ಬುಧವಾರ, ಮೇ 12, 2021
24 °C

ಸಕಾಲ ರೂಪ ತಳೆದದ್ದು ಬೀದರ್‌ನಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಬೀದರ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ `ಸಕಾಲ~ಕ್ಕೆ ಪ್ರೇರಣೆ ಒದಗಿಸಿದ್ದು ಆರು ವರ್ಷಗಳ ಹಿಂದೆ ಬೀದರ್‌ನಲ್ಲಿ ಆರಂಭಿಸಲಾಗಿದ್ದ `ಸ್ಪಂದನ~. ಸೌಲಭ್ಯಗಳನ್ನು ಸಾರ್ವಜನಿಕರಿಗೆ ನಿಗದಿತ ಸಮಯಕ್ಕೆ ಒದಗಿಸುವ ಉದ್ದೇಶದಿಂದ ಬೀದರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ 2007 ನವೆಂಬರ್ 1ರಂದು ಆರಂಭಿಸಲಾಗಿದ್ದ `ಸ್ಪಂದನ~ದ ಸುಧಾರಿತ ರೂಪವೇ `ಸಕಾಲ~.ಆಗ ಜಿಲ್ಲಾಧಿಕಾರಿಯಾಗಿದ್ದ ಮುನೀಷ್ ಮೌದ್ಗಿಲ್ ಅವರ ಆಸಕ್ತಿ ಮತ್ತು ಕಾಳಜಿಯಿಂದಾಗಿ `ಸ್ಪಂದನ~ ರೂಪುಗೊಂಡಿತ್ತು. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಆಗ ಬೀದರ್‌ನಲ್ಲಿ ಜಿಲ್ಲಾ ಸೂಚನಾ ವಿಜ್ಞಾನ ಕೇಂದ್ರದ (ಡಿಐಸಿ) ಅಧಿಕಾರಿಯಾಗಿದ್ದ ಲಿಂಗರಾಜ ತಿರಲಾಪುರ ಅವರು `ಸ್ಪಂದನ~ ಸಾಫ್ಟ್‌ವೇರ್ ರೂಪಿಸಿದ್ದರು.ಜಿಲ್ಲಾಧಿಕಾರಿಗಳ ಕಚೇರಿಯಿಂದ ನೀಡಲಾಗುವ `ಜಾತಿ ಪ್ರಮಾಣಪತ್ರ ದೃಢೀಕರಣ~, `ರಾಷ್ಟ್ರೀಯತೆ ಪ್ರಮಾಣಪತ್ರ~, `ಹಿಂದುಳಿದ ವರ್ಗಗಳ ಪ್ರಮಾಣಪತ್ರ~, `ಗಡಿಭಾಗ ಪ್ರಮಾಣಪತ್ರ~, ಸಿನಿಮಾ ಪರವಾನಗಿ, ಶಸ್ತ್ರಾಸ್ತ್ರ ಪರವಾನಗಿ ಮತ್ತು ನವೀಕರಣ, ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿನ ಮಾಹಿತಿ ಪೂರೈಕೆ, ನಗರಸಭೆಯ ಮ್ಯುಟೇಶನ್, ಅನುಕಂಪ ಆಧಾರಿತ ನೇಮಕಾತಿಗಳು, ಭೂಮಿ ಸರ್ವೇ ಸೇರಿದಂತೆ  20 ಸೇವೆಗಳು `ಸ್ಪಂದನ~ದಲ್ಲಿ ಲಭ್ಯವಿದ್ದವು.ಪ್ರತಿಯೊಂದು ಸೇವೆಗೂ ಅರ್ಜಿಯ ಜೊತೆಗೆ ಲಗತ್ತಿಸಬೇಕಾದ ದಾಖಲೆಗಳ ವಿವರಗಳನ್ನು ನಿಗದಿ ಪಡಿಸಲಾಗಿತ್ತು. ಅರ್ಜಿ ಸಲ್ಲಿಸುವಾಗಲೇ ಕೌಂಟರ್‌ನಲ್ಲಿದ್ದ ಅಧಿಕಾರಿಯು ಅರ್ಜಿಯ ಜೊತೆಗೆ ಲಗತ್ತಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು.ವಿವರಗಳನ್ನು ಚೆಕ್‌ಲಿಸ್ಟ್‌ನಲ್ಲಿ ನಮೂದಿಸಿ ಅರ್ಜಿಯ ಸ್ವಿಕೃತಿ ಪತ್ರ ನೀಡುವ ಸಂದರ್ಭದಲ್ಲಿ ಪ್ರಮಾಣಪತ್ರ ಒದಗಿಸುವ ದಿನಾಂಕ ನಿಗದಿ ಪಡಿಸಿ ಅದರ ವಿವರ ಒದಗಿಸಲಾಗುತ್ತಿತ್ತು. ಜಾತಿ ಪ್ರಮಾಣಪತ್ರ ದೃಢೀಕರಣ ಒದಗಿಸಲು 15 ದಿನಗಳನ್ನು ನಿಗದಿ ಪಡಿಸಲಾಗಿದೆ ಎಂದರೆ ಅದರ ಪರಿಶೀಲನೆಗಾಗಿ ಸಂಬಂಧಿಸಿದ ತಹಸೀಲ್ದಾರ್‌ರಿಗೆ ಒಂದು ವಾರದ ಕಾಲಾವಕಾಶ ನೀಡಲಾಗುತ್ತಿತ್ತು.

