ಬುಧವಾರ, ಮೇ 12, 2021
27 °C

ಸರ್ಕಾರಿ ಶಾಲೇಲಿ ಟೆಕ್ಕಿಗಳು ಸಾರ್ ಟೆಕ್ಕಿಗಳು

- ಹೇಮಾ ವೆಂಕಟ್ Updated:

ಅಕ್ಷರ ಗಾತ್ರ : | |

ಸಮಾಜಸೇವೆ ಮಾಡಬೇಕೆಂದರೆ ನೂರಾರು ದಾರಿಗಳಿವೆ. ಕೆಲವರಿಗೆ ಸಹಾಯ ಮಾಡುವ ತುಡಿತವಿರುತ್ತದೆ. ಆದರೆ ಹೇಗೆ ಮಾಡಬೇಕೆಂಬ ಸ್ಪಷ್ಟ ಕಲ್ಪನೆ ಇರುವುದಿಲ್ಲ. ಯಾವುದಾದರೂ ಸ್ವಯಂಸೇವಾ ಸಂಸ್ಥೆಯ ಕೈಗೆ ಒಂದಿಷ್ಟು ಹಣ ನೀಡಿ ತೃಪ್ತರಾಗುತ್ತಾರೆ.

ಆದರೆ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ `ಫಿಲಿಪ್ಸ್ ಲೈಟ್ಸ್' ಕಂಪೆನಿಗೆ ಹೇಗೆ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಬೇಕು ಮತ್ತು ನಾವು ಮಾಡುವ ಕಾರ್ಯ ಫಲಪ್ರದವಾಗಬೇಕಾದರೆ ಯಾವ ರೀತಿಯ ಯೋಜನೆ ರೂಪಿಸಿಕೊಳ್ಳಬೇಕು ಎಂಬ ಅರಿವಿದೆ. ಇದಕ್ಕೆ `ಕಮ್ಯುನಿಟಿ ಇನ್‌ವಾಲ್ಮೆಂಟ್ ಟೀಂ'ನ ಸದಸ್ಯರು ತಮ್ಮ ಸುತ್ತಲಿನ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಹಾಕಿಕೊಂಡಿರುವ ಕಾರ್ಯಕ್ರಮಗಳೇ ಸಾಕ್ಷಿ.

`ಶಿಕ್ಷಣ, ಆರೋಗ್ಯ, ಪರಿಸರ' ಇವರ ಮುಖ್ಯ ಸೇವಾಕ್ಷೇತ್ರ.

ಸದ್ಯ ಟೀಂನ ಸದಸ್ಯರು ಶಿಕ್ಷಣ ಕ್ಷೇತ್ರದಲ್ಲಿ  ಕೆಲಸ ಮಾಡುವ ಅನೇಕ ಸ್ವಯಂಸೇವಾ ಸಂಸ್ಥೆಗಳ ಜೊತೆ ಕೈ ಜೋಡಿಸಿದ್ದಾರೆ. ಇದರ ಜೊತೆಗೆ ಸದಸ್ಯರು ತಮ್ಮ ಮನೆ ಸಮೀಪದ ಸರ್ಕಾರಿ ಶಾಲೆಗಳಲ್ಲಿ ಅನೇಕ ಪೂರಕ ಕಾರ್ಯಕ್ರಮಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಮಾಜಸೇವೆ ಮಾಡಬೇಕು ಎಂದು ಅಂತರಂಗದಲ್ಲಿ ತುಡಿತ ಇರುವವರಿಗೆ `ಫಿಲಿಪ್ಸ್' ತಂಡ ಮಾದರಿ.ಸಂಸ್ಥೆಗಳ ಬಗ್ಗೆ ಎಚ್ಚರದ ಹೆಜ್ಜೆ

