ಗುರುವಾರ , ಜೂನ್ 17, 2021
29 °C

ಸದ್ದಿಲ್ಲದೆ ಅರಂಭವಾದ ನಯಾಕಮಾನ್ ಕಾಮಗಾರಿ

ಪ್ರಜಾವಾಣಿ ವಾರ್ತೆ/ದೇವು ಪತ್ತಾರ Updated:

ಅಕ್ಷರ ಗಾತ್ರ : | |

ಬೀದರ್: ಯಾವುದೇ ರೀತಿಯ ಮುನ್ಸೂಚನೆ, ಪತ್ರಿಕಾ ಪ್ರಕಟಣೆ ನೀಡದೇ `ನಯಾಕಮಾನ್~ ಪುನರ್ ನಿರ್ಮಾಣ ಕಾಮಗಾರಿ ಆರಂಭಿಸಿರುವುದರಿಂದ ನಗರದ ಜನ ಪರದಾಡುವ ಸ್ಥಿತಿ ಉಂಟಾಗಿದೆ.

`ನಯಾಕಮಾನ್~ ಮರು ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ `ಮಾರ್ಗ~ ಮುಚ್ಚುತ್ತಿರುವ ಬಗ್ಗೆ ನಗರಸಭೆಯಿಂದ ಯಾವುದೇ ಸೂಚನೆ ನೀಡಿಲ್ಲ~ ಎಂಬ ಅಸಮಾಧಾನ ಖದೀರ್ ಅವರದ್ದು. `ನಯಾಕಮಾನ್~ ಕಾಮಗಾರಿ ಆರಂಭವಾದ ಹೊತ್ತಿನಲ್ಲಿಯೇ ಜಬ್ಬಾರ್ ಪೆಟ್ರೋಲ್ ಬಂಕ್ ಸಮೀಪದಿಂದ ಶಹಾಗಂಜ್ ಕಮಾನ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿಸ್ತರಣೆ ಕಾರ್ಯ ಕೂಡ ಆರಂಭಿಸಲಾಗಿದೆ.

 

ಏಕಕಾಲಕ್ಕೆ ಎರಡೂ ಕಡೆಗಳಲ್ಲಿ ಕೆಲಸ ನಡೆಯುತ್ತಿರುವುದರಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. `ನಯಾಕಮಾನ್~ ಕೆಳಗಿನ ರಸ್ತೆ ಮುಚ್ಚುವ ಮುನ್ನ ಅದನ್ನು ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ನಗರಸಭೆ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ಹೊಳೆಯದೇ ಇರುವುದು ಅಚ್ಚರಿಯ ಸಂಗತಿ~ ಎಂಬುದು ಬಾಬುಮಿಯ್ಯಾ ಅಭಿಪ್ರಾಯ.`ಗುರುನಾನಕ್ ಗೇಟ್ ಇದ್ದ ಸ್ಥಳದಲ್ಲಿ ಕಮಾನು ನಿರ್ಮಿಸುವಾಗ ಕೂಡ ಮಾರ್ಗ ಮುಚ್ಚಲಾಗಿತ್ತು. ಮಾರ್ಗ ಮುಚ್ಚಿದ ಆರೆಂಟು ತಿಂಗಳುಗಳ ನಂತರ `ಮಾರ್ಗ ಮುಚ್ಚಲಾಗಿದೆ, ಸಾರ್ವಜನಿಕರು ಸಹಕರಿಸಬೇಕು~ ಎಂಬ ಪತ್ರಿಕಾ ಪ್ರಕಟಣೆ ಹೊರಡಿಸಿ ಆಶ್ಚರ್ಯಚಕಿತರಾಗುವಂತೆ ಆಡಳಿತ ಮಾಡಿತ್ತು. `ನಯಾಕಮಾನ್~ ನಿರ್ಮಾಣ ಆರಂಭಿಸುವ ಮುನ್ನವೂ ಸೂಚನೆ ನೀಡಿಲ್ಲ.

