ಅವರು ಕಾಣಲು ಬೆಂಕಿ ಕೆಂಡದಂತೆ ಇದ್ದರು. ಅವರು ಮಾತಾಡಿದರೆ ಅದರೊಳಗಿನ ಕಾವು ತಟ್ಟುತ್ತಿತ್ತು. ಇವರು ಪ್ರೊ.ಎಂ.ಮರಿಸ್ವಾಮಿ ಅಂತ. ಹಿಂದೂ ಅಸ್ಪೃಶ್ಯರಾಗಿ ಹುಟ್ಟಿದ ಇವರು ಬೌದ್ಧರಾಗಿ ನಿಧನರಾದರು. ಇವರು ಬದುಕಿದ್ದಾಗ ಎಸ್. ತುಕಾರಾಂ ಮಾಡಿರುವ ಸಂದರ್ಶನ ದಲಿತನೊಬ್ಬನ ಅಂತರಂಗವನ್ನು ತೆರೆದಿಟ್ಟಂತಿದೆ.

ಆ ಸಂದರ್ಶನದಲ್ಲಿನ ಒಂದು ಘಟನೆ ನನ್ನನ್ನು ಸದಾಕಾಲ ಕೊರೆಯುತ್ತಿರುತ್ತದೆ. ಆಗ ಮರಿಸ್ವಾಮಿಯವರು ಮಾಧ್ಯಮಿಕ ಶಾಲಾ ಶಿಕ್ಷಕರು. ಅವರು ತಮ್ಮ ಪಕ್ಕದೂರಿನ ಬಸ್ಸು ನಿಲ್ಲುತ್ತಿದ್ದ ಲಿಂಗಾಯತ ಬೀದಿಯಲ್ಲಿ ಬಸ್ಸಿಗೆ ಕಾಯುತ್ತಾ ಕೂತಿರುವಾಗ ಕಳ್ಳಂಬಳ್ಳಿ ಮಾದಪ್ಪ ಎಂಬ ವಯಸ್ಸಾದ ಹಳೆಯ ಕಾಲದ ವ್ಯಕ್ತಿ ತನ್ನ ಮನೆಯಿಂದ ಹೊರಬಂದು ಮರಿಸ್ವಾಮಿಯವರತ್ತ ಕೈ ತೋರಿಸುತ್ತಾ `ಯಾರ್ಲಾ ಅವನು ಅಲ್ಲಿ ಕೂತಿರೋನು~ ಎಂದು ತನ್ನ ಮಕ್ಕಳನ್ನು ಕೇಳುತ್ತಾರೆ. ಅವರ ಮಕ್ಕಳಿದ್ದವರು `ಹೆಂಡದ ಮಾದಯ್ಯನ ಮಗ, ಮೇಷ್ಟ್ರು ಕೂತಿದ್ದಾರೆ~ ಎಂದಾಕ್ಷಣವೇ ಆ ಯಜಮಾನನ ಬಾಯಿಂದ ಹೊಲಸು ಮಾತು ಬರುತ್ತದೆ.

`ಎದ್ದೇಳೋ ಮೇಲಕ್ಕೆ’ ಎಂದು ಗದರಿಸುತ್ತಾರೆ. ಇದನ್ನು ನೆನಪಿಸಿಕೊಂಡು ಮರಿಸ್ವಾಮಿಯವರು `ಆಗ ನಾವು ಬದುಕೋ ರೀತೀನೇ ಇದು ಅಂದುಕೊಂಡಿದ್ದೆವು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರಹಗಳನ್ನು ಓದಿದ ಮೇಲೆ ಅದು `ಗಾಯ’ ಎಂದು ಗೊತ್ತಾಯಿತೇ ವಿನಾ ಅಲ್ಲೆತನಕ ಅದು ಗಾಯ ಅಂತಲೇ ಅನಿಸಿರಲಿಲ್ಲ’ ಎನ್ನುತ್ತಾರೆ.

