ಬುಧವಾರ, ಜನವರಿ 22, 2020
18 °C

ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ: ಸಾಹಿತ್ಯ ವಲಯ ಸಂತಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸಾಹಿತಿ ನಾ.ಡಿಸೋಜ ಅವರು ಮಡಿಕೇರಿಯಲ್ಲಿ ನಡೆಯಲಿರುವ 80ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಆಯ್ಕೆ ಕುರಿತಂತೆ ಜಿಲ್ಲೆಯ ವಿವಿಧ ಕ್ಷೇತ್ರದ ಗಣ್ಯರು ವ್ಯಕ್ತಪಡಿಸಿದ ಅಭಿಪ್ರಾಯ ಇಲ್ಲಿದೆ.ಡಿಸೋಜ ಅರ್ಹ ವ್ಯಕ್ತಿ

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ನಾ.ಡಿಸೋಜ ಅವರು ಎಲ್ಲಾ ರೀತಿಯಿಂದಲೂ ಅರ್ಹತೆ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಸಾಹಿತ್ಯದ ಜೊತೆಗೆ ಸಾಹಿತ್ಯೇತರ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲೂ ಕೆಲಸ ಮಾಡಿರುವ ಹೆಗ್ಗಳಿಕೆ ಡಿಸೋಜ ಅವರದ್ದು. ಗ್ರಾಮೀಣ ಜನಾಂಗದ ಬದುಕನ್ನು, ಕಲೆಗಳನ್ನು ತಮ್ಮ ಕೃತಿಗಳಲ್ಲಿ ಅವರು ಹಿಡಿದಿಟ್ಟಿರುವ ರೀತಿ ವಿಶಿಷ್ಟವಾದದ್ದು.

–ಪ್ರಸನ್ನ, ಲೇಖಕರು, ಹೆಗ್ಗೋಡುಸಂತಸದ ವಿಷಯ

ಡಿಸೋಜ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಷಯ ಕೇಳಿ ಸಂತೋಷವಾಗಿದೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅವರು ಪ್ರತಿಸ್ಪಂದಿಸುತ್ತಿರುವ ರೀತಿ ಅನನ್ಯವಾದದ್ದು. ಈ ಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಡಿಸೋಜ ಅವರ ಉಪಸ್ಥಿತಿ ಇರಲೇಬೇಕು ಎನ್ನುವ ವಾತಾವರಣವಿದೆ. ಲೇಖಕನ ಜೊತೆಗೆ ಕ್ರಿಯಾಶೀಲ ವ್ಯಕ್ತಿಯೊಬ್ಬರಿಗೆ ಸಂದಿರುವ ಗೌರವ ಇದು.

–ಕೆ.ವಿ.ಅಕ್ಷರ, ರಂಗಕರ್ಮಿ, ಹೆಗ್ಗೋಡುಬರವಣಿಗೆಯಲ್ಲಿ ಜೀವಸತ್ವ


ಸಾಹಿತ್ಯದಲ್ಲಿ ಗುಣಮಟ್ಟ ಹಾಗೂ ಜನಪ್ರಿಯತೆಯನ್ನು ಒಟ್ಟಿಗೆ ಕಾಯ್ದುಕೊಂಡ ಅಪರೂಪದ ಲೇಖಕರಲ್ಲಿ ಡಿಸೋಜ ಒಬ್ಬರು. ಜಾತಿ ಜನಾಂಗವನ್ನು ಮೀರಿರುವ ಈ ಲೇಖಕ ಕನ್ನಡದ ಜೀವಸತ್ವವನ್ನು ತಮ್ಮ ಬರಹಗಳಲ್ಲಿ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದ್ದಾರೆ.

