ಗುರುವಾರ , ಮೇ 13, 2021
24 °C

ಸಂಗ್ರಹಿಸಿದ್ದ ಹುಲ್ಲು ಮಾರಾಟ: ರೈತರು ಕಂಗಾಲು

ಮಹದೇವ್ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ಹೋಬಳಿಯಲ್ಲಿ ಗೋಶಾಲೆ ಆರಂಭಿಸುವುದಾಗಿ ರೈತರಿಗೆ ಭರವಸೆ ನೀಡಿದ್ದ ಜಿಲ್ಲಾಡಳಿತ ಕೊನೆಗೂ ವಿಫಲವಾಗಿದೆ. ಸಂಗ್ರಹಿಸಿದ್ದ ಒಣಹುಲ್ಲನ್ನು ಹಣ ಪಡೆದು ರೈತರಿಗೆ ಮಾರಾಟ ಮಾಡುತ್ತಿದೆ.ಬರಗಾಲದ ಹಿನ್ನೆಲೆಯಲ್ಲಿ ಹೋಬಳಿಯ ಜಾನುವಾರುಗಳಿಗಾಗಿ ಗೋಶಾಲೆ ತೆರೆಯಲು  ಕುದೇರು ಗ್ರಾಮದ ರೇಷ್ಮೆ ತರಬೇತಿ ಕೇಂದ್ರದಲ್ಲಿ 5 ತಿಂಗಳ ಹಿಂದೆ ಬತ್ತದ ಒಣ ಹುಲ್ಲನ್ನು ಜಿಲ್ಲಾಡಳಿತ ಶೇಖರಿಸಿಕೊಂಡಿತ್ತು. ಬತ್ತ ಬೆಳೆಯುವ ಪ್ರದೇಶಗಳಿಂದ ಟನ್ ಒಣ ಹುಲ್ಲಿಗೆ 120 ರೂಪಾಯಿಯಂತೆ ರೈತರಿಂದ ಖರೀದಿಸಿ ಸಂಗ್ರಹಿಸಲಾಗಿತ್ತು. ಜಾನುವಾರುಗಳ ಕುಡಿಯುವ ನೀರಿಗಾಗಿ ನಿರ್ಮಿತಿ ಕೇಂದ್ರದಿಂದ ತೊಟ್ಟಿಗಳನ್ನು ನಿರ್ಮಿಸಿ ಗ್ರಾಮ ಪಂಚಾಯಿತಿ ವತಿಯಿಂದ ನೀರು ಒದಗಿಸಲು ಯೋಜನೆ ಸಿದ್ದಪಡಿಸಲಾಗಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿವರೆಗೂ ಇಲ್ಲಿ ಗೋಶಾಲೆ ಆರಂಭಿಸಿಲ್ಲ. ಇದರಿಂದ ಜಾನುವಾರುದಾರರು ಕಂಗಾಲಾಗಿದ್ದಾರೆ.ಗೋಶಾಲೆಗಾಗಿ ಶೇಖರಿಸಿಟ್ಟಿದ್ದ ಹುಲ್ಲನ್ನು ಕಂದಾಯ ಇಲಾಖೆ ಅಧಿಕಾರಿಗಳು ಸುತ್ತಮುತ್ತಲ ಗ್ರಾಮಸ್ಥರಿಗೆ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಹೋಬಳಿಯಾದ್ಯಂತ ನಿರೀಕ್ಷಿತ ಮಟ್ಟದಲ್ಲಿ ಮಳೆ ಬಿದ್ದಿಲ್ಲ. ಜಿಲ್ಲೆಯಲ್ಲಿಯೇ ಸಂತೇಮರಹಳ್ಳಿ ಹೋಬಳಿ ಅತ್ಯಂತ ಕಡಿಮೆ ಮಳೆ ಬಿದ್ದ ಪ್ರದೇಶವಾಗಿದೆ. ಕೆರೆ-ಕಟ್ಟೆಗಳು ಒಣಗಿ ನಿಂತಿವೆ. ಜಾನುವಾರುಗಳಿಗೆ ತಿನ್ನಲು ಮೇವಿಲ್ಲ, ಕುಡಿಯಲು ನೀರಿಲ್ಲದಂತಾಗಿದೆ. ಜಿಲ್ಲಾಡಳಿತ ಗೋಶಾಲೆ ಆರಂಭಿಸದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.`ಜಿಲ್ಲಾಡಳಿತದ ಆದೇಶದಂತೆ ಒಣಹುಲ್ಲನ್ನು ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಗೋಶಾಲೆ ಆರಂಭಿಸಲು ಆದೇಶ ನೀಡಿಲ್ಲ' ಎಂದು ಸಂತೇಮರಹಳ್ಳಿ ಉಪ ತಹಶೀಲ್ದಾರ್ ಪ್ರಭುರಾಜ್ `ಪ್ರಜಾವಾಣಿ'ಗೆ ತಿಳಿಸಿದರು. `ರೈತರ ಸಂಕಷ್ಟ ಅರಿತು ಜಿಲ್ಲಾಡಳಿತ ತಕ್ಷಣ ಗೋಶಾಲೆ ಆರಂಭಿಸಬೇಕು. ಇಲ್ಲದಿದ್ದರೆ ಶಾಸಕರ ಕಚೇರಿ ಮತ್ತು ಜಿಲ್ಲಾ ಕಚೇರಿ ಎದುರು ದನ-ಕರುಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು' ಎಂದು ಹಸಿರುಸೇನೆ ಜಿಲ್ಲಾಧ್ಯಕ್ಷ ಎಚ್.ಸಿ. ಮಹೇಶ್‌ಕುಮಾರ್ ಎಚ್ಚರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.