ಶುಕ್ರವಾರ, ಮೇ 27, 2022
21 °C

ಸನ್ಮಾನಿತರಿಗೆ ಕೊಡಗು ಪೇಟ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಸಿದ್ದರಾಮಯ್ಯ ನೆನಪಿಸಿದ್ದು!

ಮೊದಲ ವಿಧಾನಸಭೆಯನ್ನು ಪ್ರತಿನಿಧಿಸಿದ್ದವರ ಪೈಕಿ ನಾಲ್ವರ ಹೆಸರಷ್ಟೇ ವಿಧಾನಸಭೆ ಸಚಿವಾಲಯಕ್ಕೆ ಗೊತ್ತಿತ್ತು. ರಾಯಬಾಗದ ವಸಂತರಾವ್ ಎಲ್.ಪಾಟೀಲ ಅವರ ಹೆಸರು ಮರೆತೇ ಹೋಗಿತ್ತು. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೆನಪಿಸಿದ್ದರಿಂದ ಅವರಿಗೂ ಸೋಮವಾರ ಸನ್ಮಾನದ ಭಾಗ್ಯ ದೊರೆಯಿತು. ವಿಧಾನಸಭೆಯ ವಜ್ರ ಮಹೋತ್ಸವ ಸಮಾರಂಭದಲ್ಲಿ ವಂದನಾರ್ಪಣೆ ಮಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್‌ಕುಮಾರ್ ಈ ಸಂಗತಿ ತಿಳಿಸಿದರು. `ಮೊದಲ ವಿಧಾನಸಭೆ ಪ್ರತಿನಿಧಿಸಿದ್ದವರಲ್ಲಿ ಮುಲ್ಕಾ ಗೋವಿಂದ ರೆಡ್ಡಿ, ಯು.ಎಂ.ಮಾದಪ್ಪ, ಡಿ.ಜಿ.ತಿಮ್ಮೇಗೌಡ ಮತ್ತು ಅಂಬಾದಾಸ್ ರಾವ್ ಇರುವುದು ಮಾತ್ರ ನಮಗೆ ತಿಳಿದಿತ್ತು. ಆದರೆ, ಸಮಾರಂಭದ ಸಿದ್ಧತೆ ಕುರಿತ ಸಭೆಯಲ್ಲಿ ಸಿದ್ದರಾಮಯ್ಯ ಅವರು ವಸಂತರಾವ್ ಪಾಟೀಲರ ಹೆಸರನ್ನು ತಿಳಿಸಿದರು. ಬಳಿಕ ಅವರನ್ನೂ ಸಂಪರ್ಕಿಸಿ ಸನ್ಮಾನಕ್ಕೆ ಆಹ್ವಾನಿಸಲಾಯಿತು~ ಎಂದರು.ಸನ್ಮಾನಕ್ಕೆ ಕೊಡಗು ಪೇಟ; ರಾಜ್ಯದಲ್ಲಿ `ಸನ್ಮಾನ~ ಎಂದಾಕ್ಷಣ ಮೈಸೂರು ಪೇಟ ನೆನಪಿಗೆ ಬರುತ್ತದೆ. ಬಹುತೇಕ ಸಮಾರಂಭಗಳಲ್ಲಿ ಮೈಸೂರು ಪೇಟ ತೊಡಿಸಿ ಸನ್ಮಾನಿತರನ್ನು ಗೌರವಿಸುವ ವಾಡಿಕೆ ಇರುವುದು ಇದಕ್ಕೆ ಕಾರಣ. ಆದರೆ, ವಿಧಾನಸಭೆಯ ವಜ್ರ ಮಹೋತ್ಸವದಲ್ಲಿ ಐವರು ಹಿರಿಯರ ಸನ್ಮಾನಕ್ಕೆ ಕೊಡಗು ಪೇಟ ತರಿಸಲಾಗಿತ್ತು.ಕೊಡಗು ಜಿಲ್ಲೆಯವರಾದ ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಖುದ್ದು ಆಸಕ್ತಿ ವಹಿಸಿ ಸನ್ಮಾನದಲ್ಲಿ ಕೊಂಚ ಬದಲಾವಣೆ ಮಾಡಿಸಿದ್ದರು. ಐವರು ಮಾಜಿ ಶಾಸಕರಿಗೂ ಕೊಡಗು ಪೇಟಗಳನ್ನು ತೊಡಿಸಿ ಗೌರವಿಸಲಾಯಿತು.ಐದನೇ ವಿಶೇಷ ಸಮಾರಂಭ: ಶಾಸನಸಭೆಯ ಕಲಾಪದ ಹೊರತಾದ ಐದನೇ ವಿಶೇಷ ಸಮಾರಂಭಕ್ಕೆ ವಿಧಾನಸಭೆ ಸೋಮವಾರ ವೇದಿಕೆಯಾಯಿತು.1952ರಲ್ಲಿ ಆಗಿನ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಅವರು ಮಹಾತ್ಮ ಗಾಂಧಿ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದ್ದರು.1986ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ನೇತೃತ್ವದಲ್ಲಿ `ಸಾರ್ಕ್~ ಶೃಂಗಸಭೆ ಬೆಂಗಳೂರಿನಲ್ಲಿ ನಡೆದಿತ್ತು. ಆಗ, `ಸಾರ್ಕ್~ ರಾಷ್ಟ್ರಗಳ ಪ್ರಧಾನಿಗಳ ಸಭೆಗೆ ವಿಧಾನಸಭೆ ವೇದಿಕೆಯಾಗಿತ್ತು.2002ರಲ್ಲಿ ದೇಶದ ಎಲ್ಲ ಸ್ಪೀಕರ್‌ಗಳ ಸಮ್ಮೇಳನ ವಿಧಾನಸಭೆಯಲ್ಲೇ ನಡೆದಿತ್ತು. 2005ರಲ್ಲಿ ಆಗಿನ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸುವರ್ಣ ಕರ್ನಾಟಕ ಆಚರಣೆ ಅಂಗವಾಗಿ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದರು. ಸೋಮವಾರ ನಡೆದ ವಿಧಾನಸಭೆಯ ವಜ್ರ ಮಹೋತ್ಸವ ಸಮಾರಂಭ ಇಂತಹ ವಿಶೇಷ ಸಭೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.