ಭಾರತ ಗಾಯಗೊಂಡು ಬಿದ್ದಿದೆ. ಅದರ `ಗಾಯ’ ಅದಕ್ಕೆ ಗಾಯ ಅನಿಸುತ್ತಿಲ್ಲ. ಅಸ್ಪೃಶ್ಯತೆ ಜಾತಿ ಮತೀಯತೆಯ ಗಾಯ ನಂಜಾಗಿ ಮಿದುಳಿಗೇರಿ ಭಾರತ ಹುಚ್ಚಾಗಿದೆ. ಈ ಗಾಯವನ್ನೇ, ಈ ಹುಚ್ಚನ್ನೇ ಸಮಾಜದಲ್ಲಿ `ಸಂಸ್ಕೃತಿ ಅಂತ~, `ಪರಂಪರೆ ಅಂತ~ ಬಿಂಬಿಸಲಾಗಿದೆ. ಸಮಾಜವೂ ಹಾಗೇ ನಂಬಿಕೊಂಡಿದೆ.

ಇಲ್ಲಿ ಹುಟ್ಟಿದ ವ್ಯಕ್ತಿಯ ಶಕ್ತಿ ಸಾಮರ್ಥ್ಯದ ಅರ್ಧದಷ್ಟು ಭಾಗ ಈ ಹುಚ್ಚಿನೊಡನೇ ಹೆಣಗಿ ಸುಸ್ತಾಗುತ್ತಿದೆ. ಇದು ಗಾಯ, ಇದು ಹುಚ್ಚು ಎಂಬ ಅರಿವಿದ್ದಿದ್ದರೆ ಊರಾಚೆ ಎಸೆಯಲ್ಪಟ್ಟ ಅಸ್ಪೃಶ್ಯ ಸಮುದಾಯವು ಯಾರನ್ನೂ ಕೊಂದಿಲ್ಲ, ಯಾರನ್ನೂ ತುಳಿದಿಲ್ಲ, ಯಾರನ್ನೂ ಕೀಳಾಗಿ ನೋಡಿಲ್ಲ, ಹಾಗಾಗಿ ಈ ಸಮುದಾಯವೇ ಅವಮಾನಕ್ಕೆ ತುತ್ತಾಗುವ ಬದಲು ಗೌರವಕ್ಕೆ ಪಾತ್ರವಾಗಬೇಕಾಗಿತ್ತು ಎಂಬ ಭಾವನೆ ಸಮಾಜದಲ್ಲಿ ಉಂಟಾಗುತ್ತಿತ್ತು.

ಜತೆಗೆ, ಅಸ್ಪೃಶ್ಯರನ್ನಾಗಿಸಿ ಊರಾಚೆ ಎಸೆಯಲ್ಪಡಲು ಇರುವ ನೂರೆಂಟು ಕಾರಣಗಳಲ್ಲಿ ಚಾತುರ್ವರ್ಣದ ವಿಂಗಡನೆಯನ್ನು ಒಪ್ಪದವರು ಹಾಗೂ ಶೂದ್ರರಾಗಲು ಎಂದರೆ ಸೇವಕರಾಗಲು ಒಪ್ಪದ ಸ್ವಾಭಿಮಾನಿಗಳು ಅಸ್ಪೃಶ್ಯರಾಗಿ ಊರಾಚೆ ಎಸೆಯಲ್ಪಟ್ಟಿದ್ದೂ ಕಾಣಿಸುತ್ತಿತ್ತು.

ಆಗ ಎಸೆಯಲ್ಪಟ್ಟು ಈಗ ಬಡತನ, ಅವಮಾನಗಳಿಂದ ಜರ್ಝರಿತವಾಗಿರುವ ಸಮುದಾಯದ ಹಿಂದಿನ ಚರಿತ್ರೆಯ ಘನತೆ ಕಾಣಿಸುತ್ತಿತ್ತು. ಅಸ್ಪೃಶ್ಯತೆಯ ತಾರತಮ್ಯಕ್ಕೆ ಒಳಗಾದವರು ಆ ನೋವನ್ನು `ಬದುಕುವ ರೀತಿ~ ಎಂದುಕೊಂಡರೆ ಅದು ಸ್ಥೂಲವಾಗಿ ದೈಹಿಕವಾಗಿರುತ್ತದೆ. ಅದೇ ಆ ನೋವು ತಾರತಮ್ಯಗಳು `ಗಾಯ~ ಎಂದು ಅರಿವಿಗೆ ಬಂದರೆ ಅವು ಸೂಕ್ಷ್ಮವಾಗಿ ಮನೋಮಯವಾಗಿ ಕ್ಷಣಕ್ಷಣವೂ ಹಿಂಸಿಸುತ್ತವೆ.