 

ನಗರದ ಯಾವುದೇ ಪ್ರಮುಖ ಮಾರ್ಗ ಮುಚ್ಚಿ ಕಾಮಗಾರಿ ನಡೆಸುವ ಮುನ್ನ ಜನರಿಗೆ ಅದರ ಬಗ್ಗೆ ಅರಿವು ಮೂಡಿಸಿಲ್ಲ. ಮುಂದೊಂದು ದಿನ ಅಂದರೆ ನಾಲ್ಕಾರು ತಿಂಗಳ ನಂತರ ನಿಯಮ ಪಾಲಿಸುವುದಕ್ಕಾಗಿ `ಪ್ರಕಟಣೆ~ಯ ಶಾಸ್ತ್ರ ಪೂರೈಸುತ್ತಾರೆ~ ಎಂದು ಜಗನ್ನಾಥ ಅವರು `ಪ್ರಜಾವಾಣಿ~ಗೆ ವಿವರಿಸಿದರು.ನಾಲ್ಕಾರು ವರ್ಷಗಳ ಹಿಂದೆ ಅಸ್ತಿತ್ವದಲ್ಲಿ ಇದ್ದ `ನಯಾಕಮಾನ್~ ಬಸವೇಶ್ವರ ವೃತ್ತದ ಕಡೆಯಿಂದ ಚೌಬಾರ ಕಡೆಗೆ ಹಳೆಯ ಬೀದರ್ ಪ್ರವೇಶಿಸುವುದಕ್ಕೆ ಪ್ರಮುಖ ದ್ವಾರ. 2006ರ ಮಳೆಗಾಲದಲ್ಲಿ ಕಮಾನು ಕುಸಿದಿದ್ದರಿಂದ `ನಯಾಕಮಾನ್~ ನಾಮಾವಶೇಷ ಆಗಿತ್ತು.

 

ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಂಡೆಪ್ಪಾ ಕಾಶೆಂಪೂರ್ ಅವರು ಪುನರ್‌ನಿರ್ಮಾಣದ ಭರವಸೆ ನೀಡಿದ್ದರು. ಅಷ್ಟು ಮಾತ್ರವಲ್ಲದೆ ಅದಕ್ಕೆ ಅಗತ್ಯವಿದ್ದ ಹಣಕಾಸಿನ ನೆರವು ಸರ್ಕಾರದಿಂದ ದೊರೆಯುವಂತೆ ವ್ಯವಸ್ಥೆ ಮಾಡಿದ್ದರು. ನಂತರದ ದಿನಗಳಲ್ಲಿ ನಯಾಕಮಾನ್ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು.ಕೊನೆಗೂ ಶುಕ್ರದೆಸೆ:

ಏನೇನೋ ಕಾರಣಗಳಿಂದ ಹಿಂದೆ ಬಿದ್ದಿದ್ದ ನಯಾಕಮಾನ್ ನಿರ್ಮಾಣ ಕಾಮಗಾರಿ ಕೊನೆಗೂ ಆರಂಭವಾಗಿದೆ. ಆದರೆ, ನಯಾಕಮಾನ್ ಕೆಳಗಿನ ರಸ್ತೆ ಬಂದ್ ಆಗಿದ್ದರಿಂದ ಹಳೆಯ ನಗರ ಪ್ರವೇಶಿಸುವುದು ಹಾಗೂ ಹೊಸ ನಗರದ ಕಡೆಗೆ ಬರುವುದು ಸಮಸ್ಯೆಯಾಗಿ ಪರಿಣಮಿಸಿದೆ.

 

