ಶನಿವಾರ, ಮೇ 28, 2022
31 °C

ಸಭಾತ್ಯಾಗ, ಅಧ್ಯಕ್ಷರ ವಿರುದ್ಧ ಆರೋಪ-ಪ್ರತ್ಯಾರೋಪ ನಗರಸಭೆಯಲ್ಲಿ ನಡಾವಳಿಗಾಗಿ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ:  ಅಧ್ಯಕ್ಷ-ಉಪಾಧ್ಯಕ್ಷರ ನಡುವೆ ಏರ್ಪಡದ ಸಮನ್ವಯ, ಜಗಳದ ವೇದಿಕೆಯಾಗಿ  ಮಾರ್ಪಟ್ಟ ಸಭಾಂಗಣ, ಪ್ರತಿಭಟನೆ, ಪರಸ್ಪರ ಕಿತ್ತಾಟ.. -ಇದು ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯ ಬೆಳವಣಿಗೆಗಳು.ಜ.11 ಹಾಗೂ 20ರಂದು ಅಪೂರ್ಣಗೊಂಡಿದ್ದ ಸಭೆ ಮಂಗಳವಾರ ಅಧ್ಯಕ್ಷೆ ರೇಷ್ಮಾಭಾನು ಅಧ್ಯಕ್ಷತೆಯಲ್ಲಿ ಆರಂಭವಾಯಿತು. ಸಭೆಯ ಆರಂಭದಿಂದಲೇ ಗದ್ದಲ ಆರಂಭವಾಯಿತು. ‘ಹಿಂದಿನ ಸಭೆಯ ನಡಾವಳಿಗೆ ತದ್ವಿರುದ್ದವಾಗಿ ನಿರ್ಣಯಗಳನ್ನು ಬರೆದಿದ್ದೀರಿ’ ಎಂದು ಸದಸ್ಯ ಎನ್.ವಿಷಕಂಠಮೂರ್ತಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸದಸ್ಯರಾದ ಕಿಟ್ಟಿ, ಬಸವರಾಜು, ಜಬಿವುಲ್ಲಾಖಾನ್ ಘೋರಿ ಧ್ವನಿಗೂಡಿಸಿದರು.ಬೆನ್ನ ಹಿಂದೆಯೇ ‘ಜೆ.ಸಿ. ರಸ್ತೆಯ ಅಂಗಡಿಮಳಿಗೆಯಲ್ಲಿ ಎರಡು ಅಂಗಡಿಯನ್ನು ಬಾಡಿಗೆ ತೆಗೆದುಕೊಂಡಿರುವವರು ಮಧ್ಯದ ಗೋಡೆ ತೆಗೆಸಿದ್ದಾರೆ. ಆ ಬಗ್ಗೆ ಹಿಂದಿನ ಸಭೆಯಲ್ಲಿ ಚರ್ಚೆಯಾಗಿದೆ. ಅದೇ ವಿಚಾರದಿಂದಾಗಿ ಸಭೆ ಮುಂದೂಡಿತ್ತು. ಆ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ’ ಎಂದು ಸದಸ್ಯ ಜಬಿವುಲ್ಲಾಖಾನ್ ಘೋರಿ ಪ್ರಶ್ನಿಸಿದರು.‘ವಾದ-ಪ್ರತಿವಾದ ನಡೆದು ಪೌರಾಯುಕ್ತರು ಬರೆದಿರುವ ಟಿಪ್ಪಣಿಯನ್ನೂ ಕಡೆಗಣಿಸಿ ಅಧ್ಯಕ್ಷರು ಈ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಹಣ ಪಡೆದು ಗೋಡೆ ನಿರ್ಮಾಣದ ನಿರ್ಣಯವನ್ನು ಕಡೆಗಣಿಸಲಾಗಿದೆ’ ಎಂದು ಜಬಿವುಲ್ಲಾಖಾನ್ ಘೋರಿ ಆರೋಪಿಸಿದಾಗ, ‘ನಾನು ಹಣ ಪಡೆದಿರುವುದನ್ನು ಸಾಬೀತು ಪಡಿಸಿ’ ಎಂದು ಅಧ್ಯಕ್ಷೆ ಪ್ರತಿಕ್ರಿಯಿಸಿದರು. ನಂತರ ಸಭೆಯಲ್ಲಿ ಗೊಂದಲ ಉಂಟಾಯಿತು.ನಿರ್ಣಯ ಹಾಗೂ ಸಭೆಯ ಬಗ್ಗೆ ಬದ್ಧತೆ ಇಲ್ಲದ ಮೇಲೆ ಸಭೆ ಏಕೆ ನಡೆಸುತ್ತೀರಿ? ಎಂದು ಸದಸ್ಯ ಬಸವರಾಜು ಆಕ್ಷೇಪಿಸಿದರು. ಜಬಿವುಲ್ಲಾಖಾನ್‌ಘೋರಿ ಅಧ್ಯಕ್ಷರ ಮೇಜಿನ ಮೇಲಿದ್ದ ಮೈಕ್ ಕಸಿಯಲು ಮುಂದಾದರು. ಒಮ್ಮೆ ನಿರ್ಣಯದ ಪುಸ್ತಕವನ್ನು ಹೊತ್ತು ತಂದು ಆಸೀನರಾದರು. ಈ ಆರೋಪ, ಪ್ರತ್ಯಾರೋಪ, ತರಾಟೆಯಲ್ಲೇ ಒಂದೂವರೆ ಗಂಟೆ ವ್ಯಯವಾಯಿತು. ಆನಂತರ ದಿ.