ಗುರುವಾರ , ಜೂನ್ 24, 2021
23 °C

ಸಮಸ್ಯೆ ನಿಯಂತ್ರಣಕ್ಕೆ ತುರ್ತು ಕ್ರಮ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ಜಾಗತಿಕ ತಾಪಮಾನವು ಹಲವು ಸಮಸ್ಯೆಗಳನ್ನು ತಂದೊಡ್ಡಿದ್ದು ಅವುಗಳ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಎಎಂಆರ್‌ಸಿಯ ನಿರ್ದೇಶಕ ಡಾ. ಎ. ಬಾಲಸುಬ್ರಮಣ್ಯಂ ಹೇಳಿದರು.ಬುಧವಾರ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗ ಮತ್ತು ಮೈಸೂರು ವಿವಿಯ ಭೂಗೋಳ ವಿಭಾಗದ ಸಂಯುಕ್ತಾಶ್ರಯದಲ್ಲಿ `ಹವಾಮಾನ ವೈಪರಿತ್ಯ ಮತ್ತು ವಿಪತ್ತು ನಿರ್ವಹಣೆ~ ಕುರಿತು ಆಯೋಜಿಸಲಾಗಿದ್ದ ಯುಜಿಸಿ ಪ್ರಾಯೋಜಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.`ಹವಾಮಾನ ವೈಪರಿತ್ಯ, ಮಳೆ ಕಾಡುಗಳ ನಾಶ, ಪಕ್ಷಿ, ಪ್ರಾಣಿಗಳ ವಲಸೆ, ಭೂಬಳಕೆಯ ಹೆಚ್ಚಳ ಮತ್ತು ಜನರಿಂದಲೇ ಒದಗಿ ಬರುತ್ತಿರುವ ವಿಪತ್ತುಗಳನ್ನು ನಾವು ತುರ್ತಾಗಿ ಪರಿಗಣಿಸಿ, ಅವುಗಳ ನಿಯಂತ್ರಣದತ್ತ ಗಮನ ಹರಿಸುವ ಅಗತ್ಯವಿದೆ. ಜಾಗತಿಕ ತಾಪಮಾನ ಹೆಚ್ಚಳದಿಂದ ಹಲವು ರೋಗ ರುಜಿನಗಳು ಹರಡುತ್ತಿವೆ.ಇದರಿಂದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ದಶಕದ ಹಿಂದೆ ಮೈಸೂರಿನಲ್ಲಿ ಫೆಬ್ರುವರಿ ಕೊನೆಯ ವಾರ ಮತ್ತು ಮಾರ್ಚ್ ತಿಂಗಳ ಆರಂಭದಲ್ಲಿ ಮೊದಲು ಇಂತಹ ಬಿಸಿ ವಾತಾವರಣ ಇರುತ್ತಿರಲಿಲ್ಲ. ಏಪ್ರಿಲ್, ಮೇ ತಿಂಗಳಲ್ಲಿಯೂ ವಾತಾನುಕೂಲಿತ ಅಹ್ಲಾದಕರ ವಾತಾವರಣ ಇರುತ್ತಿತ್ತು. ಆದರೆ, ಈಗ ಎಲ್ಲವು ತಿರುವುಮುರುವಾಗಿದೆ. ಇದು ಆತಂಕದ ವಿಷಯ~ ಎಂದರು.`ಅರಣ್ಯ ನಾಶದಿಂದ ಕಾಡಿನ ಪ್ರಾಣಿಗಳು ಮನುಷ್ಯವಾಸದ ಸ್ಥಳಗಳಿಗೆ ನುಗ್ಗುತ್ತಿವೆ. ಆಹಾರ, ನೀರು ಹುಡುಕಿಕೊಂಡು ಬರುತ್ತಿರುವ ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷದಲ್ಲಿ ಜೀವ, ಆಸ್ತಿ-ಪಾಸ್ತಿ ಹಾನಿಯಾಗುತ್ತಿದೆ. ಇಡೀ ಜಗತ್ತಿನಲ್ಲಿಯೇ ಈ ಸಮಸ್ಯೆಯಿದೆ. ಭೂಮಿಯ ಧ್ರುವಗಳಲ್ಲಿ ಹಿಮ ಕರಗುತ್ತಿರುವುದರಿಂದ ಸಮುದ್ರ ಮಟ್ಟ ಹೆಚ್ಚುತ್ತಿದ್ದು, ಇದರಿಂದ ಭೂಮಿಯ ವಿಸ್ತೀರ್ಣ ಕಡಿಮೆಯಾಗುವ ಅಪಾಯ ತಲೆದೋರಿದೆ~ ಎಂದರು.ಅಧ್ಯಕ್ಷತೆ ವಹಿಸಿದ್ದ ಮಹಾಜನ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಪಿ.ಆರ್. ನಾಗಶ್ರೀನಿವಾಸ, `ಹವಾಮಾನ ವೈಪರಿತ್ಯದ ಸಮಸ್ಯೆಗಳನ್ನು ನಿಯಂತ್ರಿಸಲು ಯುವಪಡೆ ಸಜ್ಜಾಗಬೇಕಿದೆ. ಪರಿಸರಸ್ನೇಹಿ ತಂತ್ರಜ್ಞಾನದ ಬಳಕೆ ಹೆಚ್ಚಬೇಕು. ನೊಬೆಲ್ ಪ್ರಶಸ್ತಿ ಪುರಸ್ಕೃತ ಅಲ್‌ಗೋರ್ ಅವರ `ಇನ್‌ಕನ್ವಿನಿಯೆಂಟ್ ಟ್ರುಥ್~ ಪುಸ್ತಕವನ್ನು ಎಲ್ಲರೂ ಓದಬೇಕು. ಅದರಲ್ಲಿ ಜಾಗತಿಕ ತಾಪಮಾನದ ಎಲ್ಲ ಮುಖಗಳನ್ನೂ ಮನೋಜ್ಞವಾಗಿ ಬಿಂಬಿಸಲಾಗಿದೆ~ ಎಂದು ಸಲಹೆ ನೀಡಿದರು.ಪ್ರಾಚಾರ್ಯ ಪ್ರೊ. ಕೆ.ವಿ. ಪ್ರಭಾಕರ, ಡಾ. ಶಂಕರ್ ಪಿ. ಹೊಸಮನಿ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.