ಸೋಮವಾರ, ಮೇ 23, 2022
30 °C

`ಸಹಕಾರದಿಂದ ಸಮಸ್ಯೆ ಪರಿಹರಿಸಿಕೊಳ್ಳಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: `ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ, ವೈಯಕ್ತಿಕ ಸಮಸ್ಯೆಯನ್ನು ಸಮುದಾಯದ ಸಮಸ್ಯೆ ಅಂದುಕೊಂಡಾಗ ಸಂಘರ್ಷಕ್ಕೆ ಕಾರಣವಾಗುತ್ತದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದ್ದು, ಅವುಗಳನ್ನು ಪರಸ್ಪರ ಸಹಕಾರದಿಂದ ಬಗೆಹರಿಸಿಕೊಳ್ಳಬೇಕು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಹೇಳಿದರು.ಪಟ್ಟಣಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಸಮಾಜದಲ್ಲಿ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಕಂಕಣಬದ್ಧವಾಗಿದ್ದು, ಸಾರ್ವಜನಿಕರು ಸಮಸ್ಯೆಗಳನ್ನು ನಿಷ್ಠುರವಾಗಿ ಹೇಳಿಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು, ಸಂಚಾರ ಸಮಸ್ಯೆ, ಅಕ್ರಮ ಚಟುವಟಿಕೆಗಳನ್ನು ತಡೆಯಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ವಿ.ಕೆಂಚಳ್ಳೇರ, ತಾಲ್ಲೂಕಿನಲ್ಲಿ ಪ್ರತಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ವಿಪರೀತವಾಗಿದೆ. ಅಬಕಾರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಹಳ್ಳಿಗಳಲ್ಲಿ ಅಹಿತಕರ ಘಟನೆಗಳು ನಡೆಯಲು ಮದ್ಯ ಮಾರಾಟ ಕಾರಣವಾಗುತ್ತಿದೆ.ಅನೇಕ ಕುಟುಂಬಗಳು ಬೀದಿಗೆ ಬಂದಿದ್ದು, ನೆಮ್ಮದಿ ಇಲ್ಲದ ಬದುಕು ಸಾಗಿಸುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಚನ್ನಳ್ಳಿಯ ಚಂದ್ರಪ್ಪ ಲಮಾಣಿ, ಚಂದ್ರಪ್ಪ ನೂಲಗೇರಿ ಹಾಗೂ ಇತರರು ದನಿಗೂಡಿಸಿದರು.ಶಿರಗಂಬಿ ಗ್ರಾಮದ ದೇವಸ್ಥಾನದಲ್ಲಿ ಇಸ್ಪೀಟ್ ಆಡುತ್ತಾರೆ ಎಂದು ರೈತರೊಬ್ಬರು ದೂರಿದರು. ಪಟ್ಟಣದಲ್ಲಿ ಕೆಲವರು ಅಹಿತಕರ ಘಟನೆ ನಡೆಯಲು ಕಾರಣರಾಗುತ್ತಿದ್ದಾರೆ ಎಂದು ಪ್ರಭು ಮಳವಳ್ಳಿ ದೂರಿದರು.ಡಿವೈಎಸ್‌ಪಿ ಜಯಪ್ರಕಾಶ ಅಕ್ಕರಕಿ, ಸಿಪಿಐ ವಿಜಯ ಮುರಗುಂಡಿ, ಪಿಎಸ್‌ಐ ಜಿ.ಟಿ.ಶ್ರೀಶೈಲಮೂರ್ತಿ, ರಟ್ಟೀಹಳ್ಳಿ ಪಿಎಸ್‌ಐ ಬಸವರಾಜ ಕಲ್ಲಮ್ಮನವರ, ಅಂಜುಮನ್ ಅಧ್ಯಕ್ಷ ಅಯೂಬ್‌ಖಾನ್ ಪಠಾಣ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಗಂಗಪ್ಪನವರ, ಶಿವಲಿಂಗಪ್ಪ ಕುಬಸದ, ಹೂವನಗೌಡ ಮಳವಳ್ಳಿ, ಗಂಗನಗೌಡ ಮುದಿಗೌಡ್ರ, ಮಾದೇವಪ್ಪ ಮಾಳಮ್ಮನವರ, ಗಂಗಾಧರ ಬೋಗೇರ ಸೇರಿದಂತೆ ಮುಸ್ಲಿಂ, ದಲಿತ ಹಾಗೂ ರೈತ ಸಂಘಟನೆಗಳ ಮೊದಲಾದವರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.