ಆಗ ಬಿಡುಗಡೆಗೆ ಚಡಪಡಿಕೆ ಉಂಟಾಗುತ್ತದೆ.ಈ ಹಿನ್ನೆಲೆಯಲ್ಲೇ ಹಿಂದೊಂದು ಸಲ ನಾನು `ಚಿಕಿತ್ಸೆ ಯಾರಿಗೆ ಬೇಕಾಗಿದೆ? ಮೇಲು-ಕೀಳು ರೋಗವನ್ನೇ ಸಂಸ್ಕೃತಿಯೆಂದುಕೊಂಡಿರುವವರಿಗೆ ಸಾಂಸ್ಕೃತಿಕ ಚಿಕಿತ್ಸೆ, ತಾರತಮ್ಯದ ಕಟ್ಟುಪಾಡುಗಳನ್ನೇ ಸಂಪ್ರದಾಯ ಎಂದುಕೊಂಡಿರುವವವರಿಗೆ ಸಾಮಾಜಿಕ ಚಿಕಿತ್ಸೆ, ಬಡತನದಿಂದ ಎದ್ದು ನಿಲ್ಲಲು ತ್ರಾಣವಿಲ್ಲದ ತಳಸಮುದಾಯಕ್ಕೆ ಆರ್ಥಿಕ ಚಿಕಿತ್ಸೆ- ನೀಡಬೇಕಾಗಿದೆ~ ಎಂದು ಮಾತಾಡಿದ್ದೆ.

ಆ ಸಂದರ್ಭದಲ್ಲೇ `ದಲಿತರು ಸಂಘಟಿತರಾಗಬೇಕು, ತಮ್ಮ ಕೀಳರಿಮೆಯ ರೋಗದಿಂದ ಮೊದಲು ತಪ್ಪಿಸಿಕೊಂಡು, ಮೇಲರಿಮೆ ಹುಚ್ಚಿನ ಸಮುದಾಯದ ಏಟುಗಳಿಂದ ತಪ್ಪಿಸಿಕೊಳ್ಳುತ್ತಲೇ, ಆ ಮೇಲರಿಮೆಯ ಹುಚ್ಚಿಗೂ ಚಿಕಿತ್ಸೆ ಕೊಡಬೇಕು ಎಂದು ಹೇಳಿದ್ದೆ. ಅಂದರೆ ಒಂದು ಸಂಘಟನೆ ಹುಚ್ಚಾಸ್ಪತ್ರೆಯ ವೈದ್ಯರಂತೆ ಕಾರ್ಯನಿರ್ವಹಿಸಬೇಕು~ ಎಂಬುದು ನನ್ನ ಆಶಯವಾಗಿತ್ತು.

ಯಾವುದೇ ಜಾತಿ ಸಂಘಟಿತವಾಗುವುದು, ಜಾತಿ ಕಟ್ಟುಪಾಡು ತಾರತಮ್ಯಗಳನ್ನು ಬಿಗಿ ಮಾಡಿದರೆ, ಅದು ನಮ್ಮ ಸಂವಿಧಾನದ ಆಶಯಗಳಿಗೆ ಪೂರಕವಾಗಿರುವುದಿಲ್ಲ. ಆ ಜಾತಿಸಂಘಟನೆಯು ಜಾತಿಯ ಕಟ್ಟುಪಾಡು ತಾರತಮ್ಯಗಳನ್ನು ಸಡಿಲಗೊಳಿಸಿ ಮುಂದಕ್ಕೆಳೆಯುವುದಾದರೆ ಅದಕ್ಕೊಂದು ನೈತಿಕತೆ ಬಂದುಬಿಡುತ್ತದೆ.

