ಗುರುವಾರ , ಜನವರಿ 30, 2020
19 °C

ಸಮಾನತೆಯ ಧರ್ಮ ಒಪ್ಪಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಮೌಢ್ಯತೆಯೇ ನಮ್ಮನ್ನು ಆರ್ಥಿಕ ಮುಗ್ಗಟ್ಟಿಗೆ ದೂಡಿರುವ ಕಾರಣ ಅದರಿಂದ ಹೊರಬಂದು ಬದಲಾವಣೆಯತ್ತ ಮುಖ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ಪ್ರೊ.ಕೆ.ಕೆ.ಕಮಾನಿ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟ ಜಿಲ್ಲಾ ಸಮಿತಿ ವತಿಯಿಂದ ಬಾಬಾಸಾಹೇಬ್ ಅಂಬೇಡ್ಕರ್ ಅವರ ೫೭ನೇ ಪರಿನಿಬ್ಬಾಣದ ಅಂಗವಾಗಿ ಹಮ್ಮಿಕೊಂಡಿದ್ದ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಹಿಂದುತ್ವ ನಿರೀಕ್ಷಿತ ಮಟ್ಟದಲ್ಲಿ ಇಂದಿಗೂ ಯಶಸ್ವಿಯಾಗಿಲ್ಲ. ಯಾವ ಧರ್ಮದಲ್ಲಿ ಸಮಾನತೆ ಕಾಣುತ್ತೇವೆಯೋ ಅಂಥ ಧರ್ಮ ಒಪ್ಪಿಕೊಳ್ಳೋಣ. ನಮ್ಮ ಸಂಸ್ಕೃತಿ, ಆಚಾರ–ವಿಚಾರ ಹಾಗೂ ನಮ್ಮ ವ್ಯಕ್ತಿತ್ವದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಧರ್ಮ ದೂರವಿಡೋಣ. ಸಾಮಾಜಿಕ ಸಮಾನತೆಗಾಗಿ ಹಿಂದೆ ಸಾಕಷ್ಟು ಹೋರಾಟಗಳು ನಡೆದಿವೆ. ಆದರೆ, ಹಿಂದಿಗಿಂತಲೂ ಪ್ರಸ್ತುತ ಈಗ ಸಮುದಾಯದ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದರು.ಪರಿಶಿಷ್ಟ ಜಾತಿ, ಪಂಗಡಗಳ ನೌಕರರ ಒಕ್ಕೂಟ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಬಿ.ಎಂ.ಗುರುನಾಥ್ ಮಾತನಾಡಿ, ನಮ್ಮಲ್ಲಿ ಜಾತೀಯತೆ ದೊಡ್ಡ ಶಾಪವಾಗಿದೆ. ಶೋಷಣೆಯಿಂದ ಬಿಡುಗಡೆ ಹೊಂದಿಲ್ಲದ ಕಾರಣ ಸಾಮಾಜಿಕ ಹೋರಾಟದಲ್ಲಿ ಸಮುದಾಯಕ್ಕೆ ಗೆಲುವು ಸಾಧಿಸಲು ಈವರೆಗೆ ಸಾಧ್ಯವಾಗಿಲ್ಲ ಎಂದರು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಲ್ಲಿಕಾರ್ಜುನ್‌ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಸಿ.ಕೆ. ಮಹೇಶ್, ಚಂದ್ರಶೇಖರ್, ವಸಂತಕುಮಾರ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)