ಭಾನುವಾರ, ಜೂನ್ 13, 2021
21 °C

ಸಚಿವರು, ಶಾಸಕರ ವಿರುದ್ಧ ಸಚಿವ ಖರ್ಗೆ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಟ್ಟೂರು: ‘ನಾನು ಶಾಸಕನಾದಷ್ಟು ಅವಧಿ ಇವರಿಗೆ ವಯಸ್ಸಾಗಿಲ್ಲ. ಆದರೂ ಶಿಷ್ಟಾಚಾರ ಕುರಿತು ಪರಸ್ಪರ ಕಚ್ಚಾಡುತ್ತಾರೆ’ ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಹಾಗೂ ಹಗರಿಬೊಮ್ಮನಹಳ್ಳಿ ಶಾಸಕ ಎಸ್‌.ಭೀಮಾನಾಯ್ಕ ಅವರ ವಿರುದ್ಧ ಕಿಡಿ ಕಾರಿದ ಪ್ರಸಂಗ ಇಲ್ಲಿನ ರೈಲ್ವೆ ನಿಲ್ದಾಣದ ಆವರಣದಲ್ಲಿ ಸೋಮವಾರ ನಡೆದ ಕೊಟ್ಟೂರು–ಹರಿಹರ ನೂತನ ರೈಲು ಸಂಚಾರದ ಉದ್ಘಾಟನಾ ಸಮಾರಂಭದಲ್ಲಿ ನಡೆಯಿತು.‘ಇದು ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯದ ಸಮಾರಂಭವಾಗಿರುವುದರಿಂದ ಇಲ್ಲಿ ಸ್ಥಳೀಯ ಶಾಸಕರನ್ನು ಸಂಪರ್ಕಿಸಬೇಕು ಎಂಬ ಶಿಷ್ಟಾಚಾರ ಇರುವುದಿಲ್ಲ. ಆದರೆ ನಾನು ಪಾಲ್ಗೊಳ್ಳುವ ಸಮಾರಂಭದಲ್ಲಿ ಸೌಜನ್ಯಕ್ಕಾಗಿ ಸ್ಥಳೀಯ ಶಾಸಕರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸುತ್ತಿದ್ದೇನೆ. ಅಷ್ಟೇ ಅಲ್ಲದೆ ಶಾಸಕರನ್ನು ವೇದಿಕೆಗೆ ಆಹ್ವಾನಿಸಲಾಗುತ್ತದೆ. ಆದರೆ ಇದನ್ನೆ ಬಂಡವಾಳವನ್ನಾಗಿಸಿಕೊಂಡು ಇಂಥ ಸಮಾರಂಭದಲ್ಲಿ ಅಗೌರವವಾಗಿ ನಡೆದುಕೊಳ್ಳು­ವುದು ಸರಿಯಲ್ಲ’ ಎಂದು ಕುಟುಕಿದರು.‘ತಮ್ಮ ಕ್ಷೇತ್ರದ ರೈಲ್ವೆ ಸಮಸ್ಯೆಗಳನ್ನು ಪರಿಹರಿಸಿ­ಕೊಳ್ಳಲು ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡ ಅವರು ಸ್ವತಃ ರೈಲ್ವೆ ಭವನಕ್ಕೆ ಬರುತ್ತಾರೆ. ಅಂಥವರ ಸೌಜನ್ಯ ಹೀಗೆ ವರ್ತನೆ ಮಾಡುವವರಿ­ಗೆಲ್ಲಾ ಮಾದರಿಯಾಬೇಕಿದೆ’ ಎಂದು ಖರ್ಗೆ ಚುಚ್ಚಿದರು.ಸಚಿವರ ವಿರುದ್ಧ ಕಿಡಿ

ನೂತನ ಕೊಟ್ಟೂರು–ಹರಿಹರ ರೈಲು ಸಂಚಾರ ಆರಂಭದ ಉದ್ಘಾಟನಾ ಸಮಾರಂಭ ಹಾಗೂ ಅದಕ್ಕೂ ಮುನ್ನ ನಡೆದ ಪೂರ್ವಭಾವಿ ಸಭೆಗೂ ತಮ್ಮನ್ನು ಗೌರವದಿಂದ ಆಹ್ವಾನಿಸಿಲ್ಲ ಎಂದು ಆರೋಪಿಸಿ ಶಾಸಕ ಎಸ್‌.ಭೀಮಾನಾಯ್ಕ ಅವರು ವೇದಿಕೆಯ ಮುಂಭಾಗದಲ್ಲಿ ಸಾರ್ವಜನಿಕರೊಂದಿಗೆ ಕುಳಿತುಕೊಂಡರು.ನಂತರ ಜಿಲ್ಲಾಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಚೇತ­ನ್‌ಸಿಂಗ್‌ ರಾಥೋರ್‌ ಅವರು ಭೀಮಾ­ನಾಯ್ಕ ಅವರನ್ನು ಮನವೊಲಿಸಿ ವೇದಿಕೆಗೆ ಕರೆ ತಂದರು.ವೇದಿಕೆಗೆ ಆಗಮಿಸುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರೊಂದಿಗೆ ವಾಗ್ವಾದಕ್ಕೆ ಇಳಿದರು. ನಂತರ ತಮ್ಮ ಭಾಷಣದಲ್ಲಿ ತಮ್ಮನ್ನು ಗೌರವದಿಂದ ಆಹ್ವಾನಿಸಿಲ್ಲ. ಇದರಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು, ಈ ವಿಷಯವನ್ನು ಸದನದ ಗಮನಕ್ಕೆ ತರುವುದಾಗಿ ಸಂಘಟಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.