ಶುಕ್ರವಾರ, ಫೆಬ್ರವರಿ 26, 2021
18 °C

ಸನ್ಮಾನದ ಮೂಲಕ ಗೃಹ ಪ್ರವೇಶ

ಡಾ.ಮಲ್ಲಿಕಾರ್ಜುನ ಕುಂಬಾರ Updated:

ಅಕ್ಷರ ಗಾತ್ರ : | |

ಸನ್ಮಾನದ ಮೂಲಕ ಗೃಹ ಪ್ರವೇಶ

ಹಾರ ತುರಾಯಿಗಳಿಲ್ಲ, ಹೋಮ ಹವನಗಳಿಲ್ಲ, ಪೂಜೆ ಪುನಸ್ಕಾರಗಳಿಲ್ಲ, ಗಂಟೆ ಜಾಗಟೆಗಳಿಲ್ಲ, ಆಕಳನ್ನು ಒಳಗೆ ತಂದು ಗಂಜಳವನ್ನು ಮಾಡಿಸಲಿಲ್ಲ. ತಮ್ಮ ತಾಯಿಯಿಂದ ಬಸವಣ್ಣನ ಮೂರ್ತಿಗೆ ಪುಷ್ಪವನ್ನು ಅರ್ಪಿಸಿ, ದೀಪವನ್ನು ಹೊತ್ತಿಸುವ ಮೂಲಕ ಮನೆ ಪ್ರವೇಶವನ್ನು ವಿನೂತನ ರೀತಿ  ಆಚರಿಸುವ ಪರಂಪರೆಗೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಾಂದಿ ಹಾಡಲಾಯಿತು.ಪಟ್ಟಣದ ಪತ್ತಾರ ಗಲ್ಲಿಯ ರವಿ ಹೊನವಾಡರವರು ಮೊದಲಿನಿಂದಲೂ ಜನಪರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸದಾ ಕ್ರೀಯಾಶೀಲರಾಗಿರುವ ರವಿ ಬದ್ಧತೆಯಿಂದ ಬದುಕುತ್ತಿರುವವರು. ನಡೆ ನುಡಿ ಒಂದಾಗಿರುವ ಇವರು ಸಾರಿಗೆ ಸಂಸ್ಥೆಯಲ್ಲಿ ದುಡಿಯುವ ಕಾರ್ಮಿಕರು. ಮೂಢ ಪರಂಪರೆಯ ಕಟ್ಟಾ ವಿರೋಧಿ. ಪ್ರಚಾರ ಬಯಸದೇ ತೆರೆ ಮರೆಯಲ್ಲಿ ಬದುಕುವ ಕುಟುಂಬ ವತ್ಸಲರು. ತಮ್ಮ ಮದುವೆಯನ್ನೂ ಅತೀ ಸರಳವಾಗಿ ಮಾಡಿಕೊಂಡವರು. ಜೊತೆಗೆ ತಮ್ಮ ಗೆಳೆಯರನ್ನು ಕೂಡಾ ಅಂತೆಯೇ ಆಚರಿಸುವಂತೆ ಪ್ರೇರೇಪಿಸುತ್ತಾ, ಅಂತಹ ಮದುವೆಯನ್ನು ನೆರವೇರಿಸಿದ್ದಾರೆ. ಅಂತಹ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡವರು.ಇವರು ತಮ್ಮ ಪೂರ್ವಜರ ಮಣ್ಣಿನ ಮನೆಯನ್ನು ತೆಗೆಸಿ ನೂತನ ಮನೆಯನ್ನು ನಿರ್ಮಿಸಿದರು. ಆದರೆ ಇತರರಂತೆ ಮನೆ ಪ್ರವೇಶವನ್ನು ಮಾಡಲಿಲ್ಲ. ಜನವರಿ 27 ರಂದು ಈ ಮನೆಯನ್ನು ಸಿಂಗರಿಸುವುದನ್ನು ಬಿಟ್ಟರೇ, ಅಲ್ಲಿ ಪೂಜೆಯಾಗಲಿ, ಹೋಮ ಹವನಗಳಾಗಲೀ ನಡೆಯಲಿಲ್ಲ. ಪುರೋಹಿತರನ್ನು ಮನೆಯ ಆಸುಪಾಸಿನಲ್ಲಿ ಕರೆಸಲಿಲ್ಲ. ಬಾಗಿಲಿಗೆ ಕುಂಬಳ ಕಾಯಿ ಒಡೆದು ಅದರಲ್ಲಿ ಕುಂಕುಮ  ಎರಚಲಿಲ್ಲ, ಭಾಜಾ ಭಜಂತ್ರಿಗಳಿರಲಿಲ್ಲ.