ಗುರುವಾರ , ಜನವರಿ 23, 2020
28 °C

ಸರ್ವಧರ್ಮ ಮೇಳೈಸುವ ಚರ್ಚ್

ಪ್ರೊ. ಸಿ.ಸಿದ್ದರಾಜು ಆಲಕೆರೆ Updated:

ಅಕ್ಷರ ಗಾತ್ರ : | |

ಸರ್ವಧರ್ಮ ಮೇಳೈಸುವ ಚರ್ಚ್

ಈ ಮಂದಿರ ನೋಡಿದರೆ ಕೆಲವರಿಗೆ ಹಿಂದೂ ದೇವಾಲಯದಂತೆ, ಇನ್ನು ಕೆಲವರಿಗೆ ಮಸೀದಿಯಂತೆ ಗೋಚರಿಸುತ್ತದೆ. ಆದರೆ ತಲೆ ಎತ್ತಿ ನೋಡಿದಾಗ ಕಾಣುವ ಶಿಲುಬೆ ಅದು ಚರ್ಚ್ ಎಂಬುದನ್ನು ನಿರೂಪಿಸುತ್ತದೆ.ಮಂಡ್ಯ ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ಸರ್ವಧರ್ಮವನ್ನು ಪ್ರಚುರ ಪಡಿಸುವ ಈ ಚರ್ಚ್, ‘ಹಿಂದೂ-- ಮುಸ್ಲಿಂ- ಕ್ರೈಸ್ತರಿಗೆ ಒಂದೇ ಭಾರತ ಮಂದಿರ...’ ಎಂಬ ರಾಷ್ಟ್ರಕವಿ ಕುವೆಂಪು ಅವರ ಸಂದೇಶವನ್ನು ಎತ್ತಿ ತೋರಿಸಿದೆ. ಈ ಕವಿವಾಣಿ ಇಲ್ಲಿ ಸಾಕಾರಗೊಂಡಿದೆ.

ಏಸುವಿನ ೧೨ ಮಂದಿ ಶಿಷ್ಯರಲ್ಲಿ ಒಬ್ಬರಾದ ಸಂತ ಥಾಮಸ್ ಕ್ರಿ.ಶ. ೫೨ರಲ್ಲಿ ಕೇರಳಕ್ಕೆ ಬಂದು ಕ್ರೈಸ್ತ ಧರ್ಮ ಪ್ರಚಾರ ಮಾಡಿದರಂತೆ.ಆ ಪರಂಪರೆಗೆ ಸೇರಿದ ಕೇರಳದ ಕೊಡುಂಗಲೂರುನಿಂದ ಕ್ರೈಸ್ತ ಧರ್ಮ ಪ್ರಚಾರ ಮಾಡಲು ಜೋಶ್ ಪುರೇಡಂ ಎಂಬ ಕ್ರೈಸ್ತ ಧರ್ಮಿಯೊಬ್ಬ ೧೯೭೯ರಲ್ಲಿ ಕಾಳೇನಹಳ್ಳ ಗ್ರಾಮಕ್ಕೆ ಬಂದು ರೈತರಿಂದ ೮ ಎಕರೆ ಭೂಮಿ ಖರೀದಿಸಿ ೧೯೮೦ರಲ್ಲಿ ಸರ್ವಧರ್ಮ ಸಾಮರಸ್ಯ ಸಂಕೇತದಲ್ಲಿ ಚರ್ಚ್‌ವೊಂದನ್ನು ನಿರ್ಮಿಸಿದ.ಜಗತ್ತಿನ ಮೂರು ಪ್ರಮುಖ ಧರ್ಮಗಳ ಭಾವೈಕ್ಯದ ಸಂಕೇತದ ಈ ಮಂದಿರದ ಮುಖ ಮಂಟಪ ಮೇಲ್ಭಾಗ ಗುಮ್ಮಟ ಆಕೃತಿಯಿದ್ದು, ಮುಸ್ಲಿಮರ ಮಸೀದಿಯಂತೆ ಕಾಣುತ್ತದೆ. ಗರ್ಭಗೃಹದ ಮೇಲಿನ ಗೋಪುರ ಹಿಂದೂ ದೇಗುಲದಂತೆ ಇದೆ. ಗುಮ್ಮಟ -ಗೋಪುರ ಇವೆರಡರ ಮೇಲೂ ಕ್ರೈಸ್ತ ಧರ್ಮದ ಸಂಕೇತದ ಎರಡು ಶಿಲುಬೆಗಳಿವೆ.ಹೀಗಿದೆ ಮಂದಿರ

ಉತ್ತರ- ದಕ್ಷಿಣಾಭಿಮುಖವಾಗಿ ನಿರ್ಮಿಸಿರುವ ಈ ಚರ್ಚ್‌ಗೆ ಮುಖಮಂಟಪದ ಮೂಲಕ ಒಳಪ್ರವೇಶಿಸಿದರೆ ಪ್ರಾರ್ಥನಾ ಮಂದಿರ ಸಿಗುತ್ತದೆ. ಅದರ ಪ್ರವೇಶದ್ವಾರದ ಮೇಲ್ಭಾಗ ಭಿತ್ತಿಯ ಮೇಲೆ ಜನನ, ಜೀವನ ಹಾಗೂ ಸ್ವರ್ಗದ ಮಾನವನ ಮೂರು ಹಂತಗಳ ಸಂಕೇತದ ಮಾರ್ತೋಮ ಶಿಲುಬೆ ಇರಿಸಲಾಗಿದೆ. ಪ್ರಾರ್ಥನಾ ಮಂದಿರದಲ್ಲಿ ಮೇರಿ - ಜೋಸೆಫ್ ಹಾಗೂ ಬಾಲಕ ಏಸುವಿನ ಪ್ರತಿಮೆಗಳಿವೆ.ಮುಖಮಂಟಪದ ಮುಂಭಾಗವಿರುವ ಗರ್ಭಗೃಹದ ಭಿತ್ತಿಯ ಮೇಲೆ ಏಸುವಿನ ರೋಮನ್ ಶಿಲುಬೆ [ಕ್ರೂಸಿಫಿಕ್ಸ್] ಇರಿಸಲಾಗಿದೆ. ಅದರ ಕೆಳಭಾಗದ ಬಲಗಡೆ ಟಬರ್ ನಾಕಲ್ ಪೀಠ ಹಾಗೂ ಎಡಗಡೆ ಬೈಬಲ್ ಪೀಠದಲ್ಲಿ ಬೈಬಲ್ ಇಡಲಾಗಿದೆ.ಚರ್ಚ್‌ನ ಸಮೀಪದಲ್ಲೆ ಏಸು ಜನಿಸುವ ಗುಡಿಸಲು (ಕ್ರಿಬ್) ನಿರ್ಮಿಸಲಾಗಿದೆ. ಇಂದು ರಾತ್ರಿ ೧೧.೩೦ ಗಂಟೆಗೆ ಏಸುವಿನ ಜನನದ ಸಂಕೇತವಾದ ಕ್ರಿಬ್ ಅನ್ನು ಉದ್ಘಾಟನೆ ಮಾಡಿ, ಮಧ್ಯರಾತ್ರಿ ೧೨ರ ನಂತರ ಅಂದರೆ ದಿನಾಂಕಕ್ಕೆ ಸೇರುವಂತೆ ಬೆಂಕಿಯನ್ನು ಹೊತ್ತಿಸಿ ಅದರ ಸುತ್ತಲು ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಕ್ರಿಬ್‌ನಿಂದ ಚರ್ಚಿನವರೆಗೆ ಪ್ರತಿಯೊಬ್ಬ ಕ್ರೈಸ್ತರು ಮೋಂಬತ್ತಿಯನ್ನು ಹಿಡಿದುಕೊಂಡು ಪ್ರಾರ್ಥನೆ ಮಾಡಿ ಕ್ರಿಸ್‌ಮಸ್ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇದೇ ೩೧ರ ರಾತ್ರಿ

೧೨ ಗಂಟೆಗೆ ೨೦೧೩ರ ವರ್ಷಕ್ಕೆ ವಿದಾಯ ಹೇಳಿ ೨೦೧೪ರ ನೂತನ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಗುತ್ತದೆ ಎಂದು ಚರ್ಚ್‌ನ ಡೈಸನ್ ಹೇಳುತ್ತಾರೆ.ಸಾಮಾಜಿಕ ಸೇವೆ

ಈ ಚರ್ಚ್‌ನ ವತಿಯಿಂದ ಕಾಳೇನಹಳ್ಳಿಯಲ್ಲಿ ಜ್ಯೋತಿರ್‌ವಿಕಾಸ ಎಂಬ ಹೆಸರಿನಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಿ ಗ್ರಾಮೀಣ ಜನರಿಗೆ ಉಚಿತ ಆರೋಗ್ಯ ಸೇವೆ ಮಾಡತೊಡಗಿತು. ಮಹಿಳೆಯರಿಗಾಗಿ ಹೊಲಿಗೆ ತರಬೇತಿ, ಸ್ವಯಂ ಉದ್ಯೋಗ ತರಬೇತಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಸ್ವಯಂ ಸೇವಾ ಸಂಘಗಳನ್ನು ಸ್ಥಾಪಿಸಿಕೊಂಡು ಬಂದಿದೆ. ಇದರ ವ್ಯಾಪ್ತಿ ವಿಸ್ತರಿಸಿಕೊಂಡು ಮಂಡ್ಯ ಜಿಲ್ಲೆ ಸೇರಿದಂತೆ ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಯ ವಿವಿಧ ಕಡೆ ಇದರ ಶಾಖೆಯಿದ್ದು, ಗ್ರಾಮೀಣ ಪ್ರದೇಶದ ಆರೋಗ್ಯ, ಶಿಕ್ಷಣ ಹೀಗೆ ವಿವಿಧ ಸೇವೆಯನ್ನು ಮಾಡತೊಡಗಿದೆ.ನಾಲ್ಕು ಜಿಲ್ಲೆಗೂ ಸೇರಿದ ಬಿಷಪ್ ನಿವಾಸ ಹಾಗೂ ಪಾಲನಾ ಕೇಂದ್ರ ಕಾಳೇನಹಳ್ಳಿಯಲ್ಲಿದ್ದು, ವಿವಿಧ ಜಿಲ್ಲೆ­ಗಳಲ್ಲಿ ಸಮಾಜಸೇವೆಯನ್ನು ನಿರ್ವಹಿಸಿಕೊಂಡು ಬರುತ್ತಿದೆ.ಹೀಗೆ ಬನ್ನಿ

ಕಾಳೇನಹಳ್ಳಿ ಗ್ರಾಮವು ಬೆಂಗಳೂರು- ಮೈಸೂರು ಹೆದ್ದಾರಿ ಪಕ್ಕದಲ್ಲಿದ್ದು, ಮಂಡ್ಯದಿಂದ ೮ ಕಿ.ಮೀ.ದೂರದಲ್ಲಿದೆ. ವಾಹನದಲ್ಲಿ ಮೈಸೂರಿಗೆ ಹೋಗುವಾಗ ಬಲಭಾಗದಲ್ಲಿ ಈ ಚರ್ಚ್‌ ನೋಡಬಹುದು.

ಪ್ರತಿಕ್ರಿಯಿಸಿ (+)