ಮಂಗಳವಾರ, ಮೇ 24, 2022
24 °C

ಸದೃಢ ಸಮೂಹ ಸಾರಿಗೆಗೆ ತಜ್ಞರ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಚಾರ ಸಮಸ್ಯೆ ನಿವಾರಣೆಗೆ ಸದೃಢವಾದ ಸಮೂಹ ಸಾರಿಗೆ ವ್ಯವಸ್ಥೆ ಅಗತ್ಯವಿದೆ ಎಂಬ ಅಭಿಪ್ರಾಯ `ಸಾರ್ವಜನಿಕ ಮತ್ತು ಸಮೂಹ ಸಾರಿಗೆ~ ಕುರಿತ ವಿಚಾರ ಸಂಕಿರಣದಲ್ಲಿ ವ್ಯಕ್ತವಾಯಿತು.  ಸ್ವೀಡನ್ ರಾಯಬಾರಿ ಕಚೇರಿ ಹಾಗೂ ವೋಲ್ವೊ ಕಂಪೆನಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ, `ಸಮೂಹ ಸಾರಿಗೆ ವಿಫಲವಾಗಿದ್ದರೆ ಅದಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ. ಈಗಿನ ವ್ಯವಸ್ಥೆಯನ್ನು ಬದಲಿಸಲು ಸರ್ಕಾರ ಮುಂದಾಗಬೇಕು. ಇಲ್ಲದೇ ಹೋದರೆ ಜನರು ಕಷ್ಟ ಅನುಭವಿಸಬೇಕಾಗುತ್ತದೆ~ ಎಂದು ಹೇಳಿದರು.`ಖಾಸಗಿ ವಾಹನಗಳ ಮೇಲೆ ನಿರ್ಬಂಧ ಹೇರಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಜನರು ಖಾಸಗಿ ವಾಹನಗಳನ್ನು ಉಪಯೋಗಿಸದಂತೆ ಪರ್ಯಾಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು~ ಎಂದು ಹೇಳಿದರು.ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ, `ಸಮೂಹ ಸಾರಿಗೆಯ ಯಶಸ್ಸು ವ್ಯಕ್ತಿಯ ಆಯ್ಕೆಯನ್ನು ಅವಲಂಬಿಸಿರುತ್ತದೆ. ಆರಾಮದಾಯಕ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದರೆ ಜನ ತಾನೇ ತಾನಾಗಿ ಸಮೂಹ ಸಾರಿಗೆಯನ್ನು ಆಯ್ದುಕೊಳ್ಳುತ್ತಾರೆ~ ಎಂದರು.`ಪಾರ್ಕಿಂಗ್ ಸೌಲಭ್ಯ ವಾಹನ ಖರೀದಿ ಮೇಲೆ ನಿಯಂತ್ರಣ ಹೇರಬಹುದಾದರೂ ಖಾಸಗಿ ವಾಹನಗಳ ಸಂಖ್ಯೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಬದಲಿಗೆ ಜನರಿಗೆ ವಿಶ್ವಾಸಾರ್ಹವಾದ ಹಾಗೂ ಜನರ ಕೈಗೆಟಕುವ ಸೌಕರ್ಯಗಳನ್ನು ಒದಗಿಸಬೇಕಿದೆ~ ಎಂದರು.ವೋಲ್ವೊ ಬಸ್ ನಿಗಮದ ಅಧ್ಯಕ್ಷ ಹಕನ್ ಕಾರ್ಲ್‌ಸನ್, `ಸ್ವೀಡನ್‌ನಲ್ಲಿ ಸರ್ಕಾರ ಸಾರಿಗೆ ವ್ಯವಸ್ಥೆಯನ್ನು ದ್ವಿಗುಣಗೊಳಿಸಿದೆ. ಇದರಿಂದ ಸಾರಿಗೆ ಕ್ಷೇತ್ರದ ಸಾಮರ್ಥ್ಯ ವೃದ್ಧಿಸಿದೆ. ಆಧುನಿಕ ಬಸ್‌ಗಳನ್ನು ಬಳಸುವ ಮೂಲಕ ಸಾರಿಗೆ ಸೇವೆಯಲ್ಲಿ ಸುಧಾರಣೆ ತರಬಹುದಾಗಿದೆ~ ಎಂದು ಅಭಿಪ್ರಾಯಪಟ್ಟರು.