ಸೋಮವಾರ, ಜೂನ್ 14, 2021
22 °C

ಸಂಭ್ರಮದ ಗುರುತಿಪ್ಪೇರುದ್ರ ಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಕಾಯಕ ಸಂಸ್ಕೃತಿಯ ಹರಿಕಾರ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ      ನಡೆಯಿತು.ರಾಜ್ಯ ಮತ್ತು ಹೊರ ರಾಜ್ಯಗಳ ಮೂಲೆ ಮೂಲೆಗಳಿಂದ ಪ್ರವಾಹೋಪಾದಿಯಲ್ಲಿ ಹರಿದು ಬಂದಿದ್ದ ಭಕ್ತಗಣ ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಯಿತು. ಸುಡುವ ಬಿರು ಬಿಸಿಲನ್ನು ಲೆಕ್ಕಿಸದೆ ಭಕ್ತಾದಿಗಳು ಉತ್ಸಾಹದಿಂದ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥಬೀದಿಯಲ್ಲಿ ಗಿಜಿಗಿಡುವಂತೆ ಜನದಟ್ಟಣೆ ಜಮಾಯಿಸಿತ್ತು.ಸುಮಾರು 70 ಅಡಿ ಎತ್ತರದ ರಥವನ್ನು ಹಸಿರು, ಬಿಳಿ, ಕೆಂಪು, ಕಪ್ಪುಬಣ್ಣಗಳ ಬಾವುಟ ಹಾಗೂ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮಧ್ಯಾಹ್ನ ಒಳಮಠದ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಅಡ್ಡಪಲ್ಲಕ್ಕಿಯಲ್ಲಿ ಸ್ವಾಮಿಯನ್ನು ಮಂಗಳವಾದ್ಯಗಳೊಂದಿಗೆ ಕರೆತರಲಾಯಿತು. ತಳಕು, ಮನ್ನೇಕೊಟೆ ಗ್ರಾಮಗಳ ಭಕ್ತರಿಂದ ಮಹಾಮಂಗಳಾರತಿ ನಡೆಯಿತು. ನಂತರ ಭಕ್ತರು ಚಿತ್ತಾ ನಕ್ಷತ್ರದ ಸಮಯಕ್ಕೆ ಸರಿಯಾಗಿ ರಥ ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಮಧ್ಯಾಹ್ನ 3.50ರ ಸುಮಾರಿಗೆ ರಥೋತ್ಸವ ಆರಂಭವಾಯಿತು.ಅದಕ್ಕೂ ಮುನ್ನ ತಿಪ್ಪೇರುದ್ರಸ್ವಾಮಿ ಹೆಸರಿನಲ್ಲಿ ರಥಕ್ಕೆ ಕಟ್ಟುವ ಮುಕ್ತಿಬಾವುಟವನ್ನು ಈ ಬಾರಿ ರೂ. 9 ಲಕ್ಷಕ್ಕೆ ಶಾಸಕ ಡಿ. ಸುಧಾಕರ್ ಹರಾಜಿನಲ್ಲಿ ಪಡೆದರು. ಕಳೆದ ವರ್ಷ ಎಪಿಎಂಸಿ ಸದಸ್ಯ ಪ್ರಕಾಶ್ ಅವರು ರೂ. 10 ಲಕ್ಷಕ್ಕೆ ಅದನ್ನು ಪಡೆದಿದ್ದರು.ಹರಾಜು ಮುಗಿದ ನಂತರ ವಿವಿಧ ಜಾನಪದ ಕಲೆಗಳ ನೃತ್ಯಗಳೊಂದಿಗೆ ರಥಬೀದಿಯಲ್ಲಿ ನಡೆದ ರಥೋತ್ಸವ ಕಂಡ ಭಕ್ತಸಮೂಹದಿಂದ ಹರ್ಷೋದ್ಗಾರ ವ್ಯಕ್ತವಾಯಿತು.ಗುರುತಿಪ್ಪೇರುದ್ರಸ್ವಾಮಿಗೆ ಭಕ್ತಗಣ ವಿಶಿಷ್ಟ ಹಾಗೂ ವೈವಿಧ್ಯಮಯ ಹರಕೆಗಳನ್ನು ನೀಡುತ್ತಿದ್ದುದು ಕಂಡು ಬಂತು. ರಥಬೀದಿಯುದ್ದಕ್ಕೂ ಕೆಲವರು ತೆಂಗಿನಕಾಯಿ ಒಡೆದರೆ, ಉಳಿದವರು ದವನ, ಬಾಳೆಹಣ್ಣು, ಮೆಣಸುಕಾಳು, ಮಂಡಕ್ಕಿ, ಬಿಲ್ವಪತ್ರೆ ರಥಕ್ಕೆ ಬೀರಿ ಹರಕೆ ತೀರಿಸಿದರು.ಜಾತ್ರೆಯಲ್ಲಿ ಪ್ರಾಣಿ ಬಲಿ ನಡೆಯದಂತೆ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಂಡಿತ್ತು. ಗ್ರಾಮವನ್ನು ಪ್ರವೇಶಿಸುವ ಸ್ಥಳಗಳಲ್ಲಿ ತಪಾಸಣಾ ಠಾಣೆಗಳನ್ನು ಸ್ಥಾಪಿಸಲಾಗಿತ್ತು. ಈ ಬಗ್ಗೆ ಅರಿವು ಮೂಡಿಸಲು ಅಲ್ಲಲ್ಲಿ ಬ್ಯಾನರ್‌ಗಳನ್ನು ಸಹ ಹಾಕಲಾಗಿತ್ತು.ಗುರು ತಿಪ್ಪೇರುದ್ರಸ್ವಾಮಿಗೆ ಹರಕೆ ರೂಪದಲ್ಲಿ ಭಕ್ತಾದಿಗಳು ಕೊಬ್ಬರಿ ಸುಟ್ಟು ಭಕ್ತಿ ಸಮರ್ಪಿಸಿದರು. ಒಳಮಠದ ಮುಂಭಾಗದಲ್ಲಿ ರಾಶಿ ರಾಶಿ ಕೊಬ್ಬರಿ ಸುಡುವ ದೃಶ್ಯ ಸಾಮಾನ್ಯವಾಗಿತ್ತು. ಇದರಿಂದ ದಟ್ಟವಾದ ಕಪ್ಪು ಹೊಗೆ ಎಲ್ಲೆಡೆ ಆವರಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.