ಸೋಮವಾರ, ಮೇ 10, 2021
25 °C

ಸಂಪಿಗೆ ರಸ್ತೆ ನಿಲ್ದಾಣ: ಮತ್ತಷ್ಟು ಕಗ್ಗಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ತನ್ನ ಜಮೀನಿನಲ್ಲಿ ಮಂತ್ರಿ ಡೆವಲಪರ್ಸ್‌ ಸಂಸ್ಥೆಯು ಮತ್ತೆ ಬ್ಯಾರಿಕೇಡ್‌ಗಳನ್ನು ನಿರ್ಮಿಸುತ್ತಿದೆ~ ಎಂದು ರೈಲ್ವೆ ಇಲಾಖೆ ಆರೋಪಿಸಿರುವ ಹಿನ್ನೆಲೆಯಲ್ಲಿ  `ನಮ್ಮ ಮೆಟ್ರೊ~ದ ಸಂಪಿಗೆ ರಸ್ತೆ ನಿಲ್ದಾಣ ನಿರ್ಮಾಣ ವಿವಾದ ಮತ್ತಷ್ಟು ಕಗ್ಗಂಟಾಗಿದೆ.ರೈಲ್ವೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಬಿಬಿಎಂಪಿ ವರದಿ ಆಧರಿಸಿ ನೈರುತ್ಯ ರೈಲ್ವೆ ಇತ್ತೀಚೆಗೆ ಆ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಹಾಗೂ ಬೆಂಗಳೂರು ಮೆಟ್ರೊ ರೈಲ್ವೆ ನಿಗಮ (ಬಿಎಂಆರ್‌ಸಿಎಲ್) ಹೈಕೋರ್ಟ್ ಮೊರೆ ಹೋಗಿದ್ದವು. ನಂತರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಸೂಚಿಸಿತ್ತು.ವಿವಾದಾತ್ಮಕ ಜಮೀನಿನಲ್ಲಿ ಇತ್ತೀಚೆಗೆ ಪುನಃ ನಿರ್ಮಾಣ ಕಾಮಗಾರಿ ಆರಂಭವಾಗಿರುವುದು ರೈಲ್ವೆ ಇಲಾಖೆ ಗಮನಕ್ಕೆ ಬಂದಿದ್ದು ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮೌಖಿಕವಾಗಿ ಸೂಚಿಸಿದ್ದರು.ರೈಲ್ವೆ ಇಲಾಖೆ ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಿ ಬಿಎಂಆರ್‌ಸಿಎಲ್ ಹಾಗೂ ಸಂಸ್ಥೆ ಪುನಃ ಕೋರ್ಟ್ ಮೊರೆ ಹೋಗಿವೆ. ಉಭಯ ಬಣದವರು  ಹೇಳಿಕೆ ನೀಡುವಂತೆ ಕೋರ್ಟ್ ಸೂಚಿಸಿರುವುದಾಗಿ ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸುಧಾಂಶು ಮಣಿ, `ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಆದೇಶ ಇರುವಾಗ ಅಲ್ಲಿ ಬ್ಯಾರಿಕೇಡ್ ನಿರ್ಮಿಸಲು ಸಂಸ್ಥೆ ಮುಂದಾಗಿದೆ. ಆ ಜಾಗ ರೈಲ್ವೆ ಇಲಾಖೆಗೆ ಸೇರಿದ್ದು ಯಾವುದೇ ರೀತಿಯ ಒತ್ತುವರಿಗೆ ಅವಕಾಶ ನೀಡುವುದಿಲ್ಲ~ ಎಂದು ತಿಳಿಸಿದರು.ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ, `ಸಂಪಿಗೆ ರಸ್ತೆ ನಿಲ್ದಾಣ ನಿರ್ಮಾಣ ಕಾಮಗಾರಿ ನಿಲ್ಲುವುದಿಲ್ಲ. ಕಾಮಗಾರಿ ತಡವಾಗುತ್ತಿರುವುದಕ್ಕೆ ರೈಲ್ವೆ ಇಲಾಖೆಯೇ ಹೊಣೆ ಹೊರಬೇಕಾಗುತ್ತದೆ ಎಂದು ಪತ್ರದ ಮೂಲಕ ತಿಳಿಸಲಾಗಿದೆ~ ಎಂದು ಹೇಳಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಮಂತ್ರಿ ಡೆವಲಪರ್ಸ್ ಸಂಸ್ಥೆಯ ಸಹ ಉಪಾಧ್ಯಕ್ಷ ವಿ.ಜಿ.ಕಿರಣ್ ಕುಮಾರ್, `ನಾವು ಬ್ಯಾರಿಕೇಡ್ ಹಾಕುತ್ತಿಲ್ಲ. ಮೆಟ್ರೊ ನಿಲ್ದಾಣದ ಕಾಮಗಾರಿಗಾಗಿ ಇಟ್ಟುಕೊಂಡಿರುವ ನಿರ್ಮಾಣ ಸಾಮಗ್ರಿಗಳು, ಯಂತ್ರೋಪಕರಣಗಳು ಕಳ್ಳತನವಾಗುವ ಸಾಧ್ಯತೆ ಇದೆ. ಹೀಗಾಗಿ ನಾವು ನಿರ್ಮಾಣ ಸ್ಥಳದಲ್ಲಿ 40ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ~ ಎಂದು ಹೇಳಿದರು.ರೈಲ್ವೆ ಮಂಡಳಿಯ ಹಸಿರು ನಿಶಾನೆ