ಅನೇಕ ಸ್ವಯಂಸೇವಾ ಸಂಸ್ಥೆಗಳು ಸಹಾಯಕ್ಕಾಗಿ ಮುಂದೆ ಬರುತ್ತವೆ. ಆದರೆ ಸ್ವಯಂಸೇವಾ ಸಂಸ್ಥೆಗಳನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರ ವಹಿಸುತ್ತೇವೆ ಎಂದು ಹೇಳುವ ಟೀಂನ ಸದಸ್ಯೆ ಸುಷ್ಮಾ, `ಅಂತಹ ಸಂಸ್ಥೆಗಳ ಹಿನ್ನೆಲೆ ಮತ್ತು ಅವರು ಹಾಕಿಕೊಂಡಿರುವ ಕಾರ್ಯಕ್ರಮದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಳ್ಳುತ್ತೇವೆ. ಹಾಗೆಯೇ ನಮ್ಮ ಸದಸ್ಯರಿಗೆ ಆ ಕಾರ್ಯಕ್ರಮದಲ್ಲಿ ಮುಕ್ತವಾಗಿ ಪಾಲ್ಗೊಳ್ಳುವ ಅವಕಾಶ ಇದ್ದರೆ ಮಾತ್ರ ಸಹಾಯ ಮಾಡುತ್ತೇವೆ. ಯೋಜನೆಯ ಸಂಪೂರ್ಣ ನೀಲನಕ್ಷೆಯನ್ನು ಸಿದ್ಧಪಡಿಕೊಂಡು ಬರಬೇಕು ಎಂಬ ಷರತ್ತು ವಿಧಿಸಿದ್ದೇವೆ' ಎನ್ನುತ್ತಾರೆ.ತಂಡದ ಸದಸ್ಯರು ತಮ್ಮ ಬಿಡುವಿನ ವೇಳೆಯಲ್ಲಿ ಕಲ್ಕೆರೆ, ರಾಮಮೂರ್ತಿ ನಗರ, ಎ.ಎಸ್.ಆರ್. ಬಡಾವಣೆ, ರಾಚೇನಹಳ್ಳಿ, ರಾಂಪುರ ಹಾಗೂ ದಕ್ಷಿಣ ಭಾಗದ ಚಾಮರಾಜಪೇಟೆ, ಬಸವನಗುಡಿ, ಕತ್ರಿಗುಪ್ಪೆ, ಕಾಡುಸೊನ್ನೇನಹಳ್ಳಿ, ಕೊತ್ತನೂರು ಹೀಗೆ 75 ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಲ್ಕೆರೆಯ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಲ್ಯಾಬ್ ನಿರ್ಮಿಸಿಕೊಟ್ಟಿರುವ ಕಂಪೆನಿ ಕಂಪ್ಯೂಟರ್ ಶಿಕ್ಷಕರನ್ನು ನೇಮಿಸಿ ವೇತನವನ್ನೂ ನೀಡುತ್ತಿದೆ. ಆಗಾಗ ಇಂಜಿನಿಯರ್‌ಗಳು ಭೇಟಿ ನೀಡಿ ಕಂಪ್ಯೂಟರ್‌ಗಳ ನಿರ್ವಹಣೆ ನೋಡಿಕೊಳ್ಳುತ್ತಾರೆ.`ಸಮರ್ಥನಂ' ಸಂಸ್ಥೆಯ ಸದಸ್ಯರಿಗಾಗಿ ಡಿಜಿಟಲ್ ಗ್ರಂಥಾಲಯ ನೀಡಲಾಗಿದೆ. ಹೆಣ್ಣೂರಿನಲ್ಲಿರುವ `ರೀಚಿಂಗ್ ಹ್ಯಾಂಡ್' ಜೊತೆ ಕೈಜೋಡಿಸಿರುವ ಇವರು ರಾಷ್ಟ್ರೋತ್ಥಾನದ ಬಿಹಾರ ಮಾದರಿಯ `ಸೂಪರ್ ಥರ್ಟಿ' ಯೋಜನೆಗೂ ಮುಂದಾಗಿದೆ. ಕಳೆದ ವರ್ಷ `ಸೇವಾ ಸಿಂಧು' ಸಂಸ್ಥೆಯ ಯೋಜನೆಯಡಿ 70 ಮಕ್ಕಳಿಗೆ ಸ್ಟಡಿ ಕಿಟ್ ನೀಡಿದೆ. ಇದೆಲ್ಲ ಟೀಂನ ಸದಸ್ಯರ ಮುಂದಾಳುತ್ವದಲ್ಲಿಯೇ ನಡೆಯುತ್ತದೆ.ಆಟದ ಮೂಲಕ ಆರೋಗ್ಯ ಮಾಹಿತಿ