 

ಅರ್ಜಿಯ ವಿವರಗಳನ್ನು ಒಳಗೊಂಡ ಪತ್ರವನ್ನು `ಸ್ಪಂದನ~ಕ್ಕಾಗಿಯೇ ಸಿದ್ಧಪಡಿಸಿದ ಕೆಂಪುಬಣ್ಣದ ಲಕೋಟೆಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಲುಪಿಸಲಾಗುತ್ತಿತ್ತು. ನಿಗದಿತ ಅವಧಿಯೊಳಗಾಗಿ ಪತ್ರಕ್ರೆ ಮಾರುತ್ತರ ಬರೆಯುವ ಜವಾಬ್ದಾರಿ ಸಂಬಂಧಿಸಿದ ಅಧಿಕಾರಿಗೆ ಇರುತ್ತಿತ್ತು. ಯಾವಾಗ ಬೇಕಾದರೂ ಅರ್ಜಿ ಯಾವ ಹಂತದಲ್ಲಿದೆ? ಎಂದು `ಸ್ಪಂದನ~ ಸಾಫ್ಟ್‌ವೇರ್ ಮೂಲಕ ತಿಳಿದುಕೊಳ್ಳಬಹುದಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಸೇವೆ ದೊರೆಯುವುದು ಸಾಧ್ಯವಾಗಿತ್ತು. `ಸ್ಪಂದನ~ಕ್ಕೆ ಜಿಲ್ಲೆಯ ಜನರಿಂದ ಮಾತ್ರವಲ್ಲದೆ ಬೇರೆ ಕಡೆಗಳಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು.`ಸ್ಪಂದನ~ ಮತ್ತು `ಸಕಾಲ~: `ಸ್ಪಂದನ~ ಯೋಜನೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ಒದಗಿಸಲಾಗುವ 20 ಸೌಲಭ್ಯಗಳನ್ನು ಮಾತ್ರ ಒಳಗೊಂಡಿತ್ತು. `ಸಕಾಲ~ದಲ್ಲಿ ವಿವಿಧ ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದ 150 ಸೌಲಭ್ಯಗಳನ್ನು ರಾಜ್ಯದಾದ್ಯಂತ ಪಡೆಯಲು ಸಾಧ್ಯವಿದೆ. `ಸಕಾಲ~ಕ್ಕೆ `ಕರ್ನಾಟಕ ಸೇವಾ ಖಾತ್ರಿ ಕಾಯ್ದೆ~ಯ ಬೆಂಬಲ ಇದೆ. ಇಂತಹದ್ದೊಂದು ಕಾಯ್ದೆಯನ್ನು ಜಾರಿಗೆ ತರುವುದಕ್ಕೆ ಪ್ರೇರಣೆ ಒದಗಿಸಿದ್ದು `ಸ್ಪಂದನ~ ಎಂದು ಸಾಫ್ಟ್‌ವೇರ್ ರೂಪಿಸಿದ ಲಿಂಗರಾಜ ತಿರಲಾಪುರ ಅಭಿಪ್ರಾಯ ಪಡುತ್ತಾರೆ.