ಸೋಮವಾರ, ಏಪ್ರಿಲ್ 19, 2021
32 °C

ಸಮಾವೇಶಕ್ಕೆ ಹೋದರೆ ಕ್ರಮ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬಿಜೆಪಿಯಲ್ಲಿ ಇದ್ದುಕೊಂಡೇ, ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸಮಾವೇಶದಲ್ಲಿ ಯಾರಾದರೂ ಭಾಗವಹಿಸಿದರೆ ಅಂಥವರು ಪಕ್ಷದೊಂದಿಗೆ ಸಂಬಂಧ ಕಳೆದುಕೊಳ್ಳುತ್ತಾರೆ. ಅವರ ವಿರುದ್ಧ ಶಿಸ್ತುಕ್ರಮ  ಅನಿವಾರ್ಯ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದರು.  ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸಮ್ಮುಖದಲ್ಲಿ ಶನಿವಾರ ಪಕ್ಷದ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳು, ಸಚಿವರು, ಸಂಸದರ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಾವೇರಿಯಲ್ಲಿ ಡಿ. 9ರಂದು ನಡೆಯು ಕೆಜೆಪಿ ಸಮಾವೇಶವನ್ನು ದೃಷ್ಟಿಯಲ್ಲಿಟ್ಟು ಈ ಸಂದೇಶ ರವಾನಿಸಿದರು.ಸರ್ಕಾರ ಉಳಿಯಬೇಕಾದರೆ ಈಶ್ವರಪ್ಪ ತೆಪ್ಪಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, `ಅವರ (ಬಿಎಸ್‌ವೈ) ಭಾಷೆಯಲ್ಲೇ ಮಾತನಾಡುವುದು ನನಗೂ ಬರುತ್ತದೆ. ಅವರು ಹಿರಿಯ ನಾಯಕರು. ಉಪಮುಖ್ಯಮಂತ್ರಿಯಾಗಿ ಆ ರೀತಿ ಮಾತನಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಸುಮ್ಮನಿದ್ದೇನೆ~ ಎಂದು ತಿರುಗೇಟು ನೀಡಿದರು.`ಹಾವೇರಿಯಲ್ಲಿ ಕೆಜೆಪಿ ಏರ್ಪಡಿಸಿರುವುದು ರಾಜಕೀಯ ಸಮಾವೇಶ. ಬಿಜೆಪಿ ಶಾಸಕರು, ಸಂಸದರು ಮತ್ತೊಂದು ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಅವಕಾಶ ನೀಡುವುದಿಲ್ಲ~ ಎಂದರು.ಸಚಿವರು, ಶಾಸಕರು ಕೆಜೆಪಿ ಸಮಾವೇಶಕ್ಕೆ ಹೋಗುವುದಿಲ್ಲ ಎಂಬ ವಿಶ್ವಾಸವಿದೆ. ಶಾಸಕರಾದ ಬಿ.ಪಿ.ಹರೀಶ್, ಎಚ್.ಹಾಲಪ್ಪ, ನೆಹರೂ ಓಲೇಕಾರ್ ಮಾತ್ರ ಹಾವೇರಿ ಸಮಾವೇಶಕ್ಕೆ ಹೋಗುವುದಾಗಿ ಹೇಳಿದ್ದಾರೆ. ಆದರೆ ಅಂತಿಮವಾಗಿ ಹೋಗುತ್ತಾರೊ, ಬಿಡುತ್ತಾರೊ ಗೊತ್ತಿಲ್ಲ. ಬೇರೆಯವರು ಕೆಜೆಪಿಗೆ ಹೋಗುವುದಾಗಿ ಹೇಳಿಲ್ಲ. ಪಕ್ಷದಲ್ಲಿನ ವಿದ್ಯಮಾನಗಳನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.`ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಇದು ಸಮ್ಮಿಶ್ರ ಸರ್ಕಾರ ಅಲ್ಲ. ಯಾವ ಶಾಸಕರೂ ಕೆಜೆಪಿ ಸೇರಿದ್ದೇವೆ ಎಂದು ಹೇಳಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಎಂದು ಹೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮುಂದಿನ ತಿಂಗಳ 5ರಿಂದ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಆಗುವುದಿಲ್ಲ ಎಂದರು.`ಪಕ್ಷಕ್ಕೆ ದ್ರೋಹ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ ಎಂದು ಯಡಿಯೂರಪ್ಪ ಪದೇ ಪದೇ ಹೇಳುತ್ತಿದ್ದರು. ಈಗ ನಡೆದುಕೊಳ್ಳುತ್ತಿರುವ ರೀತಿ ಸರಿಯೇ ಎಂಬುದನ್ನು ಅವರೇ ಹೇಳಬೇಕು ಎಂದರು.`ಒಬ್ಬರಿಗೆ ತಾಳಿ ಕಟ್ಟಿ, ಮತ್ತೊಬ್ಬರೊಂದಿಗೆ ಸಂಸಾರ ಮಾಡುವುದು ಸರಿಯಲ್ಲ. ಸಚಿವರಾಗಲಿ, ಶಾಸಕರಾಗಲಿ, ಮುಖಂಡರಾಗಲಿ ಕೆಜೆಪಿ ಸಮಾವೇಶಕ್ಕೆ ಹೋದರೆ,ಅವರಿಗೂ ಬಿಜೆಪಿಗೂ ಸಂಬಂಧ ಇರುವುದಿಲ್ಲ~.

ಕೆ.ಎಸ್. ಈಶ್ವರಪ್ಪ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.