–ಡಾ.ಗುರುರಾವ್‌ ಬಾಪಟ್‌, ಲೇಖಕ‘ಮಲೆನಾಡಿಗೆ ಕೊಡುಗೆ’


ಡಿಸೋಜ ಅವರ ಕೃತಿಗಳನ್ನು ಓದಿಕೊಂಡೆ ಬೆಳೆದವನು ನಾನು. ಮಲೆನಾಡಿನ ಕಳೆದ ಅರ್ಧ ಶತಮಾನದ ಇತಿಹಾಸಕ್ಕೆ ಅವರ ಬರಹಗಳು ಸಾಕ್ಷಿಯಂತಿವೆ. ಈ ಭಾಗದ ಜನಜೀವನದ ವೈವಿದ್ಯತೆ, ಅಭಿವೃದ್ದಿ ಚಟುವಟಿಕೆ, ಬೇರೆ ಬೇರೆ ಭಾಷೆ, ವರ್ಗ, ಧರ್ಮಕ್ಕೆ ಸೇರಿದ ಅನುಭವ, ಪಲ್ಲಟಗಳನ್ನು ಹತ್ತಿರದಿಂದ ಗಮನಿಸಿ ದಾಖಲಿಸಿರುವುದು ಡಿಸೋಜ ಅವರ ವಿಶೇಷತೆಯಾಗಿದೆ.

–ಟಿ.ಪಿ.ಅಶೋಕ್‌, ಸಾಹಿತ್ಯ ವಿಮರ್ಶಕಸೃಜನಶೀಲ ಲೇಖಕ


ನಾ.ಡಿಸೋಜ ನಮ್ಮ ನಡುವಣ ಪ್ರಮುಖ ಸೃಜನಶೀಲ ಕನ್ನಡ ಲೇಖಕರಲ್ಲಿ ಒಬ್ಬರು. ಕಥೆ, ಕಾದಂಬರಿ ಸೇರಿದಂತೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಅವರು ಕ್ರಿಯಾಶೀಲರಾಗಿದ್ದಾರೆ. ಮಲೆನಾಡಿಗೆ ಕುವೆಂಪು ಮತ್ತೊಂದು ಹೆಸರು ಆದರೆ ಡಿಸೋಜ ಮಗದೊಂದು ಹೆಗ್ಗುರುತು ಎನ್ನಬಹುದು. ಅವರ ‘ದ್ವೀಪ’ ಕಾದಂಬರಿಯನ್ನು ಈಚೆಗೆ ಆಕ್ಸ್‌ಪರ್ಡ್‌ ಪ್ರಕಾಶನ ಪ್ರಕಟಿಸಿರುವುದು ಕನ್ನಡ ಸಾಹಿತ್ಯಕ್ಕೆ ದೊರಕಿರುವ ದೊಡ್ಡ ಗೌರವ.

–ವಿಲಿಯಂ, ಲೇಖಕ‘ಅಂತಃಕರಣವುಳ್ಳ ವ್ಯಕ್ತಿತ್ವ’


ಸಾಹಿತ್ಯ ಲೋಕದಲ್ಲಿ ಡಿಸೋಜ ಅವರು ಒಂದು ರೀತಿಯಲ್ಲಿ ಈವರೆಗೂ ಅವಜ್ಞೆಗೆ ಒಳಗಾಗಿದ್ದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ದೊರಕಿರುವುದು ಈ ಕೊರಗನ್ನು ನಿವಾರಿಸಿದಂತಾಗಿದೆ. ಮಾನವೀಯ ಅಂತ:ಕರಣವುಳ್ಳ ಡಿಸೋಜ ಅವರ ಒಟ್ಟು ಸಾಹಿತ್ಯ ಅವಕಾಶ ವಂಚಿತರ, ಶೋಷಿತರ ಪರವಾಗಿ ಇದೆ.

–ಎಸ್‌.ಮಾಲತಿ, ಲೇಖಕಿ–ರಂಗ ನಿರ್ದೇಶಕಿ‘ಬುಡಕಟ್ಟು ಜನರಿಗೂ ಸಾಹಿತ್ಯ ಸ್ಥಾನ’


ಮಲೆನಾಡಿನ ದುಡಿಯುವ ಜನರ ಕುರಿತು ಬೆಳಕು ಚೆಲ್ಲಿರುವ ಕೆಲವೆ ಲೇಖಕರ ಪೈಕಿ ಡಿಸೋಜ ಒಬ್ಬರು. ಬುಡಕಟ್ಟು ಜನಾಂಗದವರಿಗೂ ಸಾಹಿತ್ಯ ಕೃತಿಗಳಲ್ಲಿ ಅವರು ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಶ್ರಮಜೀವಿಗಳ ಬಗ್ಗೆ ಕಳಕಳಿ ಇರುವ ಈ ಲೇಖಕನಿಗೆ ತಡವಾಗಿಯಾದರೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ದೊರಕಿರುವುದು ಸಂತಸ ತಂದಿದೆ.

–ಎನ್‌.ಹುಚ್ಚಪ್ಪ ಮಾಸ್ತರ್‌, ಜಾನಪದ ವಿದ್ವಾಂಸಮಕ್ಕಳ ಸಾಹಿತ್ಯದ ಬಗ್ಗೆ ಆಸಕ್ತಿ


ಮಕ್ಕಳ ಸಾಹಿತ್ಯದ ಬಗ್ಗೆ ಅತ್ಯಂತ ಆಸಕ್ತಿಯಿಂದ ಬರೆಯುತ್ತಿರುವ ನಾ.ಡಿಸೋಜ ಕನ್ನಡದ ಬಗ್ಗೆ ಅಪಾರ ಗೌರವ, ಪ್ರೀತಿ, ಕಾಳಜಿ ಇರುವ ವ್ಯಕ್ತಿ. ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವುದರಿಂದ ಕನ್ನಡಕ್ಕೆ ಒಳ್ಳೆಯದಾಗುತ್ತದೆ.

–ಬಿ.ಆರ್‌.ವಿಜಯವಾಮನ್‌, ರಂಗಕರ್ಮಿರೈಲ್ವೆ ಹೋರಾಟದಲ್ಲೂ ಭಾಗಿ


ಶಿವಮೊಗ್ಗ–ತಾಳಗುಪ್ಪ ರೈಲ್ವೆ ಬ್ರಾಡ್‌ಗೇಜ್‌ ಹೋರಾಟ ಸಮಿತಿಯ ಚಳವಳಿ ಯಶಸ್ವಿಯಾಗುವಲ್ಲಿ ಸಮಿತಿಯ ಗೌರವಾಧ್ಯಕ್ಷರಾಗಿ ನಾ.ಡಿಸೋಜ ಪ್ರಮುಖ ಪಾತ್ರ ವಹಿಸಿದ್ದಾರೆ. ಹೋರಾಟದ ಅನೇಕ ಸಂದರ್ಭಗಳಲ್ಲಿ ತಮ್ಮ ವಯಸ್ಸು, ಸ್ಥಾನ ಮಾನಗಳನ್ನು ಲೆಕ್ಕಿಸದೆ ಜನ ಸಾಮಾನ್ಯರಂತೆ ಸಮಿತಿಯ ಜೊತೆ ಸಕ್ರಿಯವಾಗಿ ಪಾಲ್ಗೊಂಡಿದ್ದನ್ನು ಮರೆಯುವಂತಿಲ್ಲ.

–ಯು.ಜೆ.ಮಲ್ಲಿಕಾರ್ಜುನ, ಅಧ್ಯಕ್ಷ, ಶಿವಮೊಗ್ಗ–ತಾಳಗುಪ್ಪ ರೈಲ್ವೆ ಬ್ರಾಡ್‌ಗೇಜ್‌ ಹೋರಾಟ ಸಮಿತಿನಿಜವಾದ ಬೆಲೆ ಸಿಕ್ಕಿದೆ


ಡಿಸೋಜ ಅವರನ್ನು ಆಯ್ಕೆ ಮಾಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ತನ್ನ ಜವಾಬ್ದಾರಿ ಮತ್ತು ಕರ್ತವ್ಯವನ್ನು ವ್ಯವಸ್ಥಿತವಾಗಿ ನಿಭಾಯಿಸಿದೆ. ವಿಶ್ವವಿದ್ಯಾಲಯದ ಆಚೆ ಕನ್ನಡವನ್ನು ಕಟ್ಟಿ ಬೆಳೆಸಿದ ಅವರಿಗೆ ನಿಜವಾದ ಬೆಲೆ ಸಿಕ್ಕಿದೆ.

– ಡಿ.ಮಂಜುನಾಥ, ಅಧ್ಯಕ್ಷರು,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

ಪ್ರತಿಕ್ರಿಯಿಸಿ (+)