ಈ `ಜಾತಿ~ಯಿಂದ ನಾವು ಕಳೆದುಕೊಂಡದ್ದು ಏನೇನು? ಆಸ್ತಿ, ಅಂತಸ್ತು, ಸ್ಥಾನಮಾನ, ಅನುಕೂಲ ಇತ್ಯಾದಿಗಳನ್ನು ಬಿಟ್ಟೇ ಬಿಡೋಣ. ಒಬ್ಬ ವ್ಯಕ್ತಿ ತಾನು ಒಂದು ಜಾತಿಯಲ್ಲಿ ಹುಟ್ಟಿದ ಕಾರಣಕ್ಕಾಗಿ ತನ್ನ ನ್ಯಾಯಪರತೆಯನ್ನೇ, ಸತ್ಯಸಂಧತೆಯನ್ನೇ ಕಳೆದುಕೊಂಡು ಬಿಟ್ಟಿರುತ್ತಾನೆ. ಈ ಸಾಮಾಜಿಕ ಕಟ್ಟುಪಾಡುಗಳ ದೆಸೆಯಿಂದಾಗಿ ಅನ್ಯಾಯವೂ ಕೂಡಾ ಅನ್ಯಾಯವಾಗಿ ಕಾಣಲಾರದು. ಆತ ತನ್ನ ಅಂತಃಸಾಕ್ಷಿಯನ್ನೇ ಕುರುಡಾಗಿಸಿಕೊಂಡಿರುತ್ತಾನೆ.

ತನ್ನದಲ್ಲದ ಜಾತಿ-ಮತಗಳ ಕಷ್ಟ ಸುಖ ಆತನಿಗೆ ಮುಟ್ಟುವುದೂ ಇಲ್ಲ. ಕೆಲವು ಸಲ ತನ್ನದಲ್ಲದ ಜಾತಿಯವನ ಸುಖ ಇವನಿಗೆ ಕಷ್ಟವಾಗಬಹುದು! ಅವನ ಕಷ್ಟ ಇವನಿಗೆ ಸುಖವಾಗಬಹುದು. ಒಟ್ಟಿನಲ್ಲಿ ಆತನ ಸಂವೇದನೆಗೆ ಕುಷ್ಠ ತಗುಲಿರುತ್ತದೆ, ಸ್ಪಂದನೆ ಇರುವುದಿಲ್ಲ. ಈ ಜಾತಿಯಿಂದ ನಾವು ಕಳೆದುಕೊಂಡದ್ದು ಏನೇನು? ಗಾಬರಿಯಾಗುತ್ತದೆ.

ನಾವು ಕುಬ್ಜರೂ ರೋಗಿಗಳೂ ಆಗಿದ್ದೇವೆ. ಎಲ್ಲಾ ನಷ್ಟಕ್ಕಿಂತಲೂ ಇದು ನನಗೆ ದೊಡ್ಡ ನಷ್ಟವಾಗಿ ಕಾಣುತ್ತದೆ. ಹಾಗಾಗಿ ಜಾತಿಯಿಂದ ಬಿಡುಗಡೆ ಪಡೆಯುವುದು ಎಂದರೆ ಅದು ನಮ್ಮಳಗಿನ ನ್ಯಾಯಪರತೆ ಸತ್ಯಸಂಧತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ, ನಮ್ಮ ಸಂವೇದನೆಯನ್ನು ಉಳಿಸಿಕೊಳ್ಳುವುದಕ್ಕಾಗಿ, ನಾವು ಮನುಷ್ಯರಾಗಿ ಸ್ಪಂದಿಸಲು, ಎಂದರೆ ನಮ್ಮ ವಿಮೋಚನೆಗಾಗಿಯೇ ನಾವು ಜಾತ್ಯತೀತರಾಗಬೇಕಾಗಿದೆ. ಈ ಭಾವನೆಯನ್ನು ನಮ್ಮ ಎಳೆಯ ಮಕ್ಕಳಲ್ಲಿ ಬಿತ್ತಬೇಕಾಗಿದೆ. ಇದು ಶಿಕ್ಷಣದ ಭಾಗವಾಗಲೂ ಬೇಕಾಗಿದೆ.

ಜಾತಿ ಪದ್ಧತಿಯಿಂದ ಗಾಸಿಗೊಂಡು `ಈ ಜಾತಿ ಅನ್ನೋದೇ ಇರಬಾರದು~ ಎಂಬ ಸಂಕಟದ ಬದುಕಿನ ದಲಿತರನ್ನು ಎಚ್ಚರಿಸಬೇಕಾದರೂ ಅವರ `ಜಾತಿ~ಯನ್ನೇ ಕೆರಳಿಸಿ ಅಷ್ಟೋ ಇಷ್ಟೋ ನಡೆಯುವಂತೆ ಮಾಡಬೇಕಾಗುತ್ತದೆ. ಇಲ್ಲಿ ತಳ ಸಮುದಾಯಗಳು ಎಚ್ಚರಗೊಂಡು ತಮಗೆ ಆದ ಅನ್ಯಾಯಕ್ಕೆ ಸೆಟೆದು ನಿಂತು ಕೂಗುವುದೂ ಕೂಡ ಬಿಗಿಯಾದ ಜಾತಿ ಕಟ್ಟುಪಾಡುಗಳನ್ನು ಅಳ್ಳಾಡಿಸಬಲ್ಲಷ್ಟು ಸಾಮರ್ಥ್ಯ ಪಡೆದಿರುತ್ತದೆ.

