ಶನಿವಾರ, ಮೇ 8, 2021
18 °C

ಸಹಕಾರಿ ಸಂಘಗಳು ನೈತಿಕತೆ ಅಳವಡಿಸಿಕೊಳ್ಳಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಸತಿ ಸಹಕಾರ ಸಂಘಗಳ ಬಗ್ಗೆ ಸರ್ಕಾರ ಸಂಶಯ ಪಡುತ್ತಿದೆ. ವಸತಿ ಬಡಾವಣೆ ನಿರ್ಮಾಣಕ್ಕೆ ಸಹಕಾರಿ ಸಂಘಗಳೇ ನೇರವಾಗಿ ಭೂಮಿ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಬೇಕು~ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಸಲಹೆ ನೀಡಿದರು.ನಗರದ ಶಂಕರಪುರಂ ಮರಾಠ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ನಡೆದ ದಿ ಜಯನಗರ ಕೋ- ಆಪರೇಟಿವ್ ಹೌಸಿಂಗ್ ಸೊಸೈಟಿಯ ವಜ್ರಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.`ಸಹಕಾರಿ ಸಂಘಗಳು ಆಡಳಿತದಲ್ಲಿ ಮೌಲ್ಯ ಹಾಗೂ ನೈತಿಕತೆ ಅಳವಡಿಸಿಕೊಳ್ಳಬೇಕು. ಸಹಕಾರಿ ಸಂಘಗಳ ಕೆಲಸ ಕೇವಲ ಸೈಟ್ ಹಂಚುವುದಲ್ಲ. ಸಂಘಗಳು ಸುಂದರ ಸಾಂಸ್ಕೃತಿಕ ಹಿನ್ನೆಲೆ ಇರುವ ಮನೆ ನಿರ್ಮಿಸಿಕೊಡಬೇಕು~ ಎಂದರು.`ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಹತಾಶೆ ಬೇಡ. ನಮ್ಮಲ್ಲಿ ದಕ್ಷ ಅಧಿಕಾರಿಗಳು ಇದ್ದಾರೆ. ಎಲ್ಲೋ ಒಂದು ಕಡೆ ಕೊಂಡಿ ತಪ್ಪಿಹೋಗಿದೆ. ಅದನ್ನು ಸರಿಪಡಿಸುವ ಕೆಲಸ ಆಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು~ ಎಂದರು.ರಾಜ್ಯ ಗೃಹಮಂಡಳಿ ಹಾಗೂ ರಾಜ್ಯ ಸಹಕಾರ ಮಹಾಮಂಡಳಿಯ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, `ರಾಜ್ಯದಲ್ಲಿ 2500 ವಸತಿ ಸಹಕಾರಿ ಸಂಘಗಳು ಇವೆ. ಅದರಲ್ಲಿ 1200 ಸಂಘಗಳು ಚೆನ್ನಾಗಿ ಕೆಲಸ ಮಾಡುತ್ತಿವೆ. ಉಳಿದ ವಸತಿ ಸಹಕಾರಿ ಸಂಘಗಳ ಸ್ಥಿತಿ ಕಠಿಣವಾಗಿದೆ. ಸಂಘಗಳು ಪಾರದರ್ಶಕವಾಗಿ ನಿವೇಶನ ಹಂಚಲು ಕೆಲವು ತೊಡಕುಗಳಿವೆ. ಸಂಘಗಳೇ ಜಾಗ ಖರೀದಿ ಮಾಡಿ ನಿವೇಶನ ಹಂಚುವಂತಹ ಕಾನೂನು ಜಾರಿಗೆ ತರಬೇಕು~ ಎಂದರು.ಸಿಆರ್‌ಪಿಎಫ್‌ನ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ. ಅರ್ಕೇಶ್ ಸ್ಮರಣಸಂಚಿಕೆ ಬಿಡುಗಡೆ ಮಾಡಿದರು. ದಿ ಜಯನಗರ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ಅಧ್ಯಕ್ಷ ಬಿ.ಆರ್. ವಾಸುದೇವ್ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಸಚಿವ ಎಚ್.ಎಂ. ರೇವಣ್ಣ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ, ರಾಜ್ಯ ಸಹಕಾರ ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ಜಯದೇವ್, ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ (ಗೃಹ ಹಾಗೂ ಇತರೆ) ಜಿ.ಎಸ್. ರಮಣ ರೆಡ್ಡಿ, ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ (ಬಳಕೆ ಮತ್ತು ಮಾರಾಟ) ಕೆ.ಎಚ್. ತಿಮ್ಮಯ್ಯ, ಸಹಕಾರ ಸಂಘಗಳ ನಿವೃತ್ತ ಅಧಿಕಾರಿ ಎಚ್.ಡಿ. ರಮೇಶ್, ಬೆಂಗಳೂರು ಪ್ರಾಂತ್ಯ ಸಹಕಾರ ಸಂಘಗಳ ಜಂಟಿ ನಿರ್ದೇಶಕ ಸಿ.ಎಸ್.ವೀರೇಶ್, ಸಹಕಾರ ಸಂಘಗಳ ಉಪನಿಬಂಧಕ ಎಂ.ಡಿ. ನರಸಿಂಹಮೂರ್ತಿ, ದಿ ಜಯನಗರ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ಕಾರ್ಯದರ್ಶಿ ಬಿ.ವಿ. ಗಂಗಾಧರಮೂರ್ತಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.