ಬಡ ಮಕ್ಕಳಿಗೆ ಶುಚಿತ್ವ ಮತ್ತು ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡುವುದು ದೊಡ್ಡ ಸವಾಲು. ಇದಕ್ಕಾಗಿ ಆಟದ ಮೂಲಕ ಹೇಳಿಕೊಡುತ್ತೇವೆ. ಸುಮಾರು ಎಂಟು ಅಡಿ ವಿಸ್ತೀರ್ಣದ ಹಾವು ಏಣಿ ಆಟದ ಚಾರ್ಟ್‌ನಲ್ಲಿ ಕೆಟ್ಟ ಹವ್ಯಾಸಗಳು ಮತ್ತು ಒಳ್ಳೆಯ ಹವ್ಯಾಸಗಳ ಬಗ್ಗೆ ಚಿತ್ರಸಹಿತ ಮಾಹಿತಿ ಇರುತ್ತದೆ. ಗಂಡು ಮತ್ತು ಹೆಣ್ಣುಮಕ್ಕಳ ಪ್ರತ್ಯೇಕ ಟೀಂ ಮಾಡಿ ಇಬ್ಬರು ಮಕ್ಕಳನ್ನು ಆಯ್ದು ಅದರಲ್ಲಿ ದಾಳ ಉರುಳಿಸಿದಾಗ ಹಾವಿನ ಬಾಯಿಗೆ ಸಿಲುಕಿದರೆ ಕೆಟ್ಟ ಹವ್ಯಾಸದ ಬಗ್ಗೆ ಮಾಹಿತಿ ನೀಡಬೇಕು. ಏಣಿಯ ಮೂಲಕ ಮೇಲೆ ಹೋದವರು ಒಳ್ಳೆಯ ಹವ್ಯಾಸಗಳ ಬಗ್ಗೆ ಅಲ್ಲಿರುವ ಮಾಹಿತಿಯನ್ನು ಎಲ್ಲರಿಗೂ ಕೇಳುವಂತೆ ಓದಿ ಹೇಳುವುದು ಆಟದ ನಿಯಮ. ಮಕ್ಕಳಿಗೆ ಆಟದ ಮೂಲಕ ಹೇಳಿದಾಗ ಬಹಳ ಬೇಗ ಅರ್ಥವಾಗುತ್ತದೆ. ಇದು ನಮ್ಮದೇ ಪ್ರಯೋಗ' ಎಂದು ವಿವರಿಸುತ್ತಾರೆ ಸುಷ್ಮಾ.ಸರ್ಕಾರಿ ಶಾಲೆಗಳ 10 ಮತ್ತು 12ನೇ ತರಗತಿಯ ಮಕ್ಕಳಿಗೆ ಫಿಲಿಪ್ಸ್ ಕಂಪೆನಿ ಆವರಣದಲ್ಲಿ ನಡೆಯುವ ವಸ್ತುಗಳ ಉತ್ಪಾದನೆಯ ವಿವಿಧ ಹಂತಗಳ ಪ್ರಾಯೋಗಿಕ ಮಾಹಿತಿ ನೀಡುತ್ತಾರೆ. ಇದು ಸಂಶೋಧನಾ ಕ್ಷೇತ್ರದ ಬಗ್ಗೆ ಮಕ್ಕಳ ಅಭಿರುಚಿ ಹೆಚ್ಚಿಸುವ ಪ್ರಯತ್ನ. ಆದರೆ ಸಂಶೋಧನಾ ಕ್ಷೇತ್ರದಲ್ಲಿ ಹೇರಳವಾದ ಅವಕಾಶ ಇದೆ ಎಂದು ಅವರಿಗೆ ಮನವರಿಕೆ ಮಾಡಿಕೊಡುತ್ತದೆ ಈ ತಂಡ.`ಬೇರೆ ಸಂಸ್ಥೆಗಳ ಯೋಜನೆಗಳಿಗೆ ಸಹಾಯ ಮಾಡುವುದಲ್ಲದೆ ಕಲ್ಕೆರೆಯ ಸರ್ಕಾರಿ ಶಾಲೆಯನ್ನು ಪ್ರಯೋಗಾತ್ಮಕವಾಗಿ ನಮ್ಮ ಯೋಜನೆಗಳಿಗೆ ಒಳಪಡಿಸಿದ್ದೇವೆ. ಅಲ್ಲಿ ಈಗ ಹಾಜರಾತಿ ಪ್ರಮಾಣ ಹೆಚ್ಚಾಗಿದೆ. ಉತ್ತೀರ್ಣರಾಗುವವರ ಸಂಖ್ಯೆ ಹೆಚ್ಚಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹತ್ತನೇ ತರಗತಿ ಪಾಸಾದ ಆರು ಮಕ್ಕಳು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಅಭಿವೃದ್ಧಿಯ ದಿಕ್ಸೂಚಿ' ಎನ್ನುತ್ತಾರೆ ತಂಡದ ಸಂಯೋಜಕ ಸತೀಶ್.