ಹೀಗೆ ಗುರುತಿಸಿ ಎಚ್ಚರಗೊಳಿಸುವ ಐಡೆಂಟಿಟಿ, ಅಸ್ಮಿತೆ ಎನಿಸಿಕೊಳ್ಳುವ ಈ ಕ್ರಿಯೆ ಇಂದು ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ. ಆದರೆ ನಾವು ಚರ್ಚಿಸಬೇಕಾಗಿರುವುದು ಯಾವುದೇ ಕ್ಷೇತ್ರದ ಈ ಗುರುತಿಸುವಿಕೆಯ ಐಡೆಂಟಿಟಿ ಎಷ್ಟಿರಬೇಕು ಮತ್ತು ಯಾಕಾಗಿ ಇರಬೇಕು ಎಂಬುದರ ಬಗ್ಗೆಯೂ ಇರಬೇಕಾಗುತ್ತದೆ. ಜಾತಿಯನ್ನು ಗುರುತಿಸಿ ಸಂಘಟಿತರಾಗಿ ಹೋರಾಡುತ್ತಲೇ ಅದರೊಳಗೇನೇ ಜಾತ್ಯತೀತತೆಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ವಿವೇಕ, ಎಚ್ಚರ ಇಲ್ಲಿ ಬೇಕಾಗಿದೆ.

ತಂತಿ ನಡಿಗೆಯಂತೆ ಇದು. ಯಾವುದೇ ಐಡೆಂಟಿಟಿ ಸಂಘಟನೆ ಯಾಕಾಗಿ? ಅದು ಸಮಾನತೆಗಾಗಿ, ವಿಕೇಂದ್ರೀಕರಣಕ್ಕಾಗಿ, ತಾರತಮ್ಯ ನಿವಾರಣೆಗಾಗಿ. ಈ ದಿಕ್ಕಲ್ಲಿ ಹೆಜ್ಜೆ ಇಡುವ ನಡಿಗೆಗಳಾಗಬೇಕು. ಯಾವುದೇ ಐಡೆಂಟಿಟಿ ನಡಿಗೆ, ತಾನೊಂದು ಅಸಮಾನತೆಗೆ ಒಳಗಾದ ಝರಿ, ತಾನು ಇರುವುದೇ ಸಮಾನತೆಯ ನದಿಗೆ ಕೂಡುವುದಕ್ಕಾಗಿ ಎಂಬಂತೆ...ತನ್ನ ಆಶಯಗಳ ಇತರ ಝರಿಗಳ ಜೊತೆ ಕೂಡಿಕೊಳ್ಳುತ್ತಾ ಸಮಾನತೆಯ ನದಿಯ ಕಡೆ ಚಲಿಸಬೇಕಾಗುತ್ತದೆ.

ಇಲ್ಲದಿದ್ದರೆ ಮತ್ತೆಲ್ಲಿಗೋ ತಲುಪಿಬಿಡಬಹುದು ಅಥವಾ ತಾನೇ ಸರ್ವಸ್ವ ಎಂದುಕೊಂಡು ಅತಿಗೆ ಹೋಗಿ ದಿಕ್ಕು ತಪ್ಪಲೂಬಹುದು. ಐಡೆಂಟಿಟಿಯ ಇಂಥ ಆಂದೋಲನಗಳಿಗೆ ಅಂದರೆ -ಆದಿವಾಸಿ, ಮಹಿಳೆ, ದಲಿತ ಒಳಪಂಗಡಗಳು, ಅಲ್ಪಸಂಖ್ಯಾತ, ತಳ ಸಮುದಾಯ, ರೈತಾಪಿ ಹೋರಾಟಕ್ಕೆ ಈ ಅರಿವಿಲ್ಲದಿದ್ದರೆ ಅದು ಏಕತೆಗೆ ಬದಲು ಛಿದ್ರತೆಗೆ ತಾನೂ ಕಾರಣವಾಗಬಹುದು. ಸಮಾನತೆಯ ಆಶಯದ ಸಂಘಟನೆಗಳು ಈ ಅರಿವಲ್ಲಿ ನಡೆಯಬೇಕಾಗಿರುವುದು ಇಂದಿನ ಅಗತ್ಯವಾಗಿದೆ.