ಅಂಬೇಡ್ಕರ್ ವೃತ್ತದಿಂದ ಶಹಾಗಂಜ್ ಕಮಾನ್ ಕಡೆಗೆ ಹೋಗುವ ರಸ್ತೆ, ಡಿಸಿಸಿ ಬ್ಯಾಂಕ್ ಮುಂಭಾಗದ ರಸ್ತೆ ಹಾಗೂ ಕರ್ನಾಟಕ ಕಾಲೇಜು ಬಳಿ ಇರುವ ರಸ್ತೆ ಮೂಲಕ ಹಳೆಯ ನಗರಕ್ಕೆ ತೆರಳಬೇಕಿದೆ. ಅಲ್ಲಿಂದ ಹೊಸ ನಗರಕ್ಕೆ ಬರಲು ಕೂಡ ಇವೇ ಮಾರ್ಗಗಳನ್ನು ಅನುಸರಿಸಬೇಕಾಗಿದೆ ಎಂದು ತಿಳಿಸುತ್ತಾರೆ.ಕಳೆದ ಕೆಲ ದಿನಗಳಿಂದ ನಯಾಕಮಾನ್ ಮಾರ್ಗ ಮುಚ್ಚಿದ್ದರಿಂದ ಈ ಮಾರ್ಗಗಳಲ್ಲಿ ರಸ್ತೆ ಸಂಚಾರ ದಟ್ಟಣೆ ಹೆಚ್ಚಾಗಿದೆ. ಅಂಬೇಡ್ಕರ್ ವೃತ್ತದ ಮೂಲಕ ಶಹಾಗಂಜ್ ಕಡೆಗೆ ಹೋಗುವ ರಸ್ತೆಯಲ್ಲಂತೂ ಟ್ರಾಫಿಕ್ `ಜಾಮ್~ ಆಗುತ್ತಿದೆ. ಸಂಜೆ ಮತ್ತು ಬೆಳಗಿನ ವೇಳೆ ಈ ಸಂಕಟ ಉಲ್ಬಣಿಸುತ್ತದೆ ಎಂಬ ಅಳಲು ಮನೋಜ್ ಅವರದ್ದು.`ನಯಾಕಮಾನ್ ಮಾರ್ಗ ಬಂದ್ ಮಾಡುವ ಬಗ್ಗೆ ನಗರಸಭೆಯ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿಲ್ಲ. ಇದೀಗ ಬಂದ್ ಮಾಡಲಾಗಿರುವ ಮಾರ್ಗದ ಬಳಿಯೂ ಯಾವುದೇ ಸೂಚನಾ ಫಲಕ ಅಳವಡಿಸಿಲ್ಲ.

 

ನಯಾಕಮಾನ್ ಹತ್ತಿರ ಹೋಗುವವರೆಗೂ ಮಾರ್ಗ ಮುಚ್ಚಿರುವ ಸಂಗತಿ ಗೊತ್ತೇ ಆಗುವುದಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸುವ ಗುರುನಾಥ್ ಅವರು `ಪೊಲೀಸ್ ಇಲಾಖೆ ಮಾತ್ರ ಮಾರ್ಗ ಬದಲಿಸಲಾಗಿದೆ ಎಂಬ ಸೂಚನಾ ಫಲಕ ಹಾಕಿರುವುದು ಸಮಾಧಾನದ ಸಂಗತಿ ಎನ್ನುತ್ತಾರೆ.ಯಾವುದೇ ಪ್ರಮುಖ ಮಾರ್ಗವನ್ನು ತಾತ್ಕಾಲಿಕವಾಗಿ ಸಂಚಾರ ಪೊಲೀಸರು ಒಂದೆರಡು ಗಂಟೆ ಬಂದ್ ಮಾಡಬಹುದು. ನಗರಸಭೆಯವರು ಒಂದೆರಡು ದಿನದ ಮಟ್ಟಿಗೆ ಆ ಮಾರ್ಗ ಮುಚ್ಚಬಹುದು. ಅದಕ್ಕಿಂತ ಹೆಚ್ಚಿನ ಅವಧಿಗೆ ಜಿಲ್ಲಾಧಿಕಾರಿಗಳು ಮಾರ್ಗ ಬಂದ್ ಮಾಡಬಹುದು. ಆದರೆ, ಇಲ್ಲಿ ಮಾತ್ರ ದಿಢೀರ್ ಮಾರ್ಗ ಮುಚ್ಚಲಾಗಿದೆ. ಇದಕ್ಕೆ ಯಾರು ಪರವಾನಗಿ ನೀಡಿದರೋ ಗೊತ್ತಿಲ್ಲ.ನಗರಸಭೆ ಆಯುಕ್ತರು, ಆಡಳಿತ ಮತ್ತು ಜಿಲ್ಲಾಡಳಿತ ಸಾರ್ವಜನಿಕರಿಗೆ ಹೆಚ್ಚು ತೊಂದರೆ ಆಗದಂತೆ ನಯಾಕಮಾನ್ ಕಾಮಗಾರಿ ನಡೆಸಿದ್ದರೆ ಚೆನ್ನಾಗಿತ್ತು ಎಂದು ರವಿ ಹೇಳುತ್ತಾರೆ. `ನಯಾಕಮಾನ್ ಮಾರ್ಗ ಮುಚ್ಚಿದ್ದರಿಂದ ಹಳೆಯ ಮತ್ತು ಹೊಸ ನಗರದ ಜನರಿಗೆ ಹೋಗಿ ಬರಲು ತೊಂದರೆ ಉಂಟಾಗುತ್ತಿದೆ. ಕೂಡಲೇ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು~ ಎಂಬ ಆಗ್ರಹ ಅವರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.