ಮಂಗಳವಾರ, ಜನವರಿ 28, 2020
19 °C
ಶಾಸಕ ರಮೇಶ್‌ಕುಮಾರ್‌ ವಿರುದ್ಧದ ಭೂಕಬಳಿಕೆ ಆರೋಪ

ಸರ್ವೆ ದಿಕ್ಕುತಪ್ಪಿಸಲು ಯತ್ನ: ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀನಿವಾಸಪುರ ಶಾಸಕ ಕೆ.ಆರ್‌.­ರಮೇಶ್‌ಕುಮಾರ್‌ ಅವರ ವಿರುದ್ಧದ ಅರಣ್ಯ ಜಮೀನು ಒತ್ತುವರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸ್ಥಳೀಯ ಅಧಿಕಾರಿಗಳು ಪ್ರಭಾವಕ್ಕೆ ಮಣಿದು ಸರ್ವೆ ಕಾರ್ಯವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಆರೋಪಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯಾ ಗ್ರಾಮದಲ್ಲಿ ರಮೇಶ್‌ಕುಮಾರ್‌ ಹೊಂದಿರುವ 64 ಎಕರೆ ಜಮೀನಿನ ಸರ್ವೆ ಕಾರ್ಯ ಸೆ.3ರಂದು ಆರಂಭವಾಗಿತ್ತು. ಆದರೆ, ಅರಣ್ಯ ಇಲಾಖೆಯ ಬಳಿ ಮೂಲ ನಕ್ಷೆಗಳು ಇಲ್ಲ ಎಂಬ ಕಾರಣ ನೀಡಿ ಸರ್ವೆ ಸ್ಥಗಿತಗೊಳಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂಬಂಧಿಸಿದ ದಾಖಲೆಗಳನ್ನು ಒದಗಿಸುತ್ತಿಲ್ಲ ಎಂದು ಕೋಲಾರ ಜಿಲ್ಲಾಧಿಕಾರಿಯವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಬೆಳವಣಿಗೆಗಳ ಹಿಂದೆ ವ್ಯವಸ್ಥಿತ ಹುನ್ನಾರವಿದೆ ಎಂದರು.ಅಳತೆ ಸರಪಳಿ ವಿವಾದ: ‘ಗುಂಟರ್ಸ್‌ ಸರಪಳಿಯನ್ನು ಜಮೀನು ಸರ್ವೆಯಲ್ಲಿ ಬಳಸಲಾಗುತ್ತದೆ. ಈ ಸರಪಳಿಯು 100 ಕೊಂಡಿಗಳನ್ನು ಹೊಂದಿದ್ದು, 66 ಅಡಿ ಉದ್ದ ಇರುತ್ತದೆ. ಆದರೆ, ಸರಪಳಿಯ ಉದ್ದವನ್ನು 33 ಅಡಿ ಉದ್ದಕ್ಕೆ ಸೀಮಿತಗೊಳಿಸಿ ಜಮೀನಿನ ಗಡಿ ಗುರುತಿಸುವಂತೆ ರಮೇಶ್‌ಕುಮಾರ್‌ ಅವರು ಒತ್ತಡ ತಂದಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಯವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪತ್ರವನ್ನು ಪ್ರದರ್ಶಿಸಿದರು.ಮೊಕದ್ದಮೆ ದಾಖಲಿಸಲು ಆಗ್ರಹ: ‘ಶಾಸಕ ಆರ್‌.ಅಶೋಕ ಅವರು ಹಿಂದಿನ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿ­ದ್ದಾಗ ಮಾಜಿ ಮೇಯರ್‌ ಡಿ.ವೆಂಕಟೇಶ­ಮೂರ್ತಿ ಮತ್ತು ಅವರ ಪತ್ನಿ ಕೆ.ಪ್ರಭಾ ಅವರಿಗೆ ಕಾನೂನು­ಬಾಹಿರವಾಗಿ ದರಖಾಸ್ತು ಜಮೀನು ಮಂಜೂರು ಮಾಡಿರುವುದು ಬಯಲಿಗೆ ಬಂದಿದೆ. ಮೂವರ ವಿರುದ್ಧವೂ ಸರ್ಕಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು’ ಎಂದು ಹಿರೇಮಠ ಆಗ್ರಹಿಸಿದರು.‘ನಗರದ ವ್ಯಾಪ್ತಿಯಲ್ಲಿ ನಡೆದಿರುವ ಮತ್ತೊಂದು ಪ್ರಮುಖ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟ ಕೈಗೆತ್ತಿಕೊಳ್ಳಲು ಸಿದ್ಧತೆ ನಡೆದಿದೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ ಒಡೆತನದ ‘ಕೆಫೆ ಕಾಫಿ ಡೇ’ ಸೇರಿ ಹಲವು ಸಂಸ್ಥೆಗಳು ಕೃಷ್ಣರಾಜಪುರ ತಾಲ್ಲೂಕಿನಲ್ಲಿ 1.65 ಎಕರೆ ಜಮೀನು ಕಬಳಿಸಿದ ಆರೋಪ­ವಿದೆ. ಈ ಬಗ್ಗೆ  ದಾಖಲೆ ಕಲೆಹಾಕ­ಲಾಗುತ್ತಿದೆ. ಶೀಘ್ರದಲ್ಲಿ ಅವುಗಳನ್ನು ಬಹಿರಂಗಪಡಿಸಲಾಗುವುದು’ ಎಂದರು.‘ಸಾವಿರಾರು ಮರ ಕಡಿದ ವ್ಯಕ್ತಿ ಬಂಧಿಸಿ’

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ದ್ವಾರಮಕ್ಕಿ ಗ್ರಾಮದಲ್ಲಿ ಸಾವಿರಾರು ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿರುವ ಭಗವಾನ್‌ ಎಂಬ ವ್ಯಕ್ತಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಹಿರೇಮಠ ಒತ್ತಾಯಿಸಿದರು.

‘ಭಗವಾನ್‌ ಸ್ಥಳೀಯ ಶಾಸಕ ಡಿ.ಎನ್‌.ಜೀವರಾಜ್‌ ಅವರ ದೊಡ್ಡಪ್ಪನ ಮೊಮ್ಮಗ. ಶಾಸಕರ ಬೆಂಬಲದಲ್ಲಿ ಈತ ಅಲ್ಲಿನ ಅರಣ್ಯ ಪ್ರದೇಶದಲ್ಲಿದ್ದ ಬೀಟೆ, ಸಾಗುವಾನಿ, ಹೊನ್ನೆ ಮತ್ತಿತರ ಜಾತಿಯ ಸಾವಿರಾರು ಮರಗಳನ್ನು ಕಡಿದು ಸಾಗಿಸಿದ್ದಾನೆ. ಅರಣ್ಯ ಇಲಾಖೆ ಆರೋಪಿ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದರೂ, ಪ್ರಭಾವಕ್ಕೆ ಮಣಿದು ಆತನನ್ನು ಬಂಧಿಸಿಲ್ಲ’ ಎಂದು ಆರೋಪಿಸಿದರು.

ಪ್ರತಿಕ್ರಿಯಿಸಿ (+)