ಗುರುವಾರ , ಮೇ 13, 2021
17 °C

ಸರಿಯಾದ ಸಂಬಳ ನೀಡಿ, ಶಿಕ್ಷಕರನ್ನು ಗೌರವಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ಶಿಕ್ಷಕರ ಆದ್ಯತೆ ಮೇರೆಗೆ ಸರ್ಕಾರ ನ್ಯಾಯುತ ಸಂಬಳ ನೀಡಿದರೆ, ಶಿಕ್ಷಕ ವೃತ್ತಿಯನ್ನು ಗೌರವಿಸಿದಂತಾಗುತ್ತದೆ  ಎಂದು ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್ ತಿಳಿಸಿದರು.ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಹಲ್‌ನಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.`ಶಿಕ್ಷಕರು ಮಕ್ಕಳಿಗೆ ಸಾಮಾಜಿಕ, ಪೌರಾಣಿಕ ವಿಚಾರಗಳನ್ನು ತಿಳಿಸಬೇಕು. ತಪ್ಪು ಮಾಡಿದಾಗ ತಿದ್ದಿ ಅವರನ್ನು ಸರಿದಾರಿಗೆ ತರುವ ಶಕ್ತಿ ಗುರುವಿಗೆ ಮಾತ್ರ ಇದೆ~ ಎಂದು ತಿಳಿಸಿದರು.`ಶಿಕ್ಷಕರ ಮಾರ್ಗದರ್ಶನದಿಂದ ಬಹಳಷ್ಟು ಮಂದಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಅಂಥವರು ಕಲಿತ ಶಾಲೆ, ಕಲಿಸಿದ ಗುರುವನ್ನೆಂದೂ  ಮರೆಯಬಾರದು~ ಎಂದು ಸಚಿವರು ಸಲಹೆ ನೀಡಿದರು.ತಾಲ್ಲೂಕಿನ ಅರ್ಧಕ್ಕೆ ನಿಂತಿರುವ ಗುರುಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ  ಮುಂದಿನ ಶಿಕ್ಷಕಕರ ದಿನಾಚರಣೆಯನ್ನು ಗುರು ಭವನದಲ್ಲಿ ಆಚರಿಸಲಾಗುವುದು ಎಂದು ಭರವಸೆ ನೀಡಿದರು.ಕುವೆಂಪು ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ.ಸಿ.ಪಿ.ಆದಿಶೇಷ ಮಾತನಾಡಿ, `ಇಂದಿನ ಸಮಾಜಕ್ಕೆ ಸರ್ವ ಶ್ರೇಷ್ಠ ಶಿಕ್ಷಕರ ಅಗತ್ಯವಿದೆ~ ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಮಲ್ಲಿಕಾರ್ಜುನಗೌಡ ಮಾತನಾಡಿ  ಶಿಕ್ಷಕರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಹೇಳುವ ಜವಾಬ್ದಾರಿ ಮೆಚ್ಚವಂತದ್ದು ಎಂದು ತಿಳಿಸಿದರು. ನಿವೃತ್ತ ಶಿಕ್ಷಕರಿಗೆ ಹಾಗೂ ಶಿಕ್ಷಕರ ಸ್ವರಣಾರ್ಥ ಸನ್ಮಾನಿಸಲಾಯಿತು.

 