ಇಂದಿನ ತುರ್ತು ಅಗತ್ಯವಾಗಿದೆ, ಯಾಕೆಂದರೆ ಭಾರತ ಧಾವಿಸುತ್ತಿರುವ ದಿಕ್ಕು, ವೇಗ ನೋಡಿದರೆ- ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರ ಕನಸು ಇಂದು ಅಪಹಾಸ್ಯಕ್ಕೆ ವಸ್ತುವಾಗಿದೆ. ಸಮಾನತೆ ಅಂದರೆ ಇಂದು ನಗುತ್ತಾರೆ. ಬಡವ ಬಲ್ಲಿದರ ನಡುವೆ ಅಂತರ ಕಮ್ಮಿ ಇರಬೇಕು ಅಂದರೆ ಇನ್ನೂ ನಗುತ್ತಾರೆ.

ಹಾಗಾದರೆ ನಮಗೆ ಯಾವ ಭಾರತ ಬೇಕು? ಮುಂಬೈನಲ್ಲಿ ಮುಖೇಶ್ ಅಂಬಾನಿಯವರ ಮನೆ 27 ಅಂತಸ್ತು, ಮೂರು ಹೆಲಿಪ್ಯಾಡ್, ಒಂಬತ್ತು ಲಿಫ್ಟ್, ತೂಗು ತೋಟಗಳು, ಬಾತ್ರೂಮುಗಳು, ಜಿಮ್ಗಳು, ಆರು ಅಂತಸ್ತಿನ ಪಾರ್ಕಿಂಗು, 600 ಸೇವಕರು ಇತ್ಯಾದಿ ಇರುವ ಈ ಮನೆಯ ಸುತ್ತ ಸಾವಿರಾರು ಸ್ಲಂ ಜೋಪಡಿಗಳು.

ಇದು ಭಾರತವಾಗಬೇಕೆ? ನಮ್ಮ ಬಳ್ಳಾರಿಗೆ ಬಂದರೆ ಸಾರ್ವಜನಿಕ ಆಸ್ತಿಯಾಗಬೇಕಾದ ಸಂಪತ್ತನ್ನು ಕೆಲವೇ ವ್ಯಕ್ತಿಗಳು ಡಕಾಯಿತಿಸಿ ಅದಿರು ತೋಡಿ ತೆಂಗಿನ ಮರದುದ್ದದ ಹಳ್ಳಗಳು, ಗಾಳಿ ನೀರೂ ಕೆಂಪು ಕೆಂಪು- ಇದು ಭಾರತವಾಗಬೇಕೆ? 120 ಕೋಟಿ ಜನಸಂಖ್ಯೆಯ ಭಾರತದಲ್ಲಿ ಕೇವಲ 100 ಜನ ಶ್ರಿಮಂತರು ಒಟ್ಟು ರಾಷ್ಟ್ರೀಯ ಉತ್ಪನ್ನದ ಕಾಲುಭಾಗದ ಒಡೆಯರಾಗಿದ್ದಾರೆ! ಇದು ಎಲ್ಲಿಗೆ ಕೊಂಡೊಯ್ಯುತ್ತದೆ? ಇದು ಶ್ರಿಮಂತಿಕೆ ಐಷಾರಾಮಿಗೆ ಮಾತ್ರ ನಿಲ್ಲುವುದಿಲ್ಲ.

