡಿಲಿಸಲು ಚಿಂತನೆ ನಡೆಸಿದೆ.ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ಕೊರತೆ ಇರುವ ಈಶಾನ್ಯ ರಾಜ್ಯಗಳಲ್ಲಿ ಒಂದೇ ಆಯೋಗವನ್ನು ರಚಿಸಲು ಸಹ ಯೋಚಿಸಲಾಗುತ್ತಿದೆ ಎಂದು ರಾಷ್ಟ್ರೀಯ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ತಿಳಿಸಿದ್ದಾರೆ.ಈಶಾನ್ಯದ ಏಳು ರಾಜ್ಯಗಳಿಗೆ ಒಂದೇ ಹೈಕೋರ್ಟ್ ಇರುವುದರಿಂದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ಕೊರತೆ ಇದೆ. ಆದ್ದರಿಂದ ರಾಜ್ಯಗಳ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರ ನೇಮಕಾತಿಗೆ ಈಗಿರುವ ಅರ್ಹತೆಯ ಮಾನದಂಡವನ್ನು ಸ್ವಲ್ಪ ಬದಲಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.