ಶಿಕ್ಷಕರ ಸಂಘದ ಕಾರ್ಯದರ್ಶಿ ರಾಮಕೃಷ್ಣಯ್ಯ ಶಿಕ್ಷಕರ ಭವನದ ಉಳಿದಿರುವ ಕಾಮಗಾರಿಗೆ 60ಲಕ್ಷ ರೂ. ನೀಡಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದರು.ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ತಾಲ್ಲೂಕು ಪಂಚಾತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ರಮ್ಯರವಿ ತಾಲ್ಲೂಕು ಪಂಚಾತಿ ಕಾರ್ಯ ನಿರ್ವಹಣಾಧಿಕಾರಿ ರವಿಕುಮಾರ್, ನಗರಸಭೆ ಆಯುಕ್ತ ರಾಮಚಂದ್ರಯ್ಯ, ಜಿಲ್ಲಾ ಪಂಚಾತಿ ಸದಸ್ಯರಾದ ರಾಜೇಶ್ವರಿ, ಸುಧಾರಾಜು, ರಘುಕುಮಾರ್, ನಿವೃತ್ತ ಶಿಕ್ಷಕರಾದ ಟಿ.ವೆಂಕಟಪ್ಪ, ಪುಟ್ಟಮಾದೇಗೌಡ ಉಪಸ್ಥಿತರಿದ್ದರು.`ಮಕ್ಕಳ ಭವಿಷ್ಯ ರೂಪಿಸಿ~

ಮಾಗಡಿ: ಮಕ್ಕಳ ಭವಿಷ್ಯ ರೂಪಿಸುವ ಮೂಲಕ ಸಮಾಜದ ಅಭಿವೃದ್ಧಿಗಾಗಿ ಶಿಕ್ಷಕರು ಶ್ರಮಿಸಬೇಕು ಎಂದು  ನೆಲಮಂಗಲ ಶಾಸಕ ಎಂ.ವಿ.ನಾಗರಾಜು ತಿಳಿಸಿದರು.ಅವರು ಪಟ್ಟಣದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

 

`ನಾನು ಸಹ ಶಿಕ್ಷಕನಾಗಿ 20ವರ್ಷ ಸೇವೆ ಸಲ್ಲಿಸಿದ್ದೇನೆ. ನನ್ನ ಗುರುಗಳ ಮಾರ್ಗದರ್ಶನದಂತೆ ಸಮಾಜ ಸೇವೆಗೆ ಬಂದಿದ್ದೇನೆ~ ಎಂದರು.`ಗ್ರಾಮೀಣ ಶಾಲೆಯ ಮಕ್ಕಳಿಗೆ ಉತ್ತಮ ಆಂಗ್ಲಭಾಷಾ ಶಿಕ್ಷಣ ಲಭಿಸಬೇಕಿದೆ.ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಮಕ್ಕಳಿಗೆ ಕಾಗುಣಿತ ಬರುವುದಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರು ಮಕ್ಕಳಿಗೆ ಬಾಲ್ಯದಲ್ಲಿ ಸರಳ ಲೆಕ್ಕಾಚಾರ, ಕಾಗುಣಿತ, ಸರಳ ಓದು ಬರಹ ಕಲಿಸಬೇಕಿದೆ~ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.ಸಾ.ಶಿ.ಇ. ಇಲಾಖೆಯ ಹನುಮಂತರಾಯಪ್ಪ, ತಹಶೀಲ್ದಾರ್ ಟಿ.ವಿ.ಪ್ರಕಾಶ್, ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಧನಂಜಯ, ಪುರಸಭೆಯ ಅಧ್ಯಕ್ಷ ನರಸೇಗೌಡ, ಹಾಲ ಒಕ್ಕೂಟ ನಿರ್ದೇಶಕ ನರಸಿಂಹಮೂರ್ತಿ, ಅಕ್ಷರ ದಾಸೋಹದ ಮೇಲ್ವಿಚಾರಕ ಮುದ್ದುವೀರಪ್ಪ, ತಾ.ಪಂ. ಅಧ್ಯಕ್ಷ ಜಿ.ವಿ.ರಾಮಣ್ಣ, ಜಿಲ್ಲಾ ಪ್ರಾಶಾ.ಶಿ. ಸಂಘದ ಮಾಜಿ ಅಧ್ಯಕ್ಷ ಎಲ್. ನಂಜಯ್ಯ ಡಾ.ಎಸ್.ರಾಧಾಕೃಷ್ಣನ್ ಅವರ ಜೀವನದ ಘಟನೆಗಳನ್ನು ಕುರಿತು ಮಾತನಾಡಿದರು. ತಾಲ್ಲೂಕಿನ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.`ಉತ್ತಮ ಸಮಾಜ ನಿರ್ಮಾಣಕ್ಕೆ ಕರೆ~

ಕನಕಪುರ: ಉತ್ತಮ ಸಮಾಜ ನಿರ್ಮಾಣದ ಜವಬ್ದಾರಿ ಶಿಕ್ಷಕರ ಮೇಲಿದ್ದು, ಆ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಕಾರ್ಯೋನ್ಮುಖರಾಗಬೇಕೆಂದು  ಶಾಸಕ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ  ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಕ್ಕಳನ್ನು ಸುಸಂಸ್ಕೃತ  ನಾಗರಿಕರನ್ನಾಗಿಸಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕಾದರೆ  ಶಿಕ್ಷಕರ ಪಾತ್ರ ಬಹುಮುಖ್ಯ.ಪ್ರಸ್ತುತ ಶಿಕ್ಷಣ ವ್ಯವಸ್ಥೆ ಸಾಕಷ್ಟು ಸುಧಾರಣೆಯಾಗಿದೆ.  ಮಕ್ಕಳು ಕೂಡ ಬುದ್ದಿಶಾಲಿಗಳಾಗಿದ್ದಾರೆ. ಅಂಥ ಮಕ್ಕಳ ಮನಸ್ಸನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯಬೇಕು ಎಂದರು. ಶಿಕ್ಷಣ ತಜ್ಞ ಪ್ರೊ.ಶಿಕಾರಿಪುರ ಕೃಷ್ಣಮೂರ್ತಿ ಮಾತನಾಡಿ, ಶಿಕ್ಷಕರು ತಮ್ಮ ವೃತ್ತಿಯನ್ನು ಕೇವಲ ಕರ್ತವ್ಯವೆಂದು ಭಾವಿಸದೇ ಉತ್ತಮ ಸಮಾಜ ನಿರ್ಮಾಣಕ್ಕಾಗಿ ದುಡಿಯಬೇಕು.ಶಿಕ್ಷಕರು ಉತ್ತಮ ಪ್ರಜೆಗಳನ್ನು ನಿರ್ಮಿಸಲು ಪ್ರಮುಖ ಪಾತ್ರವಹಿಸಿದಾಗ ಮಾತ್ರ ದೇಶಅಭಿವೃದ್ಧಿಯಾಗುತ್ತದೆ ಎಂದರು. ಶಿಕ್ಷಕರು ದುಡಿಮೆಗಷ್ಟೇ ಕರ್ತವ್ಯ ಪಾಲಿಸಬೇಡಿ. ಅದರ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಿ ಎಂದು ಕಿವಿ ಮಾತು ಹೇಳಿದರು. ಪುರಸಭೆ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಸರ್ವಪಲ್ಲಿ ರಾಧಾಕೃಷ್ಣರವರ ಭಾವಚಿತ್ರ ಅನಾವರಣಗೊಳಿಸಿದರು.  ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮಾದೇವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಕನ್ಯ ರಂಗಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ವೆಂಕಟೇಶಯ್ಯ, ಕಾಂಗ್ರೆಸ್ ಮುಖಂಡರಾದ ಎಂ.ಡಿ.ವಿಜಯದೇವು, ವಿ.ಶ್ರಿನಿವಾಸ್, ಜೋಸೆಫ್, ಜೆ.ಡಿ.ಎಸ್. ರಾಜ್ಯಪ್ರಧಾನ ಕಾರ್ಯದರ್ಶಿ ಎಂ.ಎನ್.ಅನಿಲ್‌ಕುಮಾರ್, ತಹಸೀಲ್ದಾರ್ ಡಾ. ಪ್ರಜ್ಞಾ ಅಮ್ಮೆಂಬಳ್ ಸೇರಿದಂತೆ ವಿವಿಧ ಗಣ್ಯರು  ಹಾಜರಿದ್ದರು. ಸಮಾರಂಭದಲ್ಲಿ  ನಿವೃತ್ತ ಹಾಗೂ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.