ಭಾನುವಾರ, ಜನವರಿ 26, 2020
31 °C

ಸವಾಲಿನ ಸರಣಿ: ದೋನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾದ ಪರಿಸ್ಥಿತಿಗೆ ಹೊಂದಿಕೊಂಡು ಆಡುವುದು ನಿಜಕ್ಕೂ ಸವಾಲಿನ ಸಂಗತಿ ಎಂದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅಭಿಪ್ರಾಯಪಟ್ಟಿದ್ದಾರೆ.ಭಾನುವಾರ ದ. ಆಫ್ರಿಕಾಕ್ಕೆ ತೆರಳುವ ಮುನ್ನ  ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೋನಿ ನಮ್ಮ ಬ್ಯಾಟ್ಸ್‌ಮನ್‌ಗಳು ಏಕದಿನ ಕ್ರಿಕೆಟ್‌ ನಲ್ಲಿ ಹೆಚ್ಚಿನ ಅನುಭವ ಹೊಂದಿದ್ದಾರೆ. ದ.ಆಫ್ರಿಕಾ ವಿರುದ್ಧ ಮೊದಲು ಏಕದಿನ ಸರಣಿಯನ್ನು ಆಡುತ್ತಿರುವುದರಿಂದ    ಟೆಸ್ಟ್ ಪಂದ್ಯಗಳಲ್ಲಿ ಆತ್ಮ ವಿಶ್ವಾಸದಿಂದ ಆಡುವುದಕ್ಕೆ ಸಾಧ್ಯವಾಗಲಿದೆ ಎಂದಿದ್ದಾರೆ.ವಿದೇಶಗಳಲ್ಲಿ ಆಡುವುದು ಯಾವಾ ಗಲೂ  ಸವಾಲಿನ ಸಂಗತಿ. ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಆಡುವುದು ನಮಗೆಲ್ಲರಿಗೂ ಹೊಸ ಸವಾಲು ಎಂದು ತಿಳಿಸಿದರು.ಟೆಸ್ಟ್‌ ತಂಡದಲ್ಲಿ ಮೂರನೇ ಆರಂಭಿಕನ ಸ್ಥಾನವನ್ನು ತುಂಬಬಲ್ಲ ಆಟಗಾರ ಯಾರೆಂಬ ಪ್ರಶ್ನೆಗೆ, ಗೌತಮ್‌ ಗಂಭೀರ್ ಎಂದು ಹೇಳುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು. ಏಕೆಂದರೆ ಟೆಸ್ಟ್‌  ತಂಡಕ್ಕೆ ಆಯ್ಕೆಯಾಗಿರುವ 17 ಸದಸ್ಯರ ತಂಡದಲ್ಲಿ ಗಂಭೀರ್ ಹೆಸರಿಲ್ಲ.ಟೆಸ್ಟ್‌ನಲ್ಲಿ ಸಚಿನ್‌ ನಿವೃತ್ತಿಯಿಂದ ತೆರವಾಗಿರುವ ನಾಲ್ಕನೇ ಕ್ರಮಾಂಕದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದಕ್ಕೆ ಉತ್ತರಿಸಿದ ದೋನಿ. ಯಾರೂ ಯಾರ ಸ್ಥಾನವನ್ನೂ ತುಂಬಲು ಸಾಧ್ಯವಿಲ್ಲ ಇದನ್ನು ಅಲ್ಲಿ ಹೋದ ನಂತರ ನಿರ್ಧರಿಸುತ್ತೇವೆ ಎಂದರು. ಅಂತಿಮ ಓವರ್‌ಗಳಲ್ಲಿ ಭಾರತದ ಬೌಲರ್‌ಗಳು ಹೆಚ್ಚಿನ ರನ್‌ ಬಿಟ್ಟುಕೊಡುತ್ತಿರುವುದು ಭಾರತಕ್ಕೆ ತಲೆ ನೋವಾಗಿದ್ದು, ಕಳೆದ ನಾಲ್ಕೈದು ಪಂದ್ಯಗಳಲ್ಲಿ ಬೌಲಿಂಗ್‌ನಲ್ಲಿ ಸಾಕಷ್ಟು ಸುಧಾರಣೆಕಂಡಿದೆ.ಮತ್ತಷ್ಟು  ಸುಧಾರಣೆಯ ಅಗತ್ಯವಿದ್ದು, ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಏಕದಿನ ರ್‍ಯಾಂಕಿಂಗ್‌ನಲ್ಲಿ ನಾವು ಅಗ್ರಸ್ಥಾನದಲ್ಲಿದ್ದರೆ, ಟೆಸ್ಟ್‌ನಲ್ಲಿ ದ.ಆಫ್ರಿಕಾ ತಂಡದವರು ಅಗ್ರ ಸ್ಥಾನದಲ್ಲಿದ್ದಾರೆ. ಅವರ ತಂಡ ಉತ್ತಮವಾಗಿದ್ದು, ಸಮತೋಲನದಿಂದ ಕೂಡಿದೆ. ಹಾಗೂ ಪ್ರತಿಭಾವಂತ ಆಲ್‌ರೌಂಡರ್‌ಗಳು ಆ ತಂಡದಲ್ಲಿದ್ದಾರೆ. ಹೀಗಾಗಿ ಸರಣಿಯು ರೋಚಕತೆಯ ಜೊತೆಗೆ  ಕುತೂಹಲದಾಯಕವಾಗಿರುತ್ತದೆ ಎಂದಿದ್ದಾರೆ.ಪಂದ್ಯದಲ್ಲಿ ಐದನೇ ವೇಗಿಯನ್ನು ಕಣಕ್ಕಿಳಿಸುವ ಬಗ್ಗೆ ಅಲ್ಲಿ ಹೋದ ನಂತರ ನಿರ್ಧರಿಸುತ್ತೇವೆ. ನಮ್ಮ ಬ್ಯಾಟಿಂಗ್‌ ಸಾಮರ್ಥ್ಯ ಹೇಗಿದೆ ಎಂಬುದರ ಆಧಾರದ ಮೇಲೆ ನಾಲ್ವರನ್ನು ಕಣಕ್ಕಿಳಿಸಬೇಕೊ ಇಲ್ಲ ಐವರನ್ನು ಕಣಕ್ಕಿಳಿಸಬೇಕೊ ಎಂಬುದು ನಿರ್ಧಾರವಾಗಲಿದೆ ಎಂದು ತಿಳಿಸಿದರು.ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮೊದಲ ಏಕದಿನ ಪಂದ್ಯ ಡಿಸೆಂಬರ್‌  5 ರಂದು ಜೊಹನ್ಸ್‌ಬರ್ಗ್‌ನಲ್ಲಿ ನಡೆಯಲಿದೆ.

ಪ್ರತಿಕ್ರಿಯಿಸಿ (+)