ಸ್ಪಂದನಕ್ಕೆ ಪ್ರೇರಣೆ: `ಗ್ರಾಮೀಣ ಕೃಪಾಂಕದ ಆಧಾರದ ಮೇಲೆ ಸರ್ಕಾರಿ ನೌಕರಿಗೆ ಸೇರಬೇಕಾಗಿದ್ದ ಯುವತಿಯೊಬ್ಬಳು ಗ್ರಾಮೀಣ ಪ್ರದೇಶದಲ್ಲಿ ಅಧ್ಯಯನ ನಡೆಸಿರುವ ಕುರಿತ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಳು. ಮೂರು ತಿಂಗಳು ಕಳೆದರೂ ಪ್ರಮಾಣಪತ್ರ ಸಿಕ್ಕಿರಲಿಲ್ಲ. ಕಚೇರಿಯಿಂದ ಕಚೇರಿಗೆ ಅಲೆದಾಡಿ ಸುಸ್ತಾದ ಯುವತಿಯು ಕೈಯಲ್ಲಿ ವಿಷದ ಬಾಟಲಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿ ಜಿಲ್ಲಾಧಿಕಾರಿ ಕಚೇರಿಗೆ ಬಂದಳು.ಜಿಲ್ಲಾಧಿಕಾರಿಗಳು ಅವಳಿಂದ ಮಾಹಿತಿ ಪಡೆದು ವಿಚಾರಣೆ ನಡೆಸಿದಾಗ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹಾಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಎಲ್ಲ ರೀತಿಯ ದಾಖಲೆ, ಮಾಹಿತಿ ಒದಗಿಸಿದ ನಂತರ ನಿಗದಿತ ಅವಧಿಯೊಳಗೆ ಸರ್ಕಾರಿ ಸೌಲಭ್ಯ ನೀಡುವ ರೀತಿಯ ವ್ಯವಸ್ಥೆ ರೂಪಿಸುವ ಯೋಚನೆ ಬಂತು ಎನ್ನುತ್ತಾರೆ~ `ಸಕಾಲ~ ಯೋಜನೆಯ ಹೆಚ್ಚುವರಿ ಮಿಷನ್ ನಿರ್ದೇಶಕರಾಗಿರುವ ಮುನೀಷ್ ಮೌದ್ಗಿಲ್ ಅವರು.`ಸಕಾಲ~ವು `ಸ್ಪಂದನ~ಕ್ಕಿಂತ ಹೆಚ್ಚು ಸುಧಾರಿತ ಮತ್ತು ಜನರಿಗೆ ಸೇವೆಗಳನ್ನು ಒದಗಿಸುವ ಯೋಜನೆ. ಒಂದು ಕುಟುಂಬದ ಒಬ್ಬ ಜಾತಿ ಪ್ರಮಾಣಪತ್ರ ಪಡೆಯುವುದಕ್ಕಾಗಿ ಪರಿಶೀಲನೆ ಇತ್ಯಾದಿ ಕಾರಣಗಳಿಗಾಗಿ 15ದಿನಗಳ ಅಗತ್ಯವಿದ್ದರೆ ಅದೇ ಕುಟುಂಬದ ಮತ್ತೊಬ್ಬ ವ್ಯಕ್ತಿಯ ಜಾತಿ ಪ್ರಮಾಣಪತ್ರ ಪಡೆಯುವುದಕ್ಕೆ ಅಷ್ಟೇ ಸಮಯ ನಿಗದಿ ಪಡಿಸಬೇಕಿಲ್ಲ. ಸರಿಯಾದ ಮಾಹಿತಿ, ದಾಖಲೆ ಇದ್ದರೆ ಸ್ಥಳದಲ್ಲಿಯೇ ಪ್ರಮಾಣಪತ್ರ ಒದಗಿಸುವ ರೀತಿಯ ಸೇವೆಗಳನ್ನು `ಸಕಾಲ~ದಲ್ಲಿ ಸೇರಿಸಲು ಉದ್ದೇಶಿಸಲಾಗಿದೆ ಎಂದು ಮುನೀಷ್ ಮೌದ್ಗಿಲ್ ವಿವರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.