ಬೆಂಗಳೂರು:
`ನಮ್ಮ ಮೆಟ್ರೊ~ದ ರೈಲುಗಳ ಓಡಾಟಕ್ಕೆ ರೈಲ್ವೆ ಮಂಡಳಿಯು ಹಸಿರು ನಿಶಾನೆ ತೋರಿಸಿದೆ. ಆದರೆ ಸಾರ್ವಜನಿಕ ಸಂಚಾರ ಪ್ರಾರಂಭಿಸಲು ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆಯುವುದು ಬಾಕಿ ಇದೆ.ಬೆಂಗಳೂರು ಮೆಟ್ರೊ ರೈಲು ನಿಗಮವು ಸಂಚಾರಕ್ಕೆ ಬಿಡಲಿರುವ ರೈಲ್ವೆ ಗಾಡಿಗಳು (ರೋಲಿಂಗ್ ಸ್ಟಾಕ್) ಸಮರ್ಪಕವಾಗಿವೆ ಎಂದು ರೈಲ್ವೆ ಮಂಡಳಿ ಬುಧವಾರ ನೀಡಿರುವ ಪತ್ರದಲ್ಲಿ ಘೋಷಿಸಲಾಗಿದೆ.

ರೈಲ್ವೆ ಮಂಡಳಿ ನೀಡಿರುವ ಪತ್ರವನ್ನು ನಿಗಮವು ರೈಲ್ವೆ ಸುರಕ್ಷತಾ ಆಯುಕ್ತರಿಗೆ (ಸಿಆರ್‌ಎಸ್) ಸಲ್ಲಿಸಲಿದೆ.

 

ಜತೆಗೆ ಸಿಆರ್‌ಎಸ್ ತಜ್ಞರ ತಂಡದ ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದ ನ್ಯೂನತೆಗಳನ್ನು ಸರಿಪಡಿಸಿರುವ ಬಗ್ಗೆ ನಿಗಮವು ದಾಖಲಾತಿಗಳನ್ನು ಸಹ ಸಲ್ಲಿಸಲಿದೆ. ಈ ಎಲ್ಲದರ ಆಧಾರದಲ್ಲಿ ಸಿಆರ್‌ಎಸ್ ಸಲ್ಲಿಸುವ ವರದಿ ಆಧರಿಸಿ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರು ಅಂತಿಮವಾಗಿ ಸುರಕ್ಷತಾ ಪ್ರಮಾಣ ಪತ್ರವನ್ನು ಮುಂದಿನ ವಾರ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸುರಕ್ಷತಾ ಪ್ರಮಾಣ ಪತ್ರ ಕೈ ಸೇರಿದ ಮೇಲೆ ನಿಗಮವು ಉದ್ಘಾಟನೆಗೆ ದಿನಾಂಕ ನಿಗದಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.