ಭಾನುವಾರ, ಜುಲೈ 25, 2021
22 °C

ಸರ್ಕಾರಿ ಆಸ್ಪತ್ರೆ: ಹೆರಿಗೆ ಇಲ್ಲಿ ಪ್ರಯಾಸಕರ!

ಪ್ರಜಾವಾಣಿ ವಾರ್ತೆ/ ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

ಸರ್ಕಾರಿ ಆಸ್ಪತ್ರೆ: ಹೆರಿಗೆ ಇಲ್ಲಿ ಪ್ರಯಾಸಕರ!

ಚಿತ್ರದುರ್ಗ: ಇಲ್ಲಿ ಹೆರಿಗೆಯೂ ಗಜಪ್ರಸವ. ಬಾಣಂತಿಯರಿಗೂ ನೆಲವೇ ಗತಿ. ವೈದ್ಯರಿಲ್ಲದ ಆಸ್ಪತ್ರೆಯಲ್ಲಿ ಈಗ ಸೌಕರ್ಯಗಳು ಬಲು ದೂರ. ರೋಗಿಗಳ ಒತ್ತಡ, ವೈದ್ಯರ ಕೊರತೆಯಿಂದ ನಲುಗುತ್ತಿರುವ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಬಲು ಪ್ರಯಾಸಕರ. ಶೇ. 45ರಿಂದ 50ರಷ್ಟು ಸಿಜೇರಿಯನ್ ಪ್ರಕರಣಗಳು ದಾಖಲಾಗುವ ಈ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಮಲಗಲೂ  ವ್ಯವಸ್ಥೆ ಇಲ್ಲ. ಸದಾ ಗಿಜಿಗಿಡುವ ಕೊಠಡಿಯೇ ಬಾಣಂತಿಯರ ವಿಶ್ರಾಂತಿ ತಾಣ. ಅದಕ್ಕೂ ನೆಲವೇ ಗತಿ.ಗ್ರಾಮೀಣ ಪ್ರದೇಶದ, ಹಿಂದುಳಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ಆಸ್ಪತ್ರೆಗೆ ದಾಖಲಾಗುತ್ತಾರೆ. ಪ್ರತಿ ತಿಂಗಳು ಕನಿಷ್ಠ 500ರಿಂದ 600 ಹೆರಿಗೆಯಾಗುತ್ತಿವೆ.2010ರಲ್ಲಿ ಒಟ್ಟು 5014 ಹೆರಿಗೆಯಾಗಿವೆ. ಇದರಲ್ಲಿ 3410 ಸಾಮಾನ್ಯ ಮತ್ತು 1604 ಸಿಜೇರಿಯನ್ ಹೆರಿಗೆಯಾಗಿವೆ. ಪ್ರಸಕ್ತ ಸಾಲಿನ ಏಪ್ರಿಲ್ ತಿಂಗಳಲ್ಲಿ 516 ಹೆರಿಗೆಯಾಗಿದ್ದು, ಇದರಲ್ಲಿ 230 ಸಿಜೇರಿಯನ್ ಪ್ರಕರಣಗಳು ದಾಖಲಾಗಿವೆ. ಇಷ್ಟೊಂದು ಪ್ರಮಾಣದಲ್ಲಿ ಹೆರಿಗೆ ಪ್ರಕರಣಗಳು ದಾಖಲಾಗುತ್ತಿದ್ದರೂ ಅದಕ್ಕೆ ಬೇಕಾಗುವ ಸೌಲಭ್ಯಗಳು ಮತ್ತು ವೈದ್ಯರು ಇಲ್ಲ.ಬಡವರ ಆಸ್ಪತ್ರೆ ಎಂದೇ ಬಿಂಬಿತವಾಗಿರುವ ಈ ಆಸ್ಪತ್ರೆಯಲ್ಲಿ ಇರುವುದು ಮೂವರು ಸ್ತ್ರೀರೋಗ ತಜ್ಞರು ಮಾತ್ರ. ಅದರಲ್ಲಿ ಈಗ ಒಬ್ಬರಿಗೆ ವರ್ಗಾವಣೆಯಾಗಿದ್ದು, ಉಳಿದಿದ್ದು ಇಬ್ಬರೇ. ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಅಪಥ್ಯವಾಗುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ.’