`ದಿನ ನಿತ್ಯದ ಕಾರ್ಯಗಳಿಗೆ ಖಾಸಗಿ ವಾಹನ ಬಳಸುವ ಬದಲು ವಾರಾಂತ್ಯದ ಸಂದರ್ಭ ಹಾಗೂ ದೂರದ ಪ್ರಯಾಣಕ್ಕೆ ಖಾಸಗಿ ವಾಹನಗಳನ್ನು ಆಯ್ದುಕೊಳ್ಳುವುದು ಸೂಕ್ತ. ಬೃಹತ್ ನಗರಗಳಲ್ಲಿ ಮೆಟ್ರೊ ಹಾಗೂ ಬಸ್ ಸೇವೆ ಉತ್ತಮ ರೀತಿಯಲ್ಲಿ ಸಂಯೋಜನೆಗೊಳ್ಳಬೇಕು. ಸಾರಿಗೆ ವ್ಯವಸ್ಥೆಯ ವೈಫಲ್ಯಗಳಿಂದಲೇ ಕಲಿಯಬೇಕಾದ ಪಾಠ ಬಹಳಷ್ಟಿದೆ. ಚಿಕ್ಕ ಸಮೂಹ ಸಾರಿಗೆ ವಾಹನಗಳಿಗಿಂತಲೂ ದೊಡ್ಡ ಸಾರಿಗೆ ವಾಹನಗಳು ಯಶಸ್ವಿಯಾಗಿವೆ~ ಎಂದು ಉದಾಹರಣೆಗಳ ಮೂಲಕ ವಿವರಿಸಿದರು.ಸಾರಿಗೆ ವ್ಯವಸ್ಥೆಯಲ್ಲಿ ಸರ್ಕಾರ ಹಾಗೂ ಸಾರ್ವಜನಿಕರ ನಡುವಿನ ಕಂದರದ  ಬಗ್ಗೆ ವಿವರಿಸಿದ ಭಾರತೀಯ ಕೈಗಾರಿಕಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಸ್.ಚಂದ್ರಶೇಖರ್, `ಸರ್ಕಾರ ಉತ್ತಮ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರಬಹುದು. ಆದರೆ ಅವುಗಳನ್ನು ಜನರು ನಿಜಕ್ಕೂ ಜನರು ಒಪ್ಪುತ್ತಿದ್ದಾರೆಯೇ ಎಂಬುದು ಗಮನಿಸಬೇಕಾದ ವಿಚಾರ. ಹೀಗಾಗಿ ಸರ್ಕಾರ ಹಾಗೂ ಜನ ಸಾಮಾನ್ಯರ ನಡುವೆ ಸಮಾಲೋಚನಾ ಅಂಗವೊಂದನ್ನು ಕಂಡುಕೊಳ್ಳಬೇಕಾದ ಅವಶ್ಯಕತೆ ಇದೆ~ ಎಂದು ಹೇಳಿದರು.ನಾಗರಿಕ ಪ್ರತಿನಿಧಿಯಾಗಿ ಭಾಗವಹಿಸಿದ್ದ ಯುವ ಉದ್ಯಮಿ ಸಮೀರ್ ಶಿಸೋದಿಯಾ ನಗರದ ಸಾರಿಗೆ ಸಮಸ್ಯೆಗಳನ್ನು ವಿವರಿಸಿದರು. `ನಿಯಮಿತವಾಗಿ ಬಸ್‌ಗಳು ಸಂಚಾರವಾಗುತ್ತಿದ್ದರೂ ಅವು ನಗರದ ಎಲ್ಲಾ ಸ್ಥಳಗಳನ್ನು ತಲುಪಲು ಸಾಧ್ಯವಿಲ್ಲ. ಇಡೀ ದಕ್ಷಿಣ ಭಾರತದಲ್ಲಿ ಪ್ರಯಾಣಿಕರಿಗೆ ಮಾಹಿತಿ ಕೊರತೆ ಇದೆ. ರಾತ್ರಿ ವೇಳೆ ಸಮೂಹ ಸಾರಿಗೆ ಇನ್ನೂ ಜನರಿಗೆ ಲಭಿಸುತ್ತಿಲ್ಲ. ಅತಾರ್ಕಿಕವಾದ ದರ, ದುಬಾರಿಯಾದ ಐಷಾರಾಮಿ ಬಸ್‌ಗಳು, ಸೈಕಲ್‌ನಂತಹ ಪರಿಸರ ಸ್ನೇಹಿ ವಾಹನವನ್ನು ಬಳಸಲು ಮೂಲ ಸೌಕರ್ಯ ಕೊರತೆ ಇದೆ~ ಎಂದು ಹೇಳಿದರು.ರಾಯಭಾರಿ ಕಚೇರಿಯ ಇಂಧನ ಮತ್ತು ಹವಾಮಾನ ಬದಲಾವಣೆ ಕೌನ್ಸೆಲರ್ ಮೈಕೆಲ್ ಕುಲ್‌ಮನ್, ಪತ್ರಕರ್ತ ಎಡಿಸನ್ ಥಾಮಸ್ ಮತ್ತಿತರರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.