ಮಂಗಳವಾರ, ಮೇ 24, 2022
31 °C

ಸಚಿವರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಸಂಗ: ಸಿಬಿಐ ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುದುಚೇರಿ (ಪಿಟಿಐ): ಖುದ್ದು ಶಿಕ್ಷಣ ಸಚಿವರೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಕುಳಿತು, ವಿವಾದದ ಕೇಂದ್ರಬಿಂದುವಾಗಿರುವ ಪ್ರಸಂಗ ಇಲ್ಲಿ ನಡೆದಿದೆ.ಪಿ.ಎಂ.ಎಲ್ ಕಲ್ಯಾಣ ಸುಂದರಂ ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತ್ತಿದ್ದು, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಫೇಲಾಗಿದ್ದರು. ನಂತರ ಕಳೆದ ಎರಡು ದಶಕಗಳಲ್ಲಿ ಆ ಎರಡು ವಿಷಯಗಳಲ್ಲಿ ಪಾಸಾಗಲು ನಡೆಸಿದ ಪ್ರಯತ್ನಗಳೆಲ್ಲಾ ವಿಫಲಗೊಂಡಿದ್ದವು. ಆದರೆ ಅವರು ಸಾರ್ವಜನಿಕ ಬದುಕಿನ `ಪರೀಕ್ಷೆ~ಯಲ್ಲಿ ಇನ್ನಿಲ್ಲದ ಯಶಸ್ಸು ಗಳಿಸಿ ಪ್ರಸಕ್ತ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ.ಈಗ ಇವರು ತಮ್ಮ ಪ್ರಭಾವವನ್ನು ಬಳಸಿಯಾದರೂ ಆ ಎರಡು ವಿಷಯಗಳಲ್ಲಿ ಪಾಸಾಗುವ ಪ್ರಯತ್ನ ನಡೆಸಿಯೇ ಬಿಟ್ಟಿದ್ದಾರೆ. ಸೆಪ್ಟೆಂಬರ್ 29 ಮತ್ತು 30ರಂದು ದಿಂಡಿವನಂನಲ್ಲಿ ಪರೀಕ್ಷೆ ಬರೆಯಲು ಕುಳಿತ್ತಿದ್ದರೆಂಬುದು ಈಗ ಪುದುಚೇರಿ, ತಮಿಳುನಾಡಿನಾದ್ಯಂತ ಸುದ್ದಿಯಾಗಿದೆ. ಆದರೆ ಅವರು ಪರೀಕ್ಷೆ ಬರೆದಿರುವುದಕ್ಕಲ್ಲ ! ತಮ್ಮ ಹೆಸರಲ್ಲಿ ಪರೀಕ್ಷೆ ಬರೆಯಲು ಬೇರೊಬ್ಬ ವ್ಯಕ್ತಿಯನ್ನು ಅವರು ಕುಳ್ಳಿರಿಸಿದ್ದರಂತೆ. ಈ ರೀತಿ ಪುದುಚೇರಿ ಕಾಂಗ್ರೆಸ್ ಮುಖಂಡರ ನಿಯೋಗ ಸಾಕ್ಷ್ಯಾಧಾರಗಳ ಸಮೇತ ಆರೋಪಿಸಿದ್ದು, ರಾಜ್ಯಪಾಲ ಇಕ್ಬಾಲ್ ಸಿಂಗ್ ಅವರಿಗೂ ದೂರು ಸಲ್ಲಿಸಿದೆ.ನಿರಾಕರಣೆ: ತಮ್ಮ ಮೇಲಿನ ಆಪಾದನೆಗಳನ್ನು ಸಚಿವರು ಅಲ್ಲಗಳೆದಿದ್ದಾರೆ. `ಈ ಆರೋಪ ರಾಜಕೀಯ ಪ್ರೇರಿತವಾಗಿದೆ. ಸೆಪ್ಟೆಂಬರ್ 29ರಂದು ನಾನು ಪರೀಕ್ಷೆ ಬರೆದಿದ್ದೇನೆ. ಆದರೆ 30ರಂದು ಬರೆದಿಲ್ಲ. ಆವತ್ತು ಅಧಿಕೃತ ಸಭೆ ಇದ್ದುದರಿಂದ ಅದರಲ್ಲಿ ಪಾಲ್ಗೊಳ್ಳಲು ನಾನು ತೆರಳಿದ್ದೆ~ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.ಕೇಂದ್ರ ಸಚಿವ ಒತ್ತಾಯ: ಪ್ರಧಾನಿ ಸಚಿವಾಲಯದ ರಾಜ್ಯ ಸಚಿವರೂ ಆದ ವಿ.ನಾರಾಯಣ ಸ್ವಾಮಿ ಅವರೂ ಈ ಪ್ರಕರಣ ಸಿಬಿಐ ತನಿಖೆಗೆ ಸೂಕ್ತವಾಗಿದೆ ಎಂದು ಭಾನುವಾರವಷ್ಟೇ ಹೇಳಿದ್ದರು. ಇದರಲ್ಲಿ ಪುದುಚೇರಿ ಮತ್ತು ತಮಿಳುನಾಡು ಎರಡೂ ರಾಜ್ಯಗಳು ಭಾಗಿಯಾಗಿವೆ ಎಂದು ಅವರು ಆರೋಪಿಸಿದ್ದರು. ಈಗಾಗಲೇ ತಮಿಳುನಾಡು ಸರ್ಕಾರ ಈ ಕುರಿತು ತನಿಖೆ ಆರಂಭಿಸಿದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.