ಪಂಡಿತ್ ಭೀಮಸೇನ ಜೋಷಿಯವರಿಗೆ ಸಂತಾಪ ಸೂಚಿಸುವ ಮೂಲಕ ಸಭೆ ಒಂದು ಹಂತಕ್ಕೆ ಬಂತು.ಅಧ್ಯಕ್ಷರ ಬದಲಿಗೆ ಉಪಾಧ್ಯಕ್ಷರು ಉತ್ತರಿಸಿದ್ದಕ್ಕೆ ಕೆಲವು ಸದಸ್ಯರು ಆಕ್ಷೇಪಿಸಿದರು. ’ಅಧ್ಯಕ್ಷರಿಗೆ ಕನ್ನಡ ಮಾತನಾಡುವುದರಲ್ಲಿ ಸಮಸ್ಯೆ ಇರುವುದರಿಂದ ನಾನು ಉತ್ತರಿಸುತ್ತಿದ್ದೇನೆಂದು’ ಉಪಾಧ್ಯಕ್ಷ ಕೆ.ಎಲ್. ಕುಮಾರ್ ಹೇಳಿದ್ದು ಸದಸ್ಯರನ್ನು ಕೆರಳಿಸಿತು.‘ಕನ್ನಡ ಗೊತ್ತಿಲ್ಲದೆ ಮೇಲೆ ಹುದ್ದೆಯಲ್ಲೇಕೆ  ಕುಳಿತಿದ್ದಾರೆ. ಮೊದಲು ರಾಜೀನಾಮೆ ನೀಡಿ. ಕನ್ನಡ ಕಲಿತು ಬಂದು ಅಧಿಕಾರ ನಡೆಸಿ’ ಎಂದು ಜಬೀವುಲ್ಲಾಖಾನ್ ಘೋರಿ ತರಾಟೆ ತೆಗೆದುಕೊಂಡರು. ‘ಇವರಿಗೆ ಕನ್ನಡ ಬರುವುದಿಲ್ಲ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ವಿಷಯ. ಇದಕ್ಕಾಗಿ ಸಭೆಯನ್ನು ಬಹಿಷ್ಕರಿಸುತ್ತೇನೆ ಎಂದು ಸದಸ್ಯ ವಾಸಿಲ್ ಆಲಿಖಾನ್ ಸಭಾ ತ್ಯಾಗ ಮಾಡಿದರು.‘ಜನ ಕುಡಿವ ನೀರಿಗೆ ಪರಿದಾಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನೀವು ಅಂಗಡಿ ವಿಚಾರವನ್ನೇ ದೊಡ್ಡದು ಮಾಡಿ ಕುಳಿತಿದ್ದೀರಿ. ನಗರದಲ್ಲಿ ಕಸದ ರಾಶಿ ಬಿದ್ದಿದ್ದರು ಕೇಳುವವರಿಲ್ಲ, ಮೊದಲು ಜನ ಹಿತದತ್ತ ಗಮನಹರಿಸಿ’ ಎಂದು ಸದಸ್ಯರಾದ ನೀತಾ ವಿಶ್ವನಾಥ್, ಸುಫಲಾ, ಲಕ್ಷ್ಮಿಕೆಂಪಣ್ಣ, ನಾಮಕರಣ ಸದಸ್ಯ ಶಿವು, ಆನಂದ ಅವರು, ಅಧ್ಯಕ್ಷರು ಹಾಗೂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.‘ಬೇಸಿಗೆ ಕಾಲ ಸಮೀಪಿಸುತ್ತಿದೆ. ಈ ಕೂಡಲೇ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಡೂಮ್‌ಲೈಟ್ ವೃತ್ತದಲ್ಲಿ ರೂ1ಕೋಟಿ ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಬೇಕು. ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ, ಅನುದಾನ ಮಂಜೂರು ಮಾಡಿಸಬೇಕು’ ಎಂದು ಸಭೆ ನಿರ್ಣಯಿಸಿತು.

ಪೌರಾಯುಕ್ತ ಜಿ.ಚಂದ್ರಪ್ಪ, ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

,

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.