ಮಿತಿಮೀರಿ ಕುಣಿದಾಡುವ ಆ ದುಡ್ಡು ಎಲ್ಲವನ್ನೂ ಕೊಂಡುಕೊಳ್ಳುತ್ತ ಎಲ್ಲವನ್ನು ಹರಾಜಿಗೆ ಹಾಕುತ್ತದೆ. ಯಾರನ್ನೂ ಬಿಡುವುದಿಲ್ಲ- ಜನಪ್ರತಿನಿಧಿಗಳನ್ನು, ಶಾಸಕರನ್ನು, ಸಂಸದರನ್ನು, ಸಚಿವರನ್ನು ಅಷ್ಟೇ ಸಾಲದು ಎಂಬಂತೆ ಜನತಂತ್ರ ವ್ಯವಸ್ಥೆಯನ್ನೂ ಬುಡಮೇಲು ಮಾಡಿ ನ್ಯಾಯಾಂಗ ಕಾರ್ಯಾಂಗ ಪತ್ರಿಕಾರಂಗಕ್ಕೂ ಕೈಚಾಚುತ್ತದೆ. ಭಾರತಕ್ಕೆ ಸ್ವಾತಂತ್ರ ಕೊಡುವ ಸಮಯದಲ್ಲಿ ಚರ್ಚಿಲ್ ಆಡಿದ ಮಾತು ಉತ್ಪ್ರೇಕ್ಷೆಯಲ್ಲವೇನೋ ಎಂದು ಭಯವಾಗುತ್ತದೆ.

ಖಾಸಗಿ, ಕಾರ್ಪೊರೇಟ್ ಒಡೆತನದ ಸಂಪತ್ತಿಗೆ ಒಂದು ಹಂತ ನಿಗದಿಪಡಿಸಿ ಅದಾದ ಮೇಲೆ ಮಿತಿಮೀರಿದ ಆ ಸಂಪತ್ತು ಸಾರ್ವಜನಿಕ ಆಸ್ತಿಯಾಗಬೇಕು, ಆ ಸಂಪತ್ತು ಉಂಟಾಗಲು ಅದು ಬಳಸಿಕೊಂಡ ಗಾಳಿ ನೀರು ಬೆಳಕಿಗೆ ಅಂದರೆ ನಾಡಿಗೆ ಸಲ್ಲುವಂತಹ ಏನೋ ಒಂದು ಉಳಿಗಾಲದ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಾಗಿದೆ.

ಇಂದು ನಗರಗಳು ಉಸಿರಾಡಲು ಕಷ್ಟಪಡುತ್ತಿವೆ, ಹಳ್ಳಿಗಳು ತ್ರಾಣವಿಲ್ಲದೆ ನಡೆಯಲು ಕಷ್ಟಪಡುತ್ತಿವೆ, ಅನ್ನ ಕೊಡುವವನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಈಗ ಉಳಿಯಲು ಎಲ್ಲರಿಗೂ ದಾರಿ ಒಂದೇ. ಇಲ್ಲಿ ಮತ್ತೆ ಸಮಾನತೆ ಕನಸನ್ನು ಬಿತ್ತಬೇಕಾಗಿದೆ. ಬಡವ ಬಲ್ಲಿದರ ನಡುವಿನ ಅಂತರ ಕಮ್ಮಿ ಇರಬೇಕು ಎಂಬ ಆಸೆಗೆ ಮತ್ತೆ ನೀರೆರೆಯಬೇಕಾಗಿದೆ. ವಿಕೇಂದ್ರೀಕರಣ, ಎಲ್ಲರಿಗೂ ಉದ್ಯೋಗ, ಸ್ವಾವಲಂಬನೆ ಎಂಬ ಹುದುಗಿಹೋಗಿರುವ ಈ ಹಳೆ ಮಾತುಗಳನ್ನು ಮತ್ತೆ ಮತ್ತೆ ಹೇಳಬೇಕಾಗಿದೆ.

ಈ ಹಳೇ ಮಾತುಗಳನ್ನು ಎಳೆ ಮಕ್ಕಳು ಹೇಳುವಂತಾದರೆ ಆ ಮಾತುಗಳಲ್ಲಿ ಜೀವಸಂಚಾರ ಉಂಟಾಗಬಹುದು. ಮೊದಲು, ಆ ಮಕ್ಕಳ ಶಿಕ್ಷಣದಲ್ಲಿ ಭಿನ್ನಭೇದ ತೊಡೆದು ಸಮಾನ ಶಿಕ್ಷಣ ಪದ್ಧತಿಯ ಮೂಲಕ ಸಂವಿಧಾನದ ಆಶಯಗಳಿಗೆ ತಕ್ಕಂತೆ ಪಠ್ಯ ರಚಿಸಿ ನಾಳಿನ ಭಾರತ ಕಟ್ಟಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.