ಸಮಸ್ಯೆಯ ಬೇಗುದಿಯಲ್ಲಿ ಬೆಂಡರಹಳ್ಳಿ

ಕೊಳ್ಳೇಗಾಲ: ಮಣ್ಣಿನಿಂದ ಮುಚ್ಚಿಹೋದ ಚರಂಡಿ, ಹಳ್ಳಕೊಳ್ಳಗಳಿಂದ ಕೂಡಿದ ರಸ್ತೆ, ಹೂಳು ಮತ್ತು ತ್ಯಾಜ್ಯದಿಂದ ತುಂಬಿರುವ ಕೆರೆ...
ಇದು ಕೊಳ್ಳೇಗಾಲ ತಾಲ್ಲೂಕು ಬೆಂಡರಹಳ್ಳಿಯಲ್ಲಿ ಕಂಡು ಬರುವ ಸಮಸ್ಯೆಗಳು.
ಈ ಗ್ರಾಮ ನಗರಸಭೆ ವ್ಯಾಪ್ತಿಗೆ ಸೇರಿದ್ದರೂ, ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವಲ್ಲಿ ವಿಫಲವಾಗಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನ ದೊರೆತಿಲ್ಲ ಎಂಬುದು ಗ್ರಾಮದ ನಾಗರಾಜು ಅವರ ಆರೋಪ.
ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಗ್ರಾಮದ ಮುಖ್ಯರಸ್ತೆಯಲ್ಲಿ ಗುಂಡಿಬಿದ್ದಿವೆ. ಕೆಲವು ಚರಂಡಿಗಳು ತ್ಯಾಜ್ಯ ಮತ್ತು ಮಣ್ಣಿನಿಂದ ತುಂಬಿ ಹೋಗಿರುವುದರಿಂದ ಕೊಳಚೆ ನೀರು ರಸ್ತೆ ಮಧ್ಯಭಾಗದಲ್ಲೇ ಹರಿಯುತ್ತದೆ.
ಸೊಳ್ಳೆಗಳು ಹೆಚ್ಚಿರುವುದರಿಂದ ವಾತಾವರಣ ಅನೈರ್ಮಲ್ಯಗೊಂಡಿದೆ. ಗ್ರಾಮಸ್ಥರು ಕೆಲವೊಮ್ಮೆ ಅನಾರೋಗ್ಯಕ್ಕೆ ತುತ್ತಾಗಿರುವ ನಿದರ್ಶನಗಳು ಇವೆ.
ಅಂಗನವಾಡಿ ಕೇಂದ್ರ ಹಾಗೂ ಕುಡಿಯುವ ನೀರಿನ ಟ್ಯಾಂಕ್ ಸುತ್ತ ಗಿಡಗಂಟಿ ಬೆಳೆದು ವಿಷಜಂತುಗಳ ವಾಸಸ್ಥಾನವಾಗಿ ಪರಿಣಮಿಸಿವೆ. ಮಕ್ಕಳು ಆತಂಕದಲ್ಲೇ ಪಾಠ ಕೇಳುವ ದುಸ್ಥಿತಿ ಎದುರಾಗಿದೆ. ಗ್ರಾಮ ಪಂಚಾಯಿತಿಯವರು ಕೂಡಲೇ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಸಂಘಗಳ ಸದಸ್ಯರ ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.