ಕರ್ಕಶ ಹಾಡಿನ ಧ್ವನಿವರ್ಧಕಗಳಿರಲಿಲ್ಲ. ಸನಿಹದ ಸಭಾಂಗಣದಲ್ಲಿ ಬಸವಣ್ಣನವರ ವಚನಗಳನ್ನು ಸುಶ್ರಾವ್ಯವಾಗಿ ಗಾಯಕರು ಹಾಡುತ್ತಿದ್ದರು. ಇತ್ತ ಮನೆಯಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಹೂಮಾಲೆ ಹಾಕಿ ತಮ್ಮ ತಾಯಿ 84ರ ವಯೋವೃದ್ಧೆ ಸಂಗಮ್ಮನಿಂದ ಬಸವಣ್ಣನವರ ಎದುರಿಗಿರುವ ದೀಪವನ್ನು ಹಚ್ಚಿದರು. ಮುಗಿಯಿತು ಮನೆ ಪ್ರವೇಶ!. ಇದಕ್ಕೆ ಸಾಕ್ಷೀಭೂತರಾದವರು ಮುಂಡರಗಿ ಮಠದ ಪೀಠಾಧಿಪತಿಗಳಾದ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು.ಇದು ಇಷ್ಟಕ್ಕೆ ಮುಗಿಯಲಿಲ್ಲ, ನೂತನ ಮನೆಯಲ್ಲಿ 6 ಜನ ಪೌರ ಕಾರ್ಮಿಕ ದಲಿತ ವಿಧವೆಯರನ್ನು ಸನ್ಮಾನಿಸಿ, ಅವರಿಗೆ ತಮ್ಮ ತಾವೇ ಉಣಬಡಿಸಿದರು. ಜೊತೆಗೆ ಸನಿಹದ ವಿರೂಪಾಕ್ಷ ಮಂದಿರದ ಮುಂಭಾಗದಲ್ಲಿ ಮನೆ ಪ್ರವೇಶದ ನಿಮಿತ್ತ ‘ಅನುಭಾವ ಗೋಷ್ಠಿ’ ನಡೆಸಿದರು. ಯಾರು ಗುಡಿ ಪ್ರವೇಶದಿಂದ ವಂಚಿತರಾಗಿದ್ದರೋ ಅಂಥ ದಲಿತ ವಿಧವೆಯರನ್ನು ಈ ಗುಡಿಯ ಸಾನಿಧ್ಯದಲ್ಲಿ ಸನ್ಮಾನಿಸಿದ್ದೊಂದು ಅವಿಸ್ಮರಣೀಯ ಇತಿಹಾಸ. ಇಂತಹ ಪ್ರಗತಿಪರ ಕಾರ್ಯಕ್ಕೆ ತನ್ನ ಸಹೋದರ ಸೋಮಶೇಖರನನ್ನು, ಮನೆಯ ಸಂಪ್ರದಾಯಶೀಲರಾದ ಮಹಿಳೆಯರನ್ನು ಇಂತಹ ವಿನೂತನ ಕಾರ್ಯಕ್ಕೆ ಒಪ್ಪಿಸಿದ್ದು  ನಿಜಕ್ಕೂ ಕ್ರಾಂತಿ. ಈ ವಿನೂತನ ಕಾರ್ಯಕ್ಕೆ ‘ಬಯಲ ಬಳಗ’ ಸಂಘಟನೆಯವರು ಸಾಥ್ ನೀಡಿದರು.ಮಕ್ಕಳು ದೊಡ್ಡವರಾದಂತೆ ತಂದೆ ತಾಯಿಗಳನ್ನು ಮರೆತು ಅವರನ್ನು ವೃದ್ಧಾಶ್ರಮಕ್ಕೆ ಅಟ್ಟುತ್ತಿರುವ ಪರಿಪಾಠವನ್ನು ಹೊಂದುತ್ತಿರುವ ಈ ಕಾಲದಲ್ಲಿ ರವಿ, ಸೋಮಶೇಖರ ಸಹೋದರರು ತಮ್ಮ ಮನೆಗಳಿಗೆ ‘ಅವ್ವ’ ಮತ್ತು ‘ಅಪ್ಪ’ ಎಂದು ಹೆಸರನ್ನಿಟ್ಟುಕೊಂಡಿದ್ದಾರೆ. ಹೆಸರನ್ನು ಮಾತ್ರ ಇಟ್ಟುಕೊಂಡಿಲ್ಲ, ಬದುಕಿರುವ ವೃದ್ಧ ತಾಯಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಸಲಹುತ್ತಿದ್ದಾರೆ. ಮನೆಯ ಸರಳ ಪ್ರವೇಶದ ನಂತರ ಭೂರಿ ಭೋಜನವೂ ಇತ್ತು. ಇಂತಹ ಹೊಸ ಪರಂಪರೆಗೆ ಈ ಭಾಗದಲ್ಲಿ ನಾಂದಿ ಹಾಡಿದ ಈ ಘಟನೆಯನ್ನು ನೋಡಲು ಅನೇಕರು ಬಂದಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.