ಮಂಗಳವಾರ, ಮೇ 17, 2022
25 °C

ಸಚಿವ ಆಚಾರ್ಯ ವಿರುದ್ಧ ಕಪ್ಪುಬಾವುಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡುಬಿದ್ರಿ: ಯುಪಿಸಿಎಲ್ ವಿರೋಧಿಗಳು ಸಮಾಜದ್ರೋಹಿಗಳು ಎಂಬ ಜಿಲ್ಲಾ ಉಸ್ತುವಾರಿ ಸಚಿವ ವಿ.ಎಸ್.ಆಚಾರ್ಯ ಹೇಳಿಕೆಗೆ ನಂದಿಕೂರು ಜನಜಾಗೃತಿ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಮಿತಿ, ಅವರೊಬ್ಬ ಗೋಮುಖ ವ್ಯಾಘ್ರ.ಸಚಿವರು ಹೇಳಿಕೆ ಹಿಂದೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸಚಿವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದೆ. ಪಡುಬಿದ್ರಿ, ನಂದಿಕೂರು ಪರಿಸರದಲ್ಲಿ ಕಲ್ಲಿದ್ದಲು ಆಧಾರಿತ ಕೊಜೆಂಟ್ರಿಕ್ಸ್ ಉಷ್ಣವಿದ್ಯುತ್ ಸ್ಥಾವರ ನಿರ್ಮಿಸಲು ಉದ್ದೇಶಿಸಿದಾಗ 1996ರ ಆ.18ರಂದು ನಂದಿಕೂರು ಜನಜಾಗೃತಿ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಂದಿನ ವಿಧಾನ ಪರಿಷತ್ ಸದಸ್ಯರಾಗಿದ್ದ ವಿ.ಎಸ್.ಆಚಾರ್ಯ ಯೋಜನೆಯ ವಿರುದ್ಧ ಮಾತನಾಡಿದ್ದರು.ಕೋಟ್ಯಂತರ ರೂಪಾಯಿಗಳ ಅವ್ಯವಹಾರ ಮತ್ತು ಸಂಶಯಾಸ್ಪದ ವಿಚಾರಗಳಿಂದ ಕೆಟ್ಟುಹೋಗಿರುವ ಕೊಜೆಂಟ್ರಿಕ್ಸ್ ಅನುಷ್ಠಾನವನ್ನು ಪಕ್ಷ ವಿರೋಧಿಸಲಿದೆ. ಜಿಲ್ಲೆಯ ಹಿತದೃಷ್ಟಿಯಿಂದ ಜನತೆಯೊಂದಿಗೆ ಹೋರಾಡುವೆ ಎಂದು ಸಭೆಯಲ್ಲಿ ಎಚ್ಚರಿಸಿದ್ದರು.ಆದರೆ ಇಂದು ಅಧಿಕಾರದಲ್ಲಿದ್ದಾಗ ತಮ್ಮ ಮಾತನ್ನೇ ಬದಲಿಸಿರುವ ಆಚಾರ್ಯರು, ಅವರು ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಸಮಿತಿ ಲೇವಡಿ ಮಾಡಿದೆ.ಯೋಜನೆ ಸುತ್ತಮುತ್ತಲೂ ಹಲವಾರು ಸಮಸ್ಯೆಗಳು ಉಂಟಾಗಿವೆ. ಜನರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಜಾನುವಾರುಗಳ ಸ್ಥಿತಿಯೂ ಚಿಂತಾಜನಕವಾಗಿದೆ. ಕೃಷಿ ಚಟುವಟಿಕೆಯಂತೂ ಕುಂಠಿತವಾಗಿದೆ.ಇಷ್ಟೆಲ್ಲಾ ಆಗಿದ್ದರೂ ಜನರ ಸಮಸ್ಯೆ ಆಲಿಸಲು ಬಾರದ ಆಚಾರ್ಯರು ಸಚಿವರಾಗಿರುವುದು ಜಿಲ್ಲೆಯ ದೌರ್ಭಾಗ್ಯ ಎಂದು ಜನಜಾಗೃತಿ ಸಮಿತಿ ಸದಸ್ಯ ಹಾಗೂ ಎಲ್ಲೂರು ಗ್ರಾಮ ಪಂಚಾಯಿತಿ  ಸದಸ್ಯ ಜಯಂತ್ ಕುಮಾರ್ ಹಾಗೂ ನಾಗೇಶ್ ರಾವ್ ಕಿಡಿಕಾರಿದ್ದಾರೆ.ಸಚಿವರು ತಮ್ಮ ಹೇಳಿಕೆ ಹಿಂದೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಯೋಜನಾ ಪ್ರದೇಶದ ಸುತ್ತಮುತ್ತಲಿನ ಜನರು ಸಚಿವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.