ಇಷ್ಟೇ ಅಲ್ಲ. ಟೀಂನ ಸದಸ್ಯರು ಒಂದಾಗಿ ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವ ಕೆಲಸವನ್ನೂ ಮಾಡುತ್ತಾರೆ. ಇದು ನಿಜಕ್ಕೂ ಸವಾಲಿನ ಕೆಲಸ. ಆದರೂ ಒಂದು ಶಾಲೆಗೆ ಒಂದೇ ದಿನದಲ್ಲಿ ಬಣ್ಣ ಬಳಿದು ಮುಗಿಸಿದ ಹೆಗ್ಗಳಿಕೆ ಇವರದು.ಕಾರ್ಮಿಕ ಮಕ್ಕಳ ಕ್ರಷರ್ ಶಾಲೆ

ಕಟ್ಟಡ ಕಾರ್ಮಿಕರಿಗೆಂದು ಕ್ರಷರ್ ಶಾಲೆ ಆರಂಭಿಸಿ ಅಲ್ಲಿನ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. `ಅಲ್ಲಿ ಎಲ್ಲ ವಯಸ್ಸಿನ ಮಕ್ಕಳೂ ಇದ್ದಾರೆ. ಒಂದು ಕೋಣೆಯಲ್ಲಿ ಪಾಠ. ಮತ್ತೊಂದು ಕೋಣೆಯಲ್ಲಿ ಕಂಪ್ಯೂಟರ್ ಲ್ಯಾಬ್ ಒದಗಿಸಿದ್ದೇವೆ. ಅಲ್ಲಿ ಶಿಕ್ಷಕರ ನೇಮಕ, ಊಟ, ಶಿಕ್ಷಣ ಪರಿಕರಗಳನ್ನು ಒದಗಿಸುತ್ತಿದ್ದೇವೆ. ಅಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮಕ್ಕಳು ಸಾಮಾನ್ಯ ಶಾಲೆಗಳಿಗೆ ಹೋಗುವಂತಾಗಬೇಕು ಎಂಬುದು ನಮ್ಮ ಉದ್ದೇಶ' ಎನ್ನುತ್ತಾರೆ ಸತೀಶ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.