ಶುಕ್ರವಾರ, ಜೂನ್ 18, 2021
27 °C

ಸದನಗಳಲ್ಲಿ ಆಚಾರ್ಯರ ಗುಣಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬಿಜೆಪಿ ಮುಖಂಡ ಡಾ.ವಿ.ಎಸ್.ಆಚಾರ್ಯ ಅವರು `ಕರ್ನಾಟಕದ ಅಟಲ್ ಬಿಹಾರಿ ವಾಜಪೇಯಿ~. ನನಗೆ ರಾಜಕೀಯ ಗುರು, ಮಾರ್ಗದರ್ಶಕರಾಗಿದ್ದ ಅವರು ಸ್ಕೂಟರ್‌ನಲ್ಲಿ ತೆರಳಿ ಪಕ್ಷ ಸಂಘಟನೆ ಮಾಡುತ್ತಿದ್ದರು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಶ್ಲಾಘಿಸಿದರು.ವಿಧಾನ ಸಭೆಯಲ್ಲಿ ಮಂಗಳವಾರ ಸ್ಪೀಕರ್ ಕೆ.ಜಿ.ಬೋಪಯ್ಯ ಮಂಡಿಸಿದ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿದ ಅವರು, `ಆಚಾರ್ಯ ತುಂಬಿದ ಕೊಡದಂತಹ ರಾಜಕಾರಣಿ. ಯಾರ ಮೇಲೂ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ. ಅವರ ಹಾಗೆ ಎಲ್ಲ ರಾಜಕಾರಣಿಗಳು ಕೋಪ ಬಿಟ್ಟರೆ ದೇಶಕ್ಕೆ ಒಳ್ಳೆಯದಾಗುತ್ತದೆ~ ಎಂದು ಮಾರ್ಮಿಕವಾಗಿ ಹೇಳಿದರು.ಅದಕ್ಕೆ ಕುಳಿತಲ್ಲೇ ತಣ್ಣನೆಯ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷಗಳ ಸದಸ್ಯರು, `ಇದನ್ನು ಬಿ.ಎಸ್.ಯಡಿಯೂರಪ್ಪ ಅವರಿಗೆ ಹೇಳಿ~ ಎಂದು ಚುಚ್ಚಿದರು.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, `ಕೋಪ ಇರಬೇಕು. ಆದರೆ ಅಮಾನುಷ ವಾಗಬಾರದು. ಅದರಿಂದ ಇನ್ನೊಬ್ಬರಿಗೆ ಕೆಟ್ಟದ್ದಾಗಬಾರದು. ಅನ್ಯಾಯ, ಶೋಷಣೆಗೆ ಒಳಗಾದ  ಶೂದ್ರರಿಗೆ ಕೋಪ ಜಾಸ್ತಿ. ಅನ್ಯಾಯಕ್ಕೆ ಒಳಗಾಗದವರಿಗೆ ಕೋಪ ಬರುವುದಿಲ್ಲ. ಹೀಗಾಗಿ ಆಚಾರ್ಯ ಈ ಗುಂಪಿಗೆ ಸೇರಿರಲಿಲ್ಲ~ ಎಂದರು.`ಆಚಾರ್ಯ ಅವರದು ಕಪ್ಪುಚುಕ್ಕೆ ಇಲ್ಲದ ವ್ಯಕ್ತಿತ್ವ. ಕಾರ್ಯಕರ್ತರು ಪಕ್ಷದ ಕಾರ್ಯಕ್ರಮಗಳಿಗೆ ಅವರಿಂದ ಆರ್ಥಿಕ ನೆರವು ಕೋರಲು ಹಿಂಜರಿಯುತ್ತಿದ್ದರು. ಅಧಿಕಾರ ಇದ್ದಾಗ ಬಹಳಷ್ಟು ಜನರಿಗೆ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟರು. ಆದರೆ ಆರ್ಥಿಕವಾಗಿ ಅವರಿಂದ ಸಹಾಯ ಪಡೆಯಲು ಕಾರ್ಯಕರ್ತರೂ ಹೆದರುತ್ತಿದ್ದರು~ ಎಂದು ಬಿಜೆಪಿಯ ಕೆ.ಎಸ್.ಈಶ್ವರಪ್ಪ ಹೇಳಿದರು.ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಸೇರಿದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ಹಲವು ಸದಸ್ಯರು ಆಚಾರ್ಯ ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು. ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಸದನವನ್ನು ಬುಧವಾರಕ್ಕೆ ಮುಂದೂಡಲಾಯಿತು. ವಿಧಾನ ಪರಿಷತ್‌ನಲ್ಲೂ ಆಚಾರ್ಯ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.

ಬಿಎಸ್‌ವೈ ಗೈರು: ಆಕ್ಷೇಪ

ಬಿಜೆಪಿಯ ಹಿರಿಯ ನಾಯಕ ಡಾ.ವಿ.ಎಸ್.ಆಚಾರ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಲಾಪದಲ್ಲಿ ಭಾಗವಹಿಸದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಶಾಸಕ ಎಚ್.ಎಸ್.ಶಂಕರಲಿಂಗೇಗೌಡ, ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಅವರು ತರಾಟೆಗೆ ತೆಗೆದುಕೊಂಡರು.`ಇದು ಆಚಾರ್ಯ ಅವರಿಗೆ ಸೂಚಿಸಿದ ಅಗೌರವ. ರಾಜಕೀಯ ವೈಷಮ್ಯ ಬಿಟ್ಟು ಕಲಾಪಕ್ಕೆ ಹಾಜರಾಗಬೇಕಿತ್ತು~ ಎಂದು ಶಂಕರಲಿಂಗೇಗೌಡ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.