ತಾಲ್ಲೂಕು ಕೇಂದ್ರಗಳಲ್ಲಿನ ಆಸ್ಪತ್ರೆಗಳಲ್ಲಿ ಹೆರಿಗೆಗೆ ದಾಖಲಾಗುವುದು ಕಡಿಮೆಯಾಗಿದೆ. ಅಲ್ಲಿ ದಾಖಲಾದರೂ ಜಿಲ್ಲಾ ಆಸ್ಪತ್ರೆಗೆ ಕಳುಹಿಸುತ್ತಾರೆ. ಅದರಲ್ಲೂ ಸಿಜೇರಿಯನ್ ಪ್ರಕರಣಗಳಾದರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸುತ್ತಾರೆ. ಜತೆಗೆ 108 ವಾಹನ ಸೌಲಭ್ಯವಿರುವುದರಿಂದ ತಾಲ್ಲೂಕು ಆಸ್ಪತ್ರೆ ಬದಲಾಗಿ ಜಿಲ್ಲಾ ಆಸ್ಪತ್ರೆಗೆ ನೇರವಾಗಿ ದಾಖಲಾಗುತ್ತಿರುವುದರಿಂದ ಹೆರಿಗೆ ಪ್ರಕರಣಗಳ ಒತ್ತಡ ಸಹಜವಾಗಿ ಹೆಚ್ಚಾಗಿದೆ’ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದಪ್ಪ.ಇನ್ನು ಗರ್ಭಿಣಿಯರು ಸಹ ಆರಂಭದಿಂದಲೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆರಿಗೆ ಸಮಯದಲ್ಲಿ ಮಾತ್ರ ಜಿಲ್ಲಾ ಆಸ್ಪತ್ರೆಗೆ ದಾಖಲಾಗುತ್ತಾರೆ. ಜತೆಗೆ ಮನೆಯಲ್ಲಿ ಹೆರಿಗೆ ಬೇಡ ಎಂದು ಸರ್ಕಾರವೇ ಜಾಗೃತಿ ಮೂಡಿಸುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಒತ್ತಡ ಹೆಚ್ಚಾಗಿದೆ ಎನ್ನುತ್ತಾರೆ ಆಸ್ಪತ್ರೆಯಲ್ಲಿನ ವೈದ್ಯರು. ಇತರೆ ಕಾಯಿಲೆಗಳಿಗೂ ಇಲ್ಲಿ ಚಿಕಿತ್ಸೆ ಕಷ್ಟಕರ. ಜಿಲ್ಲಾ ಆಸ್ಪತ್ರೆಯಾಗಿದ್ದರೂ ಇಲ್ಲಿನ ರೋಗಿಗಳ ಸ್ಥಿತಿ ಸ್ಪಲ್ವ ಗಂಭೀರವಾದರೂ ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರು, ಮಣಿಪಾಲ, ಬಳ್ಳಾರಿಗೆ ಓಡಬೇಕು.ಪ್ರತಿದಿನ ಕನಿಷ್ಠ ಒಂದು ಸಾವಿರ ರೋಗಿಗಳು ತಪಾಸಣೆಗೆ ಒಳಗಾಗುವ ಈ ಆಸ್ಪತ್ರೆಯಲ್ಲಿ ತಜ್ಞವೈದ್ಯರ ಕೊರತೆಯೂ ಇದೆ. ತಲಾ ಒಬ್ಬರು ಮಾತ್ರ ಫಿಜಿಷಿಯನ್, ಕೀಲು ಮತ್ತು ಮೂಳೆ ತಜ್ಞ, ಅರವಳಿಕೆ ತಜ್ಞರು ಇದ್ದಾರೆ.ಸಮಸ್ಯೆಗಳ ಸುಳಿಯಿಂದ ಹೊರಬಾರದೆ ನಲುಗುತ್ತಿರುವ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಯೇ ದೊರೆಯುತ್ತಿಲ್ಲ. 1952 ರಲ್ಲಿ ಆರಂಭವಾದ ಜಿಲ್ಲಾ ಆಸ್ಪತ್ರೆ 450 ಹಾಸಿಗೆ ಸಾಮರ್ಥ್ಯ ಹೊಂದಿದೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಮಂಜೂರಾತಿ ಪಡೆದ ವೈದ್ಯರು ಮತ್ತು ಸಿಬ್ಬಂದಿ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿಲ್ಲ. ಆಸ್ಪತ್ರೆಯನ್ನು 1000 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಬೇಕು ಎನ್ನುವ ಪ್ರಸ್ತಾವವೂ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.