ಭಾನುವಾರ, ಮೇ 16, 2021
26 °C

ಸಮುದಾಯ ಭವನಕ್ಕೆ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮುದಾಯ ಭವನಕ್ಕೆ ಅನುದಾನ

ಚಿಕ್ಕಮಗಳೂರು: ಕುರುಬ ಜನಾಂಗದ ಸಮುದಾಯ ಭವನ ಹಾಗೂ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 25 ಲಕ್ಷ ರೂಪಾಯಿ ನೀಡುವುದಾಗಿ ಶಾಸಕ ಸಿ.ಟಿ.ರವಿ ಭರವಸೆ ನೀಡಿದರು.



ನಗರದಲ್ಲಿ ಭಾನುವಾರ ಕನಕ ಸಮುದಾಯ ಭವನ ಹಾಗೂ ಕನಕ ಶಿಕ್ಷಣ ಸಂಸ್ಥೆಗಳ ಶಂಕು ಸ್ಥಾಪನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.



ಸಂಘ ಸಂಸ್ಥೆಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ದುಡಿದರೆ ಸಮುದಾಯವು ಪ್ರಬಲವಾಗಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಕುರುಬ ಸಮಾಜದವರು ಕಾರ್ಯೋನ್ಮುಖರಾಗಬೇಕು. ಬಡಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ಅತೀ ಅಗತ್ಯ. ಸಮಾಜದ ಉತ್ತಮ ಕೆಲಸಗಳಿಗೆ ಪ್ರತಿಯೊಬ್ಬರು ಸಹಕರಿಸಿ ಸಮಾಜಕ್ಕೆ ಮಾದರಿಯಾಗುವಂತೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.



ಕುರುಬ ಸಮುದಾಯದ ಜನರು ನಮ್ಮ ಕಷ್ಟ ಸುಖಗಳಿಗೆ ಸ್ಪಂದಿಸಿದ್ದಾರೆ. ಅವರಿಗೂ ಕೂಡ ರಾಜಕೀಯದಲ್ಲಿ ಉತ್ತಮ ಅವಕಾಶಗಳನ್ನು ನಮ್ಮ ಪಕ್ಷ ನೀಡಿದೆ ಎಂದು ಶಾಸಕರು ಹೇಳಿದರು.



ಕುರುಬ ಸಮಾಜದವರು ಒಗ್ಗಟ್ಟಾಗಿ ಸಮು ದಾಯದ ಭವನ ನಿರ್ಮಿಸುವುದರಿಂದ ಸಮಾಜ ಅತ್ಯಂತ ಪ್ರಬಲವಾಗುತ್ತದೆ. ಸಮುದಾಯ ಭವನದ ನಿರ್ಮಾಣಕ್ಕೆ ತಾನು ಸಹ ವೈಯಕ್ತಿಕವಾಗಿ ಐದು ಲಕ್ಷ ರೂಪಾಯಿ ನೀಡುವ ಜತೆಗೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿಂದಲೂ 10 ಲಕ್ಷ ರೂಪಾಯಿ ದೊರಕಿಸಿಕೊಡುವುದಾಗಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕಿ ಮೋಟಮ್ಮ ಭರವಸೆ ನೀಡಿದರು.



ಮಠ, ಮಂದಿರಗಳು ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಿದಾಗ ಅತ್ಯಂತ ಶೀಘ್ರ ಪ್ರಗತಿ ಕಾಣಬಹುದು. ಕುರುಬ ಸಮಾಜದವರು ರಾಜಕೀಯವಾಗಿಯೂ ಅತ್ಯಂತ ಪ್ರಬಲ ರಾಗಬೇಕಾದ ಅಗತ್ಯವಿದೆ ಎಂದರು.



ಜಾತಿಗೆ ಮೀರಿದ ಪ್ರೀತಿ ವಿಶ್ವಾಸವಿರಬೇಕು. ಜಾತ್ಯತೀತವಾಗಿ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಿರಬೇಕು. ಕುರುಬ ಸಮುದಾಯದ ಜನರು ಅತ್ಯಂತ ಪ್ರೀತಿ ವಿಶ್ವಾಸ ತೋರಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ಜಾತಿ ವ್ಯವಸ್ಥೆ ನುಸು ಳಿರುವುದು ಶಾಪ. ಇದನ್ನು ಅಳಿಸಿ ಸಮಾಜಮುಖಿ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ. ದತ್ತ ಸಲಹೆ ನೀಡಿದರು.



ಸಮುದಾಯದ ಭವನ ನಿರ್ಮಾಣಕ್ಕೆ ತಾವು ಸಹ 20 ಲಕ್ಷ ರೂಪಾಯಿ ಅನುದಾನ ಒದಗಿಸುವ ಭರವಸೆ ನೀಡಿದರು. ಸಂಘ ಸಂಸ್ಥೆಗಳು ರಾಜ್ಯದ ವಿವಿಧೆಡೆ ಅತ್ಯುತ್ತಮ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಿವೆ. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಲು ಅಗತ್ಯ ಸಹಕಾರ ನೀಡುವುದಾಗಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದರು.



ಕನಕಗುರು ಪೀಠದ ಕಾಗಿನೆಲೆ ಮಹಾ ಸಂಸ್ಥಾನದ ನಿರಂಜನಾನಂದ ಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿಯೊಬ್ಬರು ಇತಿಹಾಸ ತಿಳಿದುಕೊಂಡು ಸಮಾಜ ಮುಖಿ ಕೆಲಸ ಮಾಡ ಬೇಕು. ಕುರುಬರು ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಪ್ರತಿಯೊಬ್ಬರಿಗೂ ಕೆಲಸ ಮಾಡುವ ಪ್ರಯತ್ನವಿದ್ದರೂ ಅವರಿಗೆ ಎಲ್ಲರ ಸಹಕಾರವಿಲ್ಲದೇ ಹಿಂದು ಳಿಯುತ್ತಿದ್ದಾರೆ. ಸರ್ಕಾರದ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಬಳಸಿ ಕೊಂಡು ನೌಕರರು ಸಮಾಜದ ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.



ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮೀಜಿ, ಕೆ.ಆರ್.ನಗರ ಶಾಖಾ ಮಠದ ಶಿವಾನಂದ ಪುರಿ ಸ್ವಾಮೀಜಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಂಜುನಾಥ್, ತೆಂಗುನಾರು ಅಭಿ ವೃದ್ಧಿ ಮಂಡಳಿಯ ಅಧ್ಯಕ್ಷೆ ರೇಖಾ ಹುಲಿ ಯಪ್ಪಗೌಡ, ನಗರಸಭೆ ಅಧ್ಯಕ್ಷ ಡಿ.ಕೆ.ನಿಂಗೇಗೌಡ, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಶಾಂತೇಗೌಡ, ಅಖಿಲ ಕರ್ನಾಟಕ ಕುರುಬ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ರೇವಣ್ಣ, ತಾಲೂಕು ಕುರುಬ ಸಂಘದ ಅಧ್ಯಕ್ಷ ಚಂದ್ರೇಗೌಡ, ಹಾಸನ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಮಂಜುನಾಥ್, ಜಿ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷೆ ಪದ್ಮಾಚಂದ್ರಪ್ಪ, ಸದಸ್ಯೆ ಚಿಕ್ಕಮ್ಮ ಮಲ್ಲಪ್ಪ, ಎ.ಎನ್. ಮಹೇಶ್, ಡಾ.ಕುಮಾರಸ್ವಾಮಿ, ಪುಟ್ಟೆಗೌಡ, ದೇವೇಗೌಡ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.