ಸೋಮವಾರ, ಮೇ 23, 2022
24 °C
ಅಪಹರಣಕ್ಕೆ ಪ್ರಚಾರ ತಂಡ ಸಿದ್ಧತೆ: ಸಂಶಯ

ಸಮಗ್ರ ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಳಗಿ: ತಾಲ್ಲೂಕಿನ ರೊಳ್ಳಿ ಗ್ರಾಮದಲ್ಲಿ ಭಾನುವಾರ ಪ್ರಸಾಧನದ ಪರಿಕರಗಳ ಪ್ರಚಾರಕ್ಕಾಗಿ ಬಂದ ತಂಡ ಮಹಿಳೆಯರ ಅಪಹರಣಕಾರರ ತಂಡವಾಗಿರಬಹುದೆಂದು ಸಂಶಯ ವ್ಯಕ್ತಪಡಿಸಿರುವ ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಘಟಕಗಳು ಈ ತಂಡಗಳು ಅಪಹರಣದ ಸಿದ್ಧತೆಯಲ್ಲಿರಬಹುದು. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿವೆ.ದೇಶದಲ್ಲಿ 2012-13ನೇ ಸಾಲಿನ ಅವಧಿಯಲ್ಲಿ 1ಲಕ್ಷ 28ಸಾವಿರ ಮಹಿಳೆಯರ ಅಪಹರಣವಾಗಿದ್ದು ಭಾನುವಾರ ರೊಳ್ಳಿಯಲ್ಲಿ ನಡೆದ ಪ್ರಕರಣವು ಕೂಡಾ  ದೇಶದಲ್ಲಿ ನಡೆಯುತ್ತಿರುವ ಅಪಹರಣ ಪ್ರಕರಣಗಳಿಗೆ ಇಂಬು ಕೊಡುತ್ತದೆ ಎಂದು ಸಂಘಟನೆಗಳು ಹೇಳಿವೆ.ಮಾರುವೇಷದಲ್ಲಿ ಬಂದು ಮುಗ್ಧ ಮಹಿಳೆಯರನ್ನು ನಂಬಿಸಿ, ಆಸೆ ಆಮಿಷ ತೋರಿಸಿ ಅಪಹರಿಸುವ ತಂಡ ಇದಾಗಿರಬಹುದು. ಅವರ ಗುರುತಿನ ಚೀಟಿಗಳಿಗೂ, ಅವರು ಹೇಳುತ್ತಿರುವುದಕ್ಕೂ ಯಾವುದೇ ಸಾಮ್ಯತೆ ಕಂಡು ಬರುತ್ತಿಲ್ಲ. ವಾಹನಗಳ ಮೇಲೆ ಮೀಡಿಯಾ ಜೊತೆ ಸಂಪರ್ಕ ಹೊಂದಿರುವ ವಿವಿಧ ಚಾನೆಲ್‌ಗಳ ವಿಳಾಸದೊಂದಿಗೆ `ಪ್ರೆಸ್' ಎಂಬ ಸ್ಟಿಕರ್‌ಗಳನ್ನು ಅಂಟಿಸಲಾಗಿದೆ.

ಜೊತೆಗೆ ಅವರು ಹೇಳುವ ಕಂಪೆನಿಯ ಕಸ್ಟಮರ್ಸ್‌ ಕೇರ್ ಸೆಂಟರ್‌ಗೂ ದೂರವಾಣಿಯಲ್ಲಿ ಇವರ ಕುರಿತಾಗಿ ವಿಚಾರಿಸಿದಾಗ ಕರ್ನಾಟಕದಲ್ಲಿ ನಾವು ಯಾರನ್ನೂ ಪ್ರಚಾರ ಕಾರ್ಯಕ್ಕೆ ಕಳಿಸಿರುವುದಿಲ್ಲ ಹಾಗೂ ನಿಯಮಿಸಿಕೊಂಡಿಲ್ಲ ಎಂದು ಉತ್ತರ ಬರುತ್ತಿದೆ. ಇವೆಲ್ಲವೂ ಇವರು ಮೋಸಗಾರರೆಂಬುದನ್ನು ಸಾಬೀತುಪಡಿಸುತ್ತವೆ. ಈ ಮಾರು ವೇಷದ ಮೋಸಗಾರರನ್ನು ಸಮಗ್ರ ತನಿಖೆಗೊಳಪಡಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ವಿಎಚ್‌ಪಿ, ಭಜರಂಗ ದಳದ ಜಿಲ್ಲಾ ಸಂಚಾಲಕ ಪುಂಡಲೀಕ ದಳವಾಯಿ, ಮುಖಂಡರಾದ ಶಶಿಕುಮಾರ ಕೊಡತಗೇರಿ, ಸಿದ್ದು ಪೂಜಾರಿ, ಶ್ರೆಶೈಲ ಬಿದರಿ, ಸಿದ್ದಪ್ಪ ಸಿ. ಪೂಜಾರಿ ಒತ್ತಾಯಿಸಿದ್ದಾರೆ.ಇಂಥ ಸಂದರ್ಭದಲ್ಲಿ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಪೊಲೀಸ್ ಅಧಿಕಾರಿಗಳ ಮೇಲೆ ತಮ್ಮ ಅಧಿಕಾರದ ಒತ್ತಡ ಹೇರಿ ಅವರನ್ನು ಮುಗ್ಧರು, ಅಮಾಯಕರೆಂದು ಹೇಳತೊಡಗುತ್ತಾರೆ. ಪೊಲೀಸ್ ಅಧಿಕಾರಿಗಳು ಯಾವ ರಾಜಕಾರಣಿಯ ಅಥವಾ ಅಧಿಕಾರಸ್ಥರ ಒತ್ತಡಕ್ಕೂ ಮಣಿಯದೇ ತಮ್ಮ ಕರ್ತವ್ಯ ನಿರ್ವಹಿಸಿದಲ್ಲಿ ಇದರ ಹಿಂದಿರುವ ದೊಡ್ಡ ಜಾಲದ ಸುಳಿವು ಸಿಕ್ಕುತ್ತದೆ ಎಂದು ಈ ಮುಖಂಡರು ಒತ್ತಾಯಿಸಿದ್ದಾರೆ.ಪ್ರಚಾರಕ್ಕೆ ಸಾಮಗ್ರಿಗಳೊಡನೆ ಯಾರೇ ಅಪರಿಚಿತರು ತಮ್ಮ ಮನೆ ಬಳಿ ಬಂದಾಗ ಮಹಿಳೆಯರು ಅವರನ್ನು ತಮ್ಮ ಮನೆಯೊಳಕ್ಕೆ ಬಿಟ್ಟುಕೊಳ್ಳದಂತೆ, ಅವರೊಡ್ಡುವ ಯಾವುದೇ ಆಸೆ ಆಮಿಷಗಳಿಗೆ ಮಾರು ಹೋಗದಂತೆ, ಅವರು ಕೊಡುವ ಯಾವುದೇ ವಸ್ತುಗಳನ್ನು ತಿನ್ನುವುದಾಗಲೀ, ಕುಡಿಯುವುದಾಗಲೀ ಮಾಡಕೂಡದೆಂದು ಮಹಿಳೆಯರಿಗೂ, ತಮ್ಮೂರಿಗೆ ಬರುವ ಅಪರಿಚಿತರು ಹಾಗೂ ಅವರು ಮಾಡುತ್ತಿರುವ ಕೆಲಸದ ಮೇಲೆ ನಿಗಾ ಇಡುವಂತೆ ಗ್ರಾಮದ ಯುವಕರಿಗೂ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.