ಸೋಮವಾರ, ಜನವರಿ 20, 2020
24 °C

ಸಂಸ್ಕಾರದಿಂದ ಭವಿಷ್ಯ ನಿರ್ಧಾರ: ಮಾತಾಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ: `ಮಕ್ಕಳಿಗೆ ನೀಡುವ ಸಂಸ್ಕಾರದ ಮೇಲೆ ಅವರ ಭವಿಷ್ಯ ನಿರ್ಧಾರವಾಗುತ್ತದೆ. ನಾಗರಿಕತೆ, ಸಂಸ್ಕೃತಿ, ಅಧ್ಯಾತ್ಮ  ಎಂಬ ಮೂರು ಹಂತಗಳಲ್ಲಿ ಮನುಷ್ಯ ಸಂಸ್ಕಾರವನ್ನು ಪಡೆಯುತ್ತಾನೆ~ ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅಭಿಪ್ರಾಯಪಟ್ಟರು.ಲಿಂಗಾಯಿತ ಪಂಚಮಸಾಲಿ ಪೀಠ, ಹುನಗುಂದದ ಮಾತಾ ಶಿಕ್ಷಣ ಸಂಸ್ಥೆ ಹಾಗೂ ಸಂಗಮೇಶ್ವರ ಗ್ರಾಮೀಣ ಶಿಕ್ಷಣ ಹಾಗೂ ಸಮಾಜ ಸೇವಾ ಸಮಿತಿಯ ಸಹಯೋಗದಲ್ಲಿ ಸೋಮವಾರ ಇಲ್ಲಿ ನಡೆದ 2011-12ರ ಸ್ವರೂಪ ಶಿಕ್ಷಣ ಜಾಗೃತಿ ಜಾಥಾ ಹಾಗೂ ಜ್ಞಾನ-ಗಾನ-ಸಂಗಮ ಸಿ.ಡಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.  `ಶಿಕ್ಷಣ ಎಂದರೆ ಸಂಸ್ಕಾರ ಪಡೆಯುವುದು. ಇದರಲ್ಲಿ ತಂದೆ-ತಾಯಿ, ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಪಾತ್ರ ಮಹದ್ದು. ಉತ್ತಮ ಸಂಸ್ಕಾರದ ಮೂಲಕ ವ್ಯಕ್ತಿ ಪರಿಪೂರ್ಣನಾಗುತ್ತಾನೆ~ ಎಂದು ಅವರು ಹೇಳಿದರು.

ಮಕ್ಕಳಲ್ಲಿ ಗ್ರಹಣ ಶಕ್ತಿ, ವಿಷಯಗಳನ್ನು ಮನನ ಮಾಡುವುದು, ನೆನಪಿನ ಶಕ್ತಿ ಇತ್ಯಾದಿಯನ್ನು ಜಾಗೃತ ಗೊಳಿಸಿದರೆ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ.  ಮಕ್ಕಳಲ್ಲಿ ಕಲಿಯುವ ಹಂಬಲ ಇದ್ದರೆ ಸರ್ಕಾರಿ ಅಥವಾ ಖಾಸಗಿ ಶಾಲೆ ಯಾವುದೇ ಇರಲಿ, ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ~ ಎಂದು ಅವರು ಹೇಳಿದರು.ಸಮಾರಂಭದ ಉದ್ಘಾಟನೆಯನ್ನು ಮಾಜಿ ಶಿಕ್ಷಣ ಸಚಿವೆ ನಾಗಮ್ಮ ಕೇಶವಮೂರ್ತಿ ನೇರವೇರಿಸಿದರು.

ವಿದ್ಯಾವಂತರ ಮನೆಯಲ್ಲಿ ಸಂಸ್ಕಾರದ ಕೊರತೆಯಿದೆ ಎಂದು ಹೇಳಿದ ಅವರು, ಮಕ್ಕಳು ತಪ್ಪು ಹಾದಿಯನ್ನು ತುಳಿಯು ತ್ತಿರುವುದರಿಂದ ಸಂಸ್ಕಾರ ಕೊಡುವ ಕಾರ್ಯವನ್ನು ಪಾಲಕರು  ಹಾಗೂ ಶಿಕ್ಷಕರು ಮಾಡಬೇಕು ಎಂದು ಅವರು ಹೇಳಿದರು.ಜ್ಞಾನ-ಗಾನ-ಸಂಗಮ ಸಿ.ಡಿಯನ್ನು ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಬಿಡುಗಡೆ ಮಾಡಿದರು.

ಇಂದು ದೇಶದಲ್ಲಿ ಮಾನವ ಸಂಪನ್ಮೂಲಕದ ಸಮರ್ಪಕ ಬಳಕೆಯಾಗುತ್ತಿಲ್ಲ. ಸಂಪನ್ಮೂಲದ ಬಳಕೆಯಲ್ಲಿ ಭಾರತ 119ನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.`ಮಾನವ ಸಂಪನ್ಮೂಲವನ್ನು ಬಳಕೆ ಮಾಡಲು ಸಂಸ್ಕಾರ ನೀಡುವ ಶಿಕ್ಷಣ ಅಗತ್ಯ. ಸಂಶೋಧನಾ ಸಾಧನೆಯಲ್ಲಿ  ಅಮೇರಿಕಾ ಮುಂದಿದೆ. ಈ ಹಾದಿಯಲ್ಲಿ ಸಾಗಲು ಭಾರತ  ಶ್ರಮಿಸಬೇಕಿದೆ ಎಂದು ಅವರು ಹೇಳಿದರು.ಕೂಡಲಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಣ ವ್ಯಾಪಾರೀಕರಣಗೊಳ್ಳಬಾರದು, ಸಮಾಜ ಸೇವೆಯ ಕಾರ್ಯವಾಗಿ ಬೆಳೆಯಬೇಕು. ಶಿಕ್ಷಣದಲ್ಲಿ ಹೊಸ  ಪ್ರಯೋಗಗಳು ನಡೆಯಬೇಕು ಎಂದು ಹೇಳಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ಭೀಮಪ್ಪ ಭಜಂತ್ರಿ, ಕೂಡ ಲಸಂಗಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ ಅಮರ ಗೋಳ, ಗುತ್ತಿಗೆದಾರ ಎಸ್.ಆರ್.ನವಲಿಹಿರೇಮಠ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಎಂ.ನಾರಾಯಣಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಾಗೇನವರ, ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್, ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಜಿ.ಜಿ.ಪಾಟೀಲ, ಕೂಡಲಸಂಗಮ ಪಶು ಇಲಾಖೆಯ ಜಿ.ಎಸ್.ಪಾಟೀಲ, ಗಂಜಿಹಾಳ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರು ಯು.ಬಿ.ಧರಿಕಾರ ಮುಂತಾದವರು ಉಪಸ್ಥಿತರಿದ್ದರು.

ಎನ್.ಬಿ.ದ್ಯಾಪೂರ ಸ್ವಾಗತಿಸಿದರು. ಸ್ವರೂಪ ಶಿಕ್ಷಣ ಜಾಗೃತ ತಂಡದಿಂದ ನೆನಪಿನ ಶಕ್ತಿಯ ಕುರಿತು ಕಾರ್ಯಕ್ರಮ ನಡೆಯಿತು.

ಪ್ರತಿಕ್ರಿಯಿಸಿ (+)