ಭಾನುವಾರ, ಮಾರ್ಚ್ 7, 2021
22 °C

ಸರಣಿ ಗೆಲುವಿನ ವಿಶ್ವಾಸದಲ್ಲಿ ರೈನಾ ಬಳಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರಣಿ ಗೆಲುವಿನ ವಿಶ್ವಾಸದಲ್ಲಿ ರೈನಾ ಬಳಗ

ಆ್ಯಂಟಿಗುವಾ: ಭಾರತ ತಂಡಕ್ಕೆ ಅನುಭವಿಗಳ ಬಲವಿಲ್ಲ. ವಿಂಡೀಸ್ ಪಡೆಗೆ ಪಂದ್ಯ ಗೆಲ್ಲಿಸಿಕೊಡಬಲ್ಲ ಕ್ರಿಸ್ ಗೇಲ್ ಆಸರೆಯಿಲ್ಲ. ಇದು ಉಭಯ ತಂಡಗಳ ನಡುವಣ ಸಾಮ್ಯತೆ. ಆದರೆ ಕೆರಿಬಿಯನ್ನರಿಗೆ ಹಿರಿಯ ಆಟಗಾರರ ಅನುಪಸ್ಥಿತಿ ಸಮಸ್ಯೆಯಾಗಿದೆ. ಸುರೇಶ್ ರೈನಾ ಬಳಗವು ಮಾತ್ರ ನಿಶ್ಚಿಂತೆಯಿಂದಿದೆ. ಸರಣಿ ಗೆಲುವಿನ ವಿಶ್ವಾಸದಿಂದ ಬೀಗುತ್ತಿದೆ.ಚುಟುಕು ಕ್ರಿಕೆಟ್ ಪಂದ್ಯದೊಂದಿಗೆ ಯಶಸ್ಸಿನ ಓಟವನ್ನು ಆರಂಭಿಸಿದ ರೈನಾ ನೇತೃತ್ವದ ತಂಡವು ಐದು ಏಕದಿನ ಪಂದ್ಯಗಳ ಸರಣಿಯ ಮೊದಲ ಎರಡು ಹಣಾಹಣಿಯಲ್ಲಿಯೂ ಯಶಸ್ಸು ಸಾಧಿಸಿದೆ. ಪೋರ್ಟ್ ಆಫ್ ಸ್ಪೇನ್‌ನಲ್ಲಿ ಕ್ರಮವಾಗಿ ನಾಲ್ಕು ಹಾಗೂ ಏಳು ವಿಕೆಟ್‌ಗಳ ಅಂತರದಿಂದ ಸುಲಭ ಜಯ ಪಡೆದು ಈಗ ಸರಣಿಯನ್ನು ಕೂಡ ತನ್ನದಾಗಿಸಿಕೊಳ್ಳುವಂಥ ಉತ್ತಮ ಸ್ಥಿತಿಯಲ್ಲಿದೆ.ನಾರ್ಥ್ ಸೌಂಡ್‌ನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ಗೆದ್ದಲ್ಲಿ ಭಾರತಕ್ಕೆ 3-0ಯಲ್ಲಿ ಸರಣಿ ತನ್ನದಾಗಿಸಿಕೊಂಡ ವಿಜಯೋತ್ಸವ. ಅದಕ್ಕೆ ಅವಕಾಶ ನೀಡದಿರಲು ವಿಂಡೀಸ್ ತಿರುಗೇಟು ನೀಡುವಂಥ ಆಟವನ್ನು ಆಡಬೇಕು.

 

ಆದರೆ ಕಳೆದು ಎರಡು ಪಂದ್ಯಗಳಲ್ಲಿ ಡೆರನ್ ಸಮಿ ನಾಯಕತ್ವದ ತಂಡದ ಆಟವು ಅಷ್ಟೇನು ಉತ್ಸಾಹದಾಯಕ ಆಗಿರಲಿಲ್ಲ. ಆದ್ದರಿಂದ ತಕ್ಷಣವೇ ಅದು ಭಾರತಕ್ಕೆ ಆಘಾತ ನೀಡುವಂಥ ಪ್ರದರ್ಶನ ನೀಡುತ್ತದೆಂದು ಹೇಳುವುದು ಕಷ್ಟ.ಮೂರನೇ ಪಂದ್ಯಕ್ಕಾದರೂ ಗೇಲ್ ನೆರವು ಸಿಗುತ್ತದೆ ಎನ್ನುವ ಆಸೆಯೂ ಕರಗಿದೆ. ವಿಂಡೀಸ್ ಕ್ರಿಕೆಟ್ ಮಂಡಳಿ ಜೊತೆಗಿನ ಸಂಘರ್ಷವು ಸುಖಾಂತ್ಯ ಕಾಣಿಸುತ್ತದೆ ಎನ್ನುವ ನಿರೀಕ್ಷೆಯೂ ಹುಸಿ ಆಯಿತು. ಆದ್ದರಿಂದ ಅಬ್ಬರದ ಬ್ಯಾಟಿಂಗ್‌ನಿಂದ ಐಪಿಎಲ್‌ನಲ್ಲಿ ಮಿಂಚಿರುವ ಕ್ರಿಕೆಟಿಗನು ತಮ್ಮದೇ ನಾಡಿನ ತಂಡದಿಂದ ದೂರವಾಗಿ ಉಳಿಯಬೇಕಾಗಿದೆ.ವೆಸ್ಟ್ ಇಂಡೀಸ್ ಈಗ ನೆಚ್ಚಿಕೊಂಡಿರುವುದು ರಾಮನರೇಶ್ ಸರವಣ ಹಾಗೂ ಮರ್ಲಾನ್ ಸ್ಯಾಮ್ಯೂಯಲ್ಸ್ ಅವರನ್ನು ಮಾತ್ರ. ಇವರಿಬ್ಬರನ್ನು ಹೊರತುಪಡಿಸಿದರೆ ತಂಡದ ಬ್ಯಾಟಿಂಗ್ ಸತ್ವವಿಲ್ಲದ್ದಾಗಿ ಕಾಣಿಸುತ್ತದೆ. ಆದರೆ ಭಾರತಕ್ಕೆ ಅಂಥ ಸಮಸ್ಯೆ ಕಾಡುತ್ತಿಲ್ಲ. ಸಂಘಟಿತ ಹೋರಾಟದಿಂದ ಇನಿಂಗ್ಸ್ ಕಟ್ಟುವಂಥ ಛಲವನ್ನು ಪ್ರವಾಸಿಗಳು ಮೊದಲ ಎರಡು ಪಂದ್ಯಗಳಲ್ಲಿ ತೋರಿದ್ದಾರೆ.ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಪಾರ್ಥೀವ್ ಪಟೇಲ್, ನಾಯಕ ರೈನಾ ಹಾಗೂ ಶಿಖರ್ ಧವನ್ ತಮ್ಮ ತಂಡವನ್ನು ಯಾವುದೇ ಪರಿಸ್ಥಿತಿಯಲ್ಲಿ ಆತಂಕದ ಸುಳಿಯಲ್ಲಿ ಸಿಲುಕದಂತೆ ಕಾಪಾಡಿದ್ದಾರೆ. ಬಾಕಿ ಪಂದ್ಯಗಳಲ್ಲಿಯೂ ಜೊತೆಯಾಟಗಳನ್ನು ಬೆಳೆಸುವಂಥ ಯೋಜಿತ ಆಟವನ್ನು ಭಾರತದವರು ಮುಂದುವರಿಸುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ.ಸ್ವಂತ ನೆಲದಲ್ಲಿ ಕೆರಿಬಿಯನ್ ಬೌಲರ್‌ಗಳು ಭಾರಿ ಅಪಾಯಕಾರಿ ಎನ್ನುವ ಹಳೆಯ ಮಾತು ಈ ಸರಣಿಯಲ್ಲಿಯಂತೂ ನಿಜವಾಗಿಲ್ಲ. ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಒತ್ತಡದಲ್ಲಿ ಸಿಲುಕಿಸುವಂಥ ಬೌಲಿಂಗ್ ಸಾಧ್ಯವಾಗಿದ್ದರೆ, ಸರಣಿಯ ಸ್ವರೂಪವೇ ಬೇರೆ ಆಗಿರುತಿತ್ತು.

 

ವಿಚಿತ್ರವೆಂದರೆ ಭಾರತದವರೇ ಬಿಗುವಿನ ದಾಳಿ ನಡೆಸಲು ಸಾಧ್ಯವಾಗಿದೆ. ವಿಕೆಟ್ ಕಬಳಿಸುವುದಕ್ಕಿಂತ ಮುಖ್ಯವಾಗಿ ವಿಂಡೀಸ್‌ನವರು ನಿರ್ಭಯವಾಗಿ ಬ್ಯಾಟ್ ಬೀಸದಂತೆ ತಡೆಯಲು ಪ್ರವಾಸಿ ಪಡೆಯ ವೇಗಿಗಳು ಹಾಗೂ ಸ್ಪಿನ್ ಬೌಲರ್‌ಗಳು ಪ್ರಯತ್ನ ಮಾಡಿದ್ದಾರೆ. ಈ ರೀತಿಯ ಯೋಜನೆಯು ಭಾರತಕ್ಕೆ ಪ್ರಯೋಜನಕಾರಿಯೂ ಆಗಿದೆ.  ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿನ ಪಿಚ್‌ನಲ್ಲಿ ಕೂಡ ಬಿಗುವಿನ ಬೌಲಿಂಗ್ ಮಾಡುವುದು ಸಾಧ್ಯವೆಂದು ರೈನಾ ನಂಬಿದ್ದಾರೆ. ಸ್ಯಾಮಿ ಬಳಗದವರಿಗಿಂತ ತಮ್ಮ ಬೌಲರ್‌ಗಳು ಹೆಚ್ಚು ಪರಿಣಾಮಕಾರಿ ಆಗಬಹುದು ಎನ್ನುವ ಆಶಯವೂ ಅವರದ್ದಾಗಿದೆ. ಈ ಆಶಯಕ್ಕೆ ತಕ್ಕಂತೆ ಇಲ್ಲಿನ ಅಂಗಳ ಸ್ಪಂದಿಸಿದರೆ ಭಾರತದ ಸರಣಿ ವಿಜಯದ ಕನಸು ಕೂಡ ನನಸು!ತಂಡಗಳು


ವೆಸ್ಟ್ ಇಂಡೀಸ್: ಡೆರನ್ ಸಮಿ (ನಾಯಕ), ಕಾರ್ಲಟನ್ ಬಗ್, ದೆವೇಂದ್ರ ಬಿಶೂ, ಡೆರನ್ ಬ್ರಾವೊ, ಕಿರ್ಕ್ ಎಡ್ವರ್ಡ್ಸ್, ಡಾಂಜಾ ಹಿಯಾಟ್, ಕೆಮರ್ ರಾಚ್, ಅಂಥೋನಿ ಮಾರ್ಟಿನ್, ಕೀರನ್ ಪೊಲಾರ್ಡ್, ಆ್ಯಂಡ್ರೆ ರಸಲ್, ಮರ್ಲಾನ್ ಸ್ಯಾಮ್ಯೂಯಲ್ಸ್, ರಾಮನರೇಶ್ ಸರವಣ ಮತ್ತು ಲೆಂಡ್ಲ್ ಸಿಮಾನ್ಸ್.ಭಾರತ: ಸುರೇಶ್ ರೈನಾ (ನಾಯಕ), ಶಿಖರ್ ಧವನ್, ಪಾರ್ಥೀವ್ ಪಟೇಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಎಸ್.ಬದರೀನಾಥ್, ಯೂಸುಫ್ ಪಠಾಣ್, ಹರಭಜನ್ ಸಿಂಗ್, ಅಮಿತ್ ಮಿಶ್ರಾ, ಪ್ರವೀಣ್ ಕುಮಾರ್, ಮುನಾಫ್ ಪಟೇಲ್ ಹಾಗೂ ಇಶಾಂತ್ ಶರ್ಮ.

ಪಂದ್ಯ ಆರಂಭ (ಭಾರತೀಯ ಕಾಲಮಾನ): ಸಂಜೆ 6.30.

ನೇರ ಪ್ರಸಾರ: ಟೆನ್ ಕ್ರಿಕೆಟ್ ಮತ್ತು ದೆಹಲಿ ದೂರದರ್ಶನ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.