ಗುರುವಾರ , ಜೂನ್ 24, 2021
21 °C

ಸಂಚಾರ ಸುವ್ಯವಸ್ಥೆ: ಐಜಿಪಿ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ನಗರದಲ್ಲಿ ಹದಗೆಟ್ಟಿರುವ ಸಂಚಾರ ವ್ಯವಸ್ಥೆಯನ್ನು ತಕ್ಷಣವೇ ಸುಧಾರಿಸಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು~ ಎಂದು ಉತ್ತರ ವಲಯ ಐಜಿಪಿ ಕೆ.ಎಸ್.ಆರ್. ಚರಣ್ ರೆಡ್ಡಿ ಸ್ಥಳೀಯ ಅಧಿಕಾರಿಗಳಿಗೆ ತಾಕೀತು ಮಾಡಿದರು.`ಎರಡು ದಿನ ನಾನು ನಗರದಲ್ಲಿ ಸಂಚರಿಸಿದ್ದೇನೆ. ಇಲ್ಲಿಯ ಹದಗೆಟ್ಟ ಸಂಚಾರ ವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕೆಲ ಲೋಪವಾಗಿರುವುದನ್ನು ಗಮನಿಸಿ ದ್ದೇನೆ~ ಎಂದು ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.`ಗಾಂಧಿ ಚೌಕ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವರ್ತಕರು ರಸ್ತೆಯನ್ನು ಅತಿಕ್ರಮಿಸಿಕೊಳ್ಳುವುದನ್ನು ತಡೆಯಬೇಕು~ ಎಂದು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎಸಿಪಿ ಅಜಯ್ ಹಿಲೋರಿ ಅವರಿಗೆ ಸೂಚಿಸಿದರು.

ಆದ್ಯತೆ: `ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ನಾಗರಿಕರೊಂದಿಗೆ ಸೌಹಾರ್ದ ಸಂಬಂಧ ಇಟ್ಟುಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸುವುದು ನನ್ನ ಆದ್ಯತೆ. ಈ ಕುರಿತು ಎಸ್ಪಿಯಿಂದ ಇನ್ಸ್‌ಪೆಕ್ಟರ್ ವರಿಗಿನ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದೇನೆ~ ಎಂದು ರೆಡ್ಡಿ ಹೇಳಿದರು.`ಮಾಧ್ಯಮದವರಿಗೆ ಸಕಾಲಕ್ಕೆ ಮಾಹಿತಿ ನೀಡಲಿಕ್ಕಾಗಿ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪಿಆರ್‌ಒಗಳನ್ನು ನೇಮಿಸುವಂತೆ ಎಲ್ಲ ಎಸ್ಪಿಗಳಿಗೆ ಸೂಚನೆ ನೀಡಿದ್ದೇನೆ~ ಎಂದರು.

`ಜನಸೇವೆಯೇ ನಮ್ಮ ಗುರಿ. ಎಸ್ಪಿಯಿಂದ ಕಾನ್‌ಸ್ಟೇಬಲ್‌ರ ವರೆಗೂ ಎಲ್ಲರೂ ಸೇವಾ ಮನೋಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ರೂಢಿಸಿಕೊಳ್ಳಬೇಕು. ಕೊಲೆ, ದರೋಡೆ, ಅತ್ಯಾಚಾರ, ಪರಿಶಿಷ್ಟರ ಮೇಲಿನ ದೌರ್ಜನ್ಯಗಳಂತಹ ಗಂಭೀರ ಸ್ವರೂಪದ ಅಪರಾಧಗಳನ್ನು ಪರಿಣಾಮಕಾರಿಯಾಗಿ ತನಿಖೆ ನಡೆಸಬೇಕು.ಅಪರಾಧ ತಡೆಗೆ ಅಗತ್ಯ ಮುಂಜಾಗೃತೆ ವಹಿಸುವಂತೆ ಎಲ್ಲ ಅಧಿಕಾರಿಗಳಿಗೂ ಸೂಚಿಸಿದ್ದೇನೆ~ ಎಂದು ಹೇಳಿದರು.

`ಯಾವುದೇ ಪೊಲೀಸ್ ಠಾಣೆ ಯವರು ದೂರು ದಾಖಲಿಸಿಕೊಳ್ಳು ವುದನ್ನು ನಿರಾಕರಿಸಬಾರದು. ಯಾರೇ ದೂರು ತಂದರೂ ಮೊದಲು ಅದನ್ನು ದಾಖಲಿಸಿಕೊಳ್ಳಬೇಕು. ತನಿಖೆಯಲ್ಲಿ ಬರುವ ವಾಸ್ತವಾಂಶದಂತೆ ಮುಂದಿನ ಕ್ರಮ ಕೈಗೊಳ್ಳಬೇಕು~ ಎಂದರು.`ಉತ್ತರ ವಲಯದಲ್ಲಿ 128 ಪೊಲೀಸ್ ಠಾಣೆಗಳಿದ್ದು, 1.28 ಕೋಟಿ ಜನಸಂಖ್ಯೆ ಇದೆ. ಈಗಿರುವ ಸಿಬ್ಬಂದಿ ಕಡಿಮೆ. ಇದು ದೇಶವ್ಯಾಪಿ ಇರುವ ಸಮಸ್ಯೆ. ಒಂದು ಲಕ್ಷ ಜನಸಂಖ್ಯೆಗೆ 125ರಿಂದ 130 ಪೊಲೀಸರಿದ್ದಾರೆ.  ಈ ಪ್ರಮಾಣ 175ರಿಂದ 200 ಆಗಬೇಕು. ಈ ವಲಯದಲ್ಲಿ ಇನ್ನೂ 10 ಹೊಸ ಪೊಲೀಸ್ ಠಾಣೆ ಆರಂಭಿಸುವ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿದೆ~ ಎಂದರು.ಪ್ರಭಾರ ಎಸ್ಪಿ ಎಫ್.ಎ. ಟ್ರಾಸ್ಗರ್, ಎಸಿಪಿ ಅಜಯ